ಮಂಗಳೂರು: ಪರವಾನಗಿ ಇಲ್ಲದ ಪಿಸ್ತೂಲು ಹಾಗೂ ಆರು ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ನಗರದ ಹೊರವಲಯದಲ್ಲಿ ನೇತ್ರಾವತಿ ನದಿಯ ಬಳಿ ಸೋಮವಾರ ಬಂಧಿಸಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ತೌಸಿಫ್ ಅಹಮ್ಮದ್ ಹಾಗೂ ಅಬ್ದುಲ್ ಖಾದರ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
‘ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ಕೆ. ಗಸ್ತು ಕಾರ್ಯ ಸಲುವಾಗಿ ಜಪ್ಪಿನಮೊಗರು ಕಡೆಯಿಂದ ಕಲ್ಲಾಪು ಕಡೆಗೆ ಸಂಜೆ ವೇಳೆ ತೆರಳುತ್ತಿದ್ದರು. ಆಗ ಕಡೆಕಾರ್ ಕ್ರಾಸ್ ಬಳಿ ನಿಂತಿದ್ದ ಆರೋಪಿಗಳು ಪೊಲೀಸ್ ವಾಹನವನ್ನು ನೋಡಿ ನೇತ್ತಾವತಿ ನದಿಯತ್ತ ಓಡಿದ್ದರು. ಅವರನ್ನು ವಶಕ್ಕೆ ಪಡೆದಾಗ ತೌಸಿಫ್ ಅಹಮ್ಮದ್ ಬಳಿ ಪರವಾನಗಿ ಇಲ್ಲದ ಪಿಸ್ತೂಲ್ ಹಾಗೂ 6 ಸಜೀವ ಮದ್ದು ಗುಂಡುಗಳು ಸಿಕ್ಕವು.’
‘ಅವುಗಳನ್ನು, ಕುತ್ತಾರಿನ ಅಜೀಜ್‌ನಿಂದ ಪಡೆದುದಾಗಿ ಆರೋಪಿಗಳು ತಿಳಿಸಿದ್ದಾರೆ. ಅಜೀಜ್ ಈ ಹಿಂದೆ ಆಗ್ರಾಕ್ಕೆ ತೆರಳಿದ್ದು, ಆರೋಪಿ ಅಬ್ದುಲ್ ಖಾದರ್‌ನನ್ನೂ ಅಲ್ಲಿಗೆ ಕರೆಸಿಕೊಂಡಿದ್ದ. ಅಲ್ಲಿ ವ್ಯಕ್ತಿಯೊಬ್ಬನಿಂದ ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ಪಡೆದುಕೊಂಡಿದ್ದ ಅಜೀಜ್ ಅದನ್ನು ಅಬ್ದುಲ್ ಖಾದರ್‌ಗೆ ತೋರಿಸಿದ್ದ. 2025 ಮಾರ್ಚ್ ತಿಂಗಳಿನಲ್ಲಿ ಅಜೀಜ್ ಹಾಗೂ ಅಬ್ದುಲ್ ಖಾದರ್ ಪಿಸ್ತೂಲ್ ಹಾಗೂ ಮದ್ದುಗುಂಡುಗಳ ಸಹಿತ ರೈಲಿನಲ್ಲಿ ಮಂಗಳೂರಿಗೆ ಮರಳುತ್ತಿದ್ದರು. ಆಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ಅಜೀಜ್ ರೈಲಿನಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದ. ನಂತರ ಆತನ ಸೋದರ ಸಂಬಂಧಿ ಹಮೀದ್ ಎಂಬಾತ ಅಬ್ದುಲ್ ಖಾದರ್‌ನಿಂದ ಆ ಪಿಸ್ತೂಲನ್ನು ಪಡೆದುಕೊಂಡಿದ್ದ. ಕೆಲವು ದಿನಗಳ ನಂತರ ಬೋಳಾರದ ತೌಸಿಫ್‌ಗೆ ಅದನ್ನು ನೀಡಿದ್ದ. ಆತ ಆರೋಪಿ ತೌಸಿಫ್ ಅಹಮ್ಮದ್‌ಗೆ ಗುರುವಾರ (ಜುಲೈ 31) ಸಂಜೆ ಅದನ್ನು ನೀಡಿ, ಕಡೆಕಾರ್ ಕ್ರಾಸ್‌ನಲ್ಲಿ ಹಮೀದ್‌ಗೆ ಕೊಡುವಂತೆ ಸೂಚಿಸಿದ್ದ. ಆರೋಪಿಗಳು ಹಮೀದ್‌ಗೆ ಪಿಸ್ತೂಲ್ ನೀಡುವ ಸಲುವಾಗಿ ಕಾಯುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.