ಹಲ್ಲೆ
ಮಂಗಳೂರು: ‘ನಗರ ಹೊರವಲಯದ ಕುಡುಪುವಿನಲ್ಲಿ ಯುವಕನೊಬ್ಬ ಭಾನುವಾರ ಮೃತಪಟ್ಟಿದ್ದು, ಇದಕ್ಕೆ ಗುಂಪು ಹಲ್ಲೆಯೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ. ಹಲ್ಲೆ ನಡೆಸಿದ 15 ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದರು.
ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಕುಡುಪು ತಿರುವೈಲು ಗ್ರಾಮದ ನಡುಮನೆಯ ಸಚಿನ್ ಟಿ. (26), ದೇವದಾಸ್ (50), ತಿರುವೈಲ್ ಗ್ರಾಮದ ಮಂಗಳನಗರದ ಮಂಜುನಾಥ್ (32), ನೀರುಮಾರ್ಗ ಪದಮಲೆ ಸುಬ್ರಹ್ಮಣ್ಯ ನಗರದ ಸಾಯಿದೀಪ್ (29), ಮಂಗಳನಗರ ನಿತೇಶ್ ಕುಮಾರ್ ಅಲಿಯಾಸ್ ಸಂತೋಷ್ (33), ಕುಡುಪು ಕಟ್ಟೆ ನಡುಮನೆಯ ದೀಕ್ಷಿತ್ ಕುಮಾರ್ (32), ವಾಮಂಜೂರು ದೇವರ ಪದವು ನಿವಾಸಿ ಸಂದೀಪ್ ( 23), ಕುಡುಪು ನಡುಮನೆ 9ನೇ ಅಡ್ಡರಸ್ತೆ ಬಳಿನಿವಾಸಿ ವಿವಿಯನ್ ಆಳ್ವಾರಿಸ್ (41), ಕುಡುಪುಕಟ್ಟೆಯ ಶ್ರೀದತ್ತ (32), ಕದ್ರಿ ಕೈಬಟ್ಟಲ್‌ನ ರಾಹುಲ್ (23), ಕುಲಶೇಖರ ಜ್ಯೋತಿ ನಗರದ ಪ್ರದೀಪ್ ಕುಮಾರ್ (35), ಪದವು ಗ್ರಾಮದ ಶಕ್ತಿನಗರ ಬೌಲ್ಯದ ಮನೀಷ್ ಶೆಟ್ಟಿ (21), ಕುಡುಪುಕಟ್ಟೆ, ನೆಕ್ಕರೆ ರಸ್ತೆಯ ಧನುಷ್ (31), ಕುಲಶೇಖರದ ದೀಕ್ಷಿತ್ (27), ಕುಡುಪು ದೇವಸ್ಥಾನದ ಬಳಿ ನಿವಾಸಿ ಕಿಶೋರ್ ಕುಮಾರ್ (37) ಬಂಧಿತರು. ಇನ್ನುಳಿದ ಆರೋಪಿಗಳ ಪತ್ತೆಗೂ ಕ್ರಮ ವಹಿಸಲಾಗಿದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಇಲ್ಲ’ ಎಂದು ತಿಳಿಸಿದರು.
‘ಇದೇ 27ರಂದು ಸಂಜೆ ಸುಮಾರು 5.30 ಗಂಟೆಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಯುವಕನ ಮೃತದೇಹ ಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹದಲ್ಲಿ ಗಂಭೀರ ಗಾಯಗಳು ಕಂಡುಬಂದಿರಲಿಲ್ಲ. ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದೆವು. ನಗರದ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ತಜ್ಞವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಪ್ರಾಥಮಿಕ ವರದಿ ನೀಡಿದ್ದಾರೆ. ಅದರ ಪ್ರಕಾರ, ಮೃತ ಯುವಕನ ಬೆನ್ನಿನ ಭಾಗದಲ್ಲಿ ಬಲವಾದ ಹೊಡೆತದ ಬಹಳಷ್ಟು ಗಾಯಗಳಾಗಿದ್ದು, ಅದರಿಂದ ಉಂಟಾದ ರಕ್ತಸ್ರಾವ, ಆಘಾತ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದು ದೃಢಪಟ್ಟಿದೆ’ ಎಂದು ಅವರು ವಿವರಿಸಿದರು.
‘ಪೊಲೀಸರ ಇನ್ನೊಂದು ತಂಡವು ಕ್ರಿಕೆಟ್ ಪಂದ್ಯದ ವೇಳೆ ನಡೆದ ಬೆಳವಣಿಗೆಗಳ ಮಾಹಿತಿ ಕಲೆಹಾಕಿದೆ. ಅದರ ಪ್ರಕಾರ ಇದು ಗುಂಪು ಹಲ್ಲೆಯಿಂದ ಆಗಿರುವ ಸಾವು ಎಂದು ಖಚಿತ ಪಟ್ಟಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾ
ವಳಿ ನಡೆಯುತ್ತಿತ್ತು. ಆ ಸಮಯದಲ್ಲಿ ಯುವಕ ಅಲ್ಲಿಗೆ ಹೋಗಿದ್ದ. ಅಲ್ಲಿ ಕ್ರಿಕೆಟ್ ಆಡುತ್ತಿದ್ದವರಿಗೂ ಆತನಿಗೂ ಜಗಳ ನಡೆದಿತ್ತು. ಆರೋಪಿ ಸಚಿನ್ ಆತನಿಗೆ ಹಲ್ಲೆ ನಡೆಸಿದ್ದ. ನಂತರ ಅಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಸೇರಿ ಆತನ ಮೇಲೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಸ್ಥಳದಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ ಕೇಳದೇ ಹಲ್ಲೆ ನಡೆಸಿದ್ದರು. ಆತ ಸ್ಥಳದಲ್ಲೇ
ಕೊನೆಯುಸಿರೆಳೆದಿದ್ದ’ ಎಂದರು.
‘ಮಾಜಿ ಕಾರ್ಪೊರೇಟರ್ ಪತಿ ಭಾಗಿ?’
‘ಈ ಗಲಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ರವೀಂದ್ರ ಅವರು ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಕಮಿಷನರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಯುವಕ ಏಕಾಏಕಿ ಸ್ಥಳಕ್ಕೆ ಹೋಗಿದ್ದ. ಆತ ಯಾವ ತಂಡದ ಪರವಾಗಿಯೂ ಕ್ರಿಕೆಟ್ ಆಡಿರಲಿಲ್ಲ. ಆತ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ’ ಎಂದರು.
’ಯುವಕ ಭಾರತ ವಿರೋಧಿ ಘೋಷಣೆ ಕೂಗಿದ್ದ’ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಕಮಿಷನರ್, ‘ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದೆ’ ಎಂದರು.
‘ಗುಂಪು ಹಲ್ಲೆ– ಮೊದಲ ಪ್ರಕರಣ’
ಕುಲಶೇಖರ ಕೇಶವ ಕಂಪೌಂಡ್‌ನ ನಿವಾಸಿ ದೀಪಕ್ ಕುಮಾರ್ (33) ಈ ಕೃತ್ಯದ ಕುರಿತು ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103(2) (ಐದಕ್ಕಿಂತ ಹೆಚ್ಚು ಜನರ ಗುಂಪು ಸೇರಿ ನಡೆಸುವ ಹಲ್ಲೆ) , 115 (2) (ಸ್ವಯಂಪ್ರೇರಿತ ಹಲ್ಲೆ), ಸೆಕ್ಷನ್ 189(2) (ಅಕ್ರಮ ಕೂಟ), ಸೆಕ್ಷನ್ 190 (ಸಮಾನ ಉದ್ದೇಶದಿಂದ ಕೂಟರಚನೆ), ಸೆಕ್ಷನ್ 191(1) (ಗುಂಪು ರಚಿಸಿಕೊಂಡು ಗಲಭೆ), ಸೆಕ್ಷನ್ 191(3) (ಗುಂಪು ರಚಿಸಿಕೊಂಡು ಶಸ್ತ್ರ ಬಳಸಿ ಗಲಭೆ) , ಸೆಕ್ಷನ್ 240 (ಅಪರಾಧ ಕೃತ್ಯದ ಕುರಿತು ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಬಿಎನ್‌ಎಸ್‌ನಲ್ಲಿ ಗುಂಪು ಹಲ್ಲೆಗೆ ಪ್ರತ್ಯೇಕವಾದ ಸೆಕ್ಷನ್ 103(2) ಅಳವಡಿಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಸೆಕ್ಷನ್ ಅಡಿ ದಾಖಲಾದ ಮೊದಲ ಪ್ರಕರಣವಿದು. ಬಹುಶಃ ರಾಜ್ಯದಲ್ಲೂ ಈ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಇದೇ ಮೊದಲು ಇರಬಹುದು’ ಎಂದು ಕಮಿಷನರ್ ತಿಳಿಸಿದರು.
ಕೊಲೆಯಾದವ ವಯನಾಡ್‌ನ ಅಶ್ರಫ್
ಮಂಗಳೂರಿನಲ್ಲಿ ಸಾಮೂಹಿಕ ಹಲ್ಲೆಗೊಳಗಾಗಿ ಸಾವಿಗೀಡಾದ ಯುವಕ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಎಂದು ಅಲ್ಲಿನ ಪೊಲೀಸರು ಖಚಿತಪಡಿಸಿದ್ದಾರೆ.
‘ಪುಲ್ಪಳ್ಳಿಯ ಸಾಂದೀಪನಿ ಕಾಲೊನಿಯ ಮೂಚಿಕ್ಕಾರನ್ ಎಂಬಲ್ಲಿಯ ಕುಂಞಾಯಿ ಅವರ ಮಗ ಅಶ್ರಫ್ ಕೊಲೆಯಾದ ವ್ಯಕ್ತಿ. ಮಲಪ್ಪುರಂ ಜಿಲ್ಲೆಯವರಾದ ಇವರು ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದಿದ್ದರು. ತಂದೆ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇರುವ ಅಶ್ರಫ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ನಂತರ ಊರು ಬಿಟ್ಟಿದ್ದರು’ ಎಂದು ವಯನಾಡ್ ವಿಶೇಷ ಪೊಲೀಸ್ ದಳದ ರೆಜಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಂಗಳೂರಿನಲ್ಲಿ ಚಿಂದಿ ಆಯ್ದು ಬದುಕುತ್ತಿದ್ದ ಅಶ್ರಫ್ ರಾತ್ರಿ ವೇಳೆ ಅಂಗಡಿಗಳ ಮುಂದೆ ಮಲಗುತ್ತಿದ್ದರು. ಈಚೆಗೆ ಊರಿಗೆ ಬಂದಿದ್ದ ಅವರು ಹಬ್ಬ ಮುಗಿಸಿ ವಾಪಸಾಗಿದ್ದರು. ಅವರು ಮಾನಸಿಕ ಅಸ್ವಸ್ಥ ಎಂದು ಕುಟುಂಬದವರು ತಿಳಿಸಿದ್ದಾರೆ’ ಎಂದು ರೆಜಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.