ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಸ್‌ಗಳಲ್ಲಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಮಾತ್ರವೇ ಆದ್ಯತೆ ನೀಡಿದ ವಿಚಾರವಾಗಿ ಆಕ್ರೋಶಗೊಂಡ ಇತರೆ ಪ್ರಯಾಣಿಕರು ಬಸ್ ನಿಲ್ದಾಣದ ಬಳಿ ಬ್ಯಾರಿಕೇಡ್ ಅಡ್ಡ ಇರಿಸಿ ಬಸ್‌ಗಳ ಸಂಚಾರಕ್ಕೆ ತಡೆ ಒಡ್ಡಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುವ ಬಸ್‌ಗಳಲ್ಲಿ ಸಕಲೇಶಪುರ, ಹಾಸನ, ನಂಜನಗೂಡು, ಮಡಿಕೇರಿ, ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡದ ಕಾರಣ ಈ ಬಗ್ಗೆ ಅವಕಾಶ ಸಿಗದ ಹಲವು ಪ್ರಯಾಣಿಕರು ಬಸ್ ಚಾಲಕ, ನಿರ್ವಾಹಕರೊಡನೆ ವಾಗ್ವಾದ ನಡೆಸಿದ್ದು, ಆದರೂ ಅವಕಾಶ ನೀಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪ್ರಯಾಣಿಕರು ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಗೆ ಬರುವ ರಸ್ತೆಗೆ ಸಮೀಪದಲ್ಲೇ ಇದ್ದ ಬ್ಯಾರಿಕೇಡ್ ಅಡ್ಡ ಇರಿಸಿದ್ದಾರೆ. ಆದಿ ಸುಬ್ರಹ್ಮಣ್ಯ ಕಡೆಗೆ ತೆರಳುವ ಸ್ಥಳದಲ್ಲೂ ಬ್ಯಾರಿಕೇಡ್ ಅಡ್ಡ ಇರಿಸಿದ್ದರು. ಪರಿಣಾಮ ಸ್ಥಳೀಯ ಹಾಗೂ ದೂರದ ಊರುಗಳಿಗೆ ತೆರಳುವ ಬಸ್‌ಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಇದರಿಂದ ಬಸ್ ನಿಲ್ದಾಣ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಒಂದು ಹಂತದಲ್ಲಿ ಮಾತಿನ ಚಕಮಕಿಯೂ ನಡೆದಿದೆ.
ಈ ವೇಳೆ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯ ಪೊಲೀಸರು ರಸ್ತೆಗೆ ಇರಿಸಿದ ಬ್ಯಾರಿಕೇಡ್ ತೆರವು ಮಾಡಿದರು. ಎಸ್‌ಐ ಕಾರ್ತಿಕ್ ಅವರು ಪ್ರಯಾಣಿಕರನ್ನು ಸಮಾಧಾನ ಪಡಿಸಿದರು.ಬಸ್ ನಿರ್ವಹಕರಿಗೆ ಬೇರೆ ಕಡೆಯ ಪ್ರಯಣಿಕರನ್ನೂ ಪ್ರಯಣಿಸಲು ಅವಕಾಶ ನೀಡುವಂತೆ ವಿನಂತಿಸಿದರು. ಅಂತಿಮವಾಗಿ ಇತರೆ ಪ್ರಯಾಣಿಕರಿಗೂ ಬೆಂಗಳೂರು ಬಸ್‌ನಲ್ಲೇ ಸಂಚರಿಸಲು ಅವಕಾಶ ನೀಡಿ ಸಮಸ್ಯೆ ಪರಿಹರಿಸಲಾಯಿತು.
ಯಾತ್ರಾರ್ತಿಗಳು ಬ್ಯಾರಿಕೇಡ್ ಅಡ್ಡರಿಸಿ ಆಕ್ರೋಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.