ADVERTISEMENT

ಒಂದೇ ಮನೆಯ ಮೇಲೆ ಎರಡು ಬ್ಯಾಂಕ್‌ನಲ್ಲಿ ಸಾಲ!

ಯೂನಿಯನ್‌ ಬ್ಯಾಂಕ್‌ಗೆ ₹ 27 ಲಕ್ಷ ವಂಚಿಸಿದ ಇಬ್ಬರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 15:53 IST
Last Updated 3 ಜುಲೈ 2018, 15:53 IST

ಮಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಅಡವಿರಿಸಿ ಸಾಲ ಪಡೆದಿದ್ದ ಫ್ಲ್ಯಾಟ್‌ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಇಬ್ಬರು ಯೂನಿಯನ್‌ ಬ್ಯಾಂಕ್‌ನಲ್ಲಿ ₹ 27 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ. ಈ ಸಂಬಂಧ ನಗರದ ಆರ್ಥಿಕ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ನಿವಾಸಿ ಶ್ರೀನಿವಾಸ ಶೆಣೈ ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಲೋಬೊ ರೆಸಿಡೆನ್ಸಿಯಲ್ಲಿ 1,150 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್‌ ಹೊಂದಿದ್ದರು. ಅದನ್ನು ಅಡವಿಟ್ಟು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. 2017ರ ನವೆಂಬರ್‌ನಲ್ಲಿ ಮನೆಯ ಮೂಲ ದಾಖಲೆಗಳು ಕಳೆದುಹೋಗಿವೆ ಎಂದು ಜಾಹೀರಾತು ಪ್ರಕಟಿಸಿ, ಬಳಿಕ ನಿರಾಕ್ಷೇಪಣಾ ಪತ್ರ ಪಡೆದಿದ್ದರು.

ಕೆಲವು ದಿನಗಳ ಬಳಿಕ ಮಂಗಳಾದೇವಿ ನಿವಾಸಿ ಎಂದು ಗುರುತಿಸಿಕೊಂಡಿರುವ ಶೋಭಾ ಎಂಬ ಮಹಿಳೆ ಆ ಮನೆಯನ್ನು ಖರೀದಿಸಲು ಸಾಲ ನೀಡುವಂತೆ ಯೂನಿಯನ್‌ ಬ್ಯಾಂಕ್‌ನ ಮಲ್ಲಿಕಟ್ಟೆ ಶಾಖೆಗೆ ಅರ್ಜಿ ಸಲ್ಲಿಸಿದ್ದರು. ಶ್ರೀನಿವಾಸ ಶೆಣೈ ಮತ್ತು ಶೋಭಾ ಸೇರಿ ಈ ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್‌ ಅಧಿಕಾರಿಗಳು, ವಕೀಲರಿಂದ ಅಭಿಪ್ರಾಯ ಪಡೆದಿದ್ದರು. ಬಳಿಕ ₹ 27 ಲಕ್ಷ ಸಾಲ ಮಂಜೂರು ಮಾಡಿ ಕಡತವನ್ನು ಪಾಂಡೇಶ್ವರದಲ್ಲಿರುವ ಯೂನಿಯನ್‌ ಬ್ಯಾಂಕ್‌ ಮಂಗಳೂರು ನಗರ ಶಾಖೆಗೆ ರವಾನಿಸಿದ್ದರು.

ADVERTISEMENT

ಅಲ್ಲಿನ ಶಾಖಾ ವ್ಯವಸ್ಥಾಪಕರಾಗಿದ್ದ ರಮೇಶ್ ನಾಯ್ಕ ಅವರು 2017ರ ಡಿಸೆಂಬರ್‌ 7ರಂದು ಶೋಭಾ ಅವರ ಖಾತೆಯಿಂದ ಆ್ಯಕ್ಸಿಸ್ ಬ್ಯಾಂಕ್‌ನ ಮೂಡುಬಿದಿರೆ ಶಾಖೆಯಲ್ಲಿರುವ ಶ್ರೀನಿವಾಸ ಶೆಣೈ ಖಾತೆಗೆ ₹ 27 ಲಕ್ಷವನ್ನು ವರ್ಗಾವಣೆ ಮಾಡಿದ್ದರು. ಯೂನಿಯನ್‌ ಬ್ಯಾಂಕ್‌ಗೆ ದಾಖಲೆ ನೀಡಿ ಸಾಲ ಪಡೆದಿದ್ದ ಮನೆಯನ್ನೇ ಸಿಂಡಿಕೇಟ್‌ ಬ್ಯಾಂಕ್‌ ಹರಾಜು ಮಾಡಲು 2018ರ ಮೇ 16ರಂದು ಜಾಹೀರಾತು ಪ್ರಕಟಿಸಿತ್ತು. ಆ ಬಳಿಕ ರಮೇಶ್ ನಾಯ್ಕ ಅವರು ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ನಡೆದಿರುವುದು ಪತ್ತೆಯಾಗಿದೆ.

ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಮೂಲ ದಾಖಲೆಗಳನ್ನು ಅಡಮಾನ ಇರಿಸಿದ್ದ ಆರೋಪಿಗಳು, ದಾಖಲೆಗಳು ಕಳೆದಿವೆ ಎಂಬ ಸುಳ್ಳು ಜಾಹೀರಾತು ನೀಡಿ ನಿರಾಕ್ಷೇಪಣಾ ಪತ್ರ ಪಡೆದಿದ್ದರು. ಅದರ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಯೂನಿಯನ್‌ ಬ್ಯಾಂಕ್‌ಗೆ ಸಲ್ಲಿಸಿದ್ದರು. ಅಲ್ಲದೇ ಶೋಭಾ ಕೆನರಾ ಬ್ಯಾಂಕ್‌ನ ಕಾಸರಗೋಡು ಶಾಖೆಯಲ್ಲಿ ಖಾತೆ ಹೊಂದಿರುವುದಾಗಿ ನಕಲಿ ಬ್ಯಾಂಕ್‌ ಸ್ಟೇಟ್‌ಮೆಂಟ್‌ ತಯಾರಿಸಿ ಯೂನಿಯನ್‌ ಬ್ಯಾಂಕ್‌ಗೆ ಸಲ್ಲಿಸಿರುವುದು ತಪಾಸಣೆ ವೇಳೆ ಗೊತ್ತಾಗಿದೆ.

ಯೂನಿಯನ್‌ ಬ್ಯಾಂಕ್‌ ಮಂಗಳೂರು ನಗರ ಶಾಖೆ ವ್ಯವಸ್ಥಾಪಕ ರಮೇಶ್ ನಾಯ್ಕ ನೀಡಿರುವ ದೂರು ಆಧರಿಸಿ ಶ್ರೀನಿವಾಸ ಶೆಣೈ ಮತ್ತು ಶೋಭಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಆರ್ಥಿಕ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.