ADVERTISEMENT

ಕುಕ್ಕೆ ಸುಬ್ರಹ್ಮಣ್ಯನಿಗೆ ಭಕ್ತಿ ಸಂಭ್ರಮದ ಕಿರುಷಷ್ಠಿ ರಥೋತ್ಸವ 

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:01 IST
Last Updated 27 ಡಿಸೆಂಬರ್ 2025, 7:01 IST
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಕಿರುಷಷ್ಠಿ ರಥೋತ್ಸವ ಶುಕ್ರವಾರ ರಾತ್ರಿ ನಡೆಯಿತು
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಕಿರುಷಷ್ಠಿ ರಥೋತ್ಸವ ಶುಕ್ರವಾರ ರಾತ್ರಿ ನಡೆಯಿತು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿಯ ದಿನವಾದ ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಸಡಗರದಿಂದ ನೆರವೇರಿತು. ತಳಿರು, ತೋರಣ, ಸೀಯಾಳ, ಅಡಿಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ದೇವರ ಉತ್ಸವ ನೆರವೇರಿತು. ರಥಾರೋಹಣದ ಬಳಿಕ ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯ ಅವರು ದೇವರಿಗೆ ಪೂಜೆ ನೆರವೇರಿಸಿದರು.

ರಥೋತ್ಸವದ ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಆಕರ್ಷಕ ಸುಡುಮದ್ದುಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ರಥೋತ್ಸವದ ಬಳಿಕ ನಡೆದ ಒಳಾಂಗಣ ಉತ್ಸವದಲ್ಲಿ ಸಂಗೀತಮಯ ಉತ್ಸವದ ಸುತ್ತುಗಳು ನೆರವೇರಿದವು. ತಮಿಳುನಾಡು, ಕೇರಳ, ಮೈಸೂರು, ಶ್ರೀರಂಗಪಟ್ಟಣದ ಕಲಾವಿದರಿಂದ ಸ್ಯಾಕ್ಸೊಪೋನ್, ನಾದಸ್ವರ, ತವಿಲ್, ಬ್ಯಾಂಡ್ ಮೊದಲಾದ ಸಂಗೀತ ವಾದ್ಯಗಳ ಉತ್ಸವ ನಡೆಯಿತು. ಕೇರಳ ಶೈಲಿಯ ಚೆಂಡೆ ವಾದನವೂ ಇತ್ತು. ಆರಂಭದಲ್ಲಿ ವಿಶೇಷವಾಗಿ ದೇವರ ಬೆಳ್ಳಿ ರಥೋತ್ಸವ ನೆರವೇರಿತು.

ADVERTISEMENT

ಕಿರುಷಷ್ಠಿ ಉತ್ಸವದ ಸಂದರ್ಭ ದೇವರಿಗೆ ಅವಳಿ ಉತ್ಸವ ನಡೆಯುವುದು ವಿಶೇಷ. ಆರಂಭದಲ್ಲಿ ಕಿರುಷಷ್ಠಿ ರಥೋತ್ಸವದ ಬಳಿಕ ವಿವಿಧ ಸಂಗೀತ ಸುತ್ತುಗಳು ನೆರವೇರಿದವು. ಬಳಿಕ ದೇವರ ರಾತ್ರಿ ಮಹಾಪೂಜೆ, ಶ್ರೀದೇವರ ಬಂಡಿ ಮತ್ತು ಪಾಲಕಿ ಉತ್ಸವ, ಸಂಗೀತ ಸುತ್ತುಗಳು ನೆರವೇರಿದವು. ಒಳಾಂಗಣದಲ್ಲಿ ದೇವರಿಗೆ ಮಂಟಪ ಪೂಜೆ ನಡೆಯಿತು.

ಬಾರ್ಕೂರು ಮಹಾ ಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಸ್ವಾಮೀಜಿ, ಶಾಸಕಿ ಭಾಗೀರಥಿ ಮುರುಳ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರಾಜಗುರು ದ್ವಾರಕಾನಾಥ್ ಗುರೂಜಿ, ರವಿಶಂಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಎಸ್.ಜೆ.ವೈ.ರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ ನೆಕ್ರಾಜೆ, ಅಜಿತ್ ಪಾಲೇರಿ, ಡಾ.ರಘು, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಸೌಮ್ಯ ಭರತ್, ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್ ಎಂ.ಡಿ., ಅಚ್ಯುತ ಗೌಡ, ದೇವಳದ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್., ದೇವಳದ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.