
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ವೇಳೆ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತ ಬುಧವಾರ ನೆರವೇರಿತು.
ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನ ಗೂಟ ಪೂಜಾ ಮುಹೂರ್ತವನ್ನು ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ನೆರವೇರಿಸಿದರು.
ಬ್ರಹ್ಮರಥಕ್ಕೆ ಅಳವಡಿಸುವ ಗೂಟ, ಪಂಚಮಿ ರಥದ ಗೂಟಗಳಿಗೆ ಪೂಜೆ ನೆರವೇರಿಸಿದ ನಂತರ ಪುರೋಹಿತರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಸಮುದಾಯದ ಗುರಿಕಾರರಿಗೆ ರಥ ಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯ ನೀಡಿದರು.
ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಅಜಿತ್ ಕುಮಾರ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಯುತ್ತ ಗೌಡ ಬಳ್ಪ, ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಹೆಬ್ಬಾರ್ ಪ್ರಸನ್ನ ಭಟ್, ಮಲೆಕುಡಿಯ ಯುವಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.