ಪ್ಯಾಟ್ರಿಕ್ ಮೊರಾಸ್, ಸೊಬೀನಾ ಮೊತೇಶ್ ಕಾಂಬ್ರೆಕರ್, ಜೋಯಲ್ ಪಿರೇರಾ
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿಗೆ ನಗರದ ಎಂ.ಪ್ಯಾಟ್ರಿಕ್ ಮೊರಾಸ್, ಕಲಾ ಪ್ರಶಸ್ತಿಗೆ ಜೊಯಲ್ ಪಿರೇರಾ ಹಾಗೂ ಜಾನಪದ ಪ್ರಶಸ್ತಿಗೆ ಹಳಿಯಾಳದ ಸೊಬೀನಾ ಮೊತೇಶ್ ಕಾಂಬ್ರೆಕರ್ ಅವರನ್ನು ಆಯ್ಕೆ ಮಾಡಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ‘2024ನೇ ಸಾಲಿನ ಕೊಂಕಣಿ ಪುಸ್ತಕ ಪುರಸ್ಕಾರದ ಕವಿತೆ ವಿಭಾಗದಲ್ಲಿ ದೇರೇಬೈಲ್‌ನ ಫೆಲ್ಸಿ ಲೋಬೊ ಅವರ ‘ಪಾಲ್ವಾ ಪೊಂತ್’ ಕವನ ಸಂಕಲನ ಹಾಗೂ ಲೇಖನ ವಿಭಾಗದಲ್ಲಿ ಕಾರ್ಕಳದ ವಲೇರಿಯನ್ ಸಿಕ್ವೆರಾ ಅವರ ‘ಶೆತಾಂ ಭಾಟಾಂ ತೊಟಾಂನಿ’ ಕೃತಿ ಆಯ್ಕೆಯಾಗಿದೆ. ಗೌರವ ಪ್ರಶಸ್ತಿಗೆ ಪಾತ್ರರಾದವರಿಗೆ ₹ 50 ಸಾವಿರ ಹಾಗೂ ಪುಸ್ತಕ ಪುರಸ್ಕಾರಕ್ಕೆ ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುತ್ತದೆ’ ಎಂದು ತಿಳಿಸಿದರು.
’ಇದೇ 23ರಂದು ಸಂಜೆ 5ರಿಂದ ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಕೊಂಕಣ್ ಭವನದಲ್ಲಿ ಮೈಸೂರಿನಲ್ಲಿ ಕೊಂಕಣಿ ಕ್ರಿಶ್ಚಿಯನ್ ಅನೋಸಿಯೇಶನ್ ಸಹಯೋಗದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಡಿ.ತಿಮ್ಮಯ್ಯ, ಸಾಹಿತಿ ವಲೇರಿಯನ್ ಡಿಸೋಜ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸುವರು. ಸಿದ್ದಿ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿಯನ್ನೂ ಏರ್ಪಡಿಸಲಾಗಿದೆ’ ಎಂದರು.
‘ಕೊಂಕಣಿ ಎಂ.ಎ ಕೋರ್ಸ್‌ಗೆ ಹಾಗೂ ಆರನೇ ತರಗತಿಯಿಂದ ಕೊಂಕಣಿಯನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಕೊಂಕಣಿ ಎಂ.ಎ ಕೋರ್ಸ್ ಪುನಶ್ಚೇತನದ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಜೊತೆ ಚರ್ಚಿಸಿದ್ದೇವೆ. ಕನಿಷ್ಠ 15 ವಿದ್ಯಾರ್ಥಿಗಳು ದಾಖಲಾದರೆ ಈ ಕೋರ್ಸ್ ಮುಂದುವರಿಸಬಹುದು ಎಂದು ಅವರು ತಿಳಿಸಿದ್ದಾರೆ. ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಕೊಂಕಣಿ ತರಗತಿ ಮುಂದುವರಿಸುವಂತೆ ಕೋರಿದ್ದೇವೆ. ಕೊಂಕಣಿ ಕಲಿಯುವವರಿಗೆ ವಿದ್ಯಾರ್ಥಿ ವೇತನ ನೀಡಿ ಹುರಿದುಂಬಿಸುತ್ತಿದ್ದೇವೆ. ತಮ್ಮ ಮಕ್ಕಳು ಶಾಲೆಗಳಲ್ಲಿ ಕೊಂಕಣಿಯನ್ನು ಆಯ್ದುಕೊಳ್ಳುವಂತೆ ಪೋಷಕರು ನೋಡಿಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕಳೆದ ಸಾಲಿನಲ್ಲಿ ಅಕಾಡೆಮಿಗೆ ಸರ್ಕಾರ ₹ 58 ಲಕ್ಷ ಅನುದಾನ ನೀಡಿತ್ತು. ಈ ಸಾಲಿನಲ್ಲಿ ಅದನ್ನು ₹ 1 ಕೋಟಿಗೆ ಹೆಚ್ಚಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದೇವೆ. ನಗರದಲ್ಲಿ ಕೊಂಕಣಿ ಭವನ ನಿರ್ಮಾಣಕ್ಕೆ ₹ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ನಿರ್ಮಾಣ ಪೂರ್ಣಗೊಂಡಿದೆ. ಎಲೆಕ್ಟ್ರಿಕಲ್ ಕೆಲಸ ಸೇರಿದಂತೆ ಅಂತಿಮ ಹಂತದ ಕೆಲಸಗಳಿಗೆ ಇನ್ನು ₹ 2.5 ಕೋಟಿ ಅನುದಾನ ಬೇಕಿದೆ. ಈ ಭವನವನ್ನು ಪೂರ್ಣಗೊಳಿಸುವುದು ನಮ್ಮ ಮಹತ್ವಾಕಾಂಕ್ಷೆಯ ಯೋಜನೆ’ ಎಂದರು.
ಮುಂಡಗೋಡದಲ್ಲಿ ಸಿದ್ದಿ ಸಮಾವೇಶ 15ರಿಂದ
‘ಮುಂಡಗೋಡಿನ ಲೊಯೊಲಾ ವಿಕಾಸ ಕೇಂದ್ರದಲ್ಲಿ ಇದೇ 15 ಮತ್ತು 16 ರಂದು ಸಿದ್ದಿ ಸಮುದಾಯದ ಸಮಾವೇಶ ಏರ್ಪಡಿಸಿದ್ದೇವೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಿದ್ದಿ ಸಮುದಾಯದವರು ತಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಇರಲಿದೆ. ಸಿದ್ದಿ ಪರಂಪರೆ, ಅವರ ಕಲೆ, ಸಂಸ್ಕೃತಿ ಹಾಗೂ ಬದುಕಿನ ಆಯಾಮಗಳು, 21ನೇ ಶತಮಾನದಲ್ಲಿ ಅವರು ಎದುರಿಸುತ್ತಿದ್ದ ಸವಾಲುಗಳ ವಿಚಾರಗೋಷ್ಠಿ ನಡೆಯಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತ, ನವೀನ್ ಕೆನ್ಯುಟ್ ಲೋಬೊ ಹಾಗೂ ಎಲ್ಯಾಸ್ ಫರ್ನಾಂಡಿಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.