ADVERTISEMENT

ಕುವೈತ್‌ನಿಂದ ಹೊರಟ 19 ಮಂದಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 5:41 IST
Last Updated 18 ಜುಲೈ 2019, 5:41 IST
ಕುವೈತ್‌ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ ಮಂಗಳೂರಿನತ್ತ ಹೊರಟ ಕಾರ್ಮಿಕರನ್ನು ಎಂಜಿನಿಯರ್‌ ಮೋಹನದಾಸ್‌ ಕಾಮತ್‌ ಮತ್ತು ಸ್ನೇಹಿತರು ಬೀಳ್ಕೊಟ್ಟರು.
ಕುವೈತ್‌ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ ಮಂಗಳೂರಿನತ್ತ ಹೊರಟ ಕಾರ್ಮಿಕರನ್ನು ಎಂಜಿನಿಯರ್‌ ಮೋಹನದಾಸ್‌ ಕಾಮತ್‌ ಮತ್ತು ಸ್ನೇಹಿತರು ಬೀಳ್ಕೊಟ್ಟರು.   

ಮಂಗಳೂರು: ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ಸಂತ್ರಸ್ತರಾಗಿದ್ದವರ ಪೈಕಿ ಮಂಗಳೂರಿನ 19 ಮಂದಿ ಬುಧವಾರ ರಾತ್ರಿ ಅಲ್ಲಿಂದ ವಾಪಸು ಹೊರಟಿದ್ದು, ಗುರುವಾರ ಸಂಜೆಯ ವೇಳೆ ತವರು ಸೇರಲಿದ್ದಾರೆ.

ಈ 19 ಮಂದಿಗೆ ಕುವೈತ್‌ನಿಂದ ಮುಂಬೈಗೆ ವಿಮಾನ ಟಿಕೆಟ್‌ ಮತ್ತು ಅಲ್ಲಿಂದ ಮಂಗಳೂರಿಗೆ ಬಸ್‌ ಟಿಕೆಟ್‌ ಅನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್‌ ವ್ಯವಸ್ಥೆ ಮಾಡಿದ್ದಾರೆ. ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ನ ಕುವೈತ್‌ ಶಾಖೆಯ ಮಾಜಿ ಅಧ್ಯಕ್ಷ ಮಂಜೇಶ್ವರ ಮೋಹನದಾಸ್‌ ಕಾಮತ್‌, ಅನಿವಾಸಿ ಭಾರತೀಯ ಉದ್ಯಮಿಗಳಾದ ರಾಜ್‌ ಭಂಡಾರಿ, ವಿಜಯ್‌ ಫರ್ನಾಂಡಿಸ್‌ ಕುವೈತ್‌ ವಿಮಾನ ನಿಲ್ದಾಣದಲ್ಲಿ ಈ ಕಾರ್ಮಿಕರನ್ನು ಬೀಳ್ಕೊಟ್ಟರು.

28 ವೀಸಾ ರದ್ದು:

ADVERTISEMENT

ಮಂಗಳವಾರದವರೆಗೆ ಒಟ್ಟು 16 ಕಾರ್ಮಿಕರ ವೀಸಾ ರದ್ದುಗೊಳಿಸಿದ್ದ ಕುವೈತ್‌ ಸರ್ಕಾರ, ಅವರು ಸ್ವದೇಶಕ್ಕೆ ಹಿಂದಿರುಗಲು ಸಮ್ಮತಿ ಸೂಚಿಸಿತ್ತು. ಬುಧವಾರ 28 ಮಂದಿಯ ವೀಸಾ ರದ್ದುಪಡಿಸಿದೆ. ಈ ಎಲ್ಲರ ಪಾಸ್‌ಪೋರ್ಟ್‌ ಮತ್ತು ವಿಮಾನ ಪ್ರಯಾಣದ ಟಿಕೆಟ್‌ಗಳನ್ನು ಕುವೈತ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯ ಸೆಕೆಂಡ್‌ ಸೆಕ್ರೆಟರಿ ಯು.ಎಸ್‌.ಸಿಬಿ ಅವರು ಮೋಹನದಾಸ್‌ ಕಾಮತ್‌ ಅವರಿಗೆ ಬುಧವಾರ ಸಂಜೆ ಹಸ್ತಾಂತರಿಸಿದರು.

‘ಇನ್ನೂ 14 ಜನರು ಸ್ವದೇಶಕ್ಕೆ ಹಿಂದಿರುಗಲು ಅನುಮತಿ ದೊರೆಯಬೇಕಿದೆ. ನಾಲ್ವರನ್ನು ಕಳುಹಿಸಲು ಕೆಲಸ ನೀಡಿದ್ದ ಕಂಪೆನಿ ಒಪ್ಪಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಉಳಿದ ಹತ್ತು ಮಂದಿಯ ಬಿಡುಗಡೆಗೆ ಸತತ ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ಮೋಹನದಾಸ್‌ ಕಾಮತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.