ADVERTISEMENT

ಸೆಂಟ್ರಲ್‌ ಮಾರುಕಟ್ಟೆ ಪ್ರವೇಶಕ್ಕೆ ತಡೆ, ವರ್ತಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 16:38 IST
Last Updated 9 ಜೂನ್ 2020, 16:38 IST
ಸೆಂಟ್ರಲ್‌ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಬ್ಯಾರಿಕೇಡ್‌ ಅಳವಡಿಸಿ ಬಂದ್‌ ಮಾಡಿರುವುದು.
ಸೆಂಟ್ರಲ್‌ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಬ್ಯಾರಿಕೇಡ್‌ ಅಳವಡಿಸಿ ಬಂದ್‌ ಮಾಡಿರುವುದು.   

ಮಂಗಳೂರು: ನಗರದ ಸೆಂಟ್ರಲ್‌ ಮಾರುಕಟ್ಟೆಗೆ ಮರಳಿ ಪ್ರವೇಶಿಸಿ, ವ್ಯಾಪಾರ ಪುನರಾರಂಭಿಸಲು ಸಗಟು ವರ್ತಕರು ಮಂಗಳವಾರ ನಡೆಸಿದ ಪ್ರಯತ್ನಕ್ಕೆ ಮಂಗಳೂರು ಮಹಾನಗರ ಪಾಲಿಕೆಯು ತಡೆಯೊಡ್ಡಿತು. ಮಾರುಕಟ್ಟೆಯ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಹಾಕಲಾಗಿದೆ.

ಕೊರೊನಾ ವೈರಸ್‌ ಸೋಂಕು ತಡೆಗೆ ಲಾಕ್‌ಡೌನ್‌ ಜಾರಿಯಾದ ಬಳಿಕ ಸೆಂಟ್ರಲ್‌ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಮಾರುಕಟ್ಟೆಯಲ್ಲಿದ್ದ ಎಲ್ಲ ಸಗಟು ವರ್ತಕರನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿ ಏಪ್ರಿಲ್‌ 8ರಂದು ಆದೇಶ ಹೊರಡಿಸಲಾಗಿತ್ತು. ಮಾರುಕಟ್ಟೆಯ ಹಳೆ ಕಟ್ಟಡವನ್ನು ನೆಲಸಮಗೊಳಿಸುವ ತೀರ್ಮಾನವನ್ನೂ ಪಾಲಿಕೆ ಆಡಳಿತ ಈ ಸಂದರ್ಭದಲ್ಲಿ ಕೈಗೊಂಡಿತ್ತು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವವನ್ನು ಪಾಲಿಕೆ ಮುಂದಿಟ್ಟಿದೆ.

ಮಾರುಕಟ್ಟೆಯ ಕಟ್ಟಡಗಳನ್ನು ತೆರವು ಮಾಡುವ ತೀರ್ಮಾನಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಈ ಕಾರಣದಿಂದ ಪುನಃ ಸೆಂಟ್ರಲ್‌ ಮಾರುಕಟ್ಟೆಯಲ್ಲೇ ವಹಿವಾಟು ನಡೆಸಲು ಅವಕಾಶ ನೀಡುವಂತೆ ಸಗಟು ವರ್ತಕರು ಪಟ್ಟು ಹಿಡಿದಿದ್ದಾರೆ. ಮಂಗಳವಾರ ಮುಂಜಾ
ನೆಯೇ ನೂರಾರು ವರ್ತಕರು ಜೊತೆಗೂಡಿ ಸೆಂಟ್ರಲ್‌ ಮಾರುಕಟ್ಟೆಯನ್ನು ಪ್ರವೇಶಿಸಲು ಯತ್ನಿಸಿದರು.

ADVERTISEMENT

ಸೆಂಟ್ರಲ್‌ ಮಾರುಕಟ್ಟೆ ಸಗಟು ವರ್ತಕರ ಸಂಘದ ಅಧ್ಯಕ್ಷ ಎಂ.ಮುಸ್ತಫಾ ಕುಂಞಿ ನೇತೃತ್ವದಲ್ಲಿ ವ್ಯಾಪಾರಿಗಳು ಮಾರುಕಟ್ಟೆಯ ಪ್ರಾಂಗಣ ಪ್ರವೇಶಿಸಲು ಮುಂದಾದರು. ಅಷ್ಟರೊಳಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಕೋರಿಕೆಯಂತೆ ಪೊಲೀಸರು ಮಾರುಕಟ್ಟೆಯ ಎಲ್ಲ ಪ್ರವೇಶ ದ್ವಾರಗಳಿಗೆ ಬ್ಯಾರಿಕೇಡ್‌ ಅಳವಡಿಸಿ ಬಂದ್‌ ಮಾಡಿದ್ದರು. ವರ್ತಕರು ಪ್ರವೇಶಿಸದಂತೆ ತಡೆಯಲು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನ್ಯಾಯಾಲಯದ ಆದೇಶ ಪಾಲಿಸಿ: ಮಹಾನಗರ ಪಾಲಿಕೆ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವರ್ತಕರು, ಹೈಕೋರ್ಟ್‌ ಆದೇಶ ಪಾಲಿಸುವಂತೆ ಆಗ್ರಹಿಸಿದರು. ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ತಕ್ಷಣವೇ ತಮಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

‘ಮಾರುಕಟ್ಟೆ ಕಟ್ಟಡ ತೆರವು ಮಾಡುವ ನಿರ್ಧಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಲಾಕ್‌ಡೌನ್‌ ಕಾರಣದಿಂದ ನಮ್ಮನ್ನು ತಾತ್ಕಾಲಿಕವಾಗಿ ಬೈಕಂಪಾಡಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈಗ ಲಾಕ್‌ಡೌನ್‌ ಮುಗಿದಿದೆ. ಸೆಂಟ್ರಲ್‌ ಮಾರುಕಟ್ಟೆಯಲ್ಲೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಮತ್ತೆ ನ್ಯಾಯಾಲಯದ ಮುಂದೆ ಹೋಗುತ್ತೇವೆ’ ಎಂದು ಸೆಂಟ್ರಲ್‌ ಮಾರುಕಟ್ಟೆ ಸಗಟು ವರ್ತಕರ ಸಂಘದ ಅಧ್ಯಕ್ಷ ಎಂ.ಮುಸ್ತಫಾ ಕುಂಞಿ ಹೇಳಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ವರ್ತಕರಿಗೆ ತೀವ್ರ ನಷ್ಟವಾಗಿದೆ. ಪಾಲಿಕೆ ಆಡಳಿತವು ನಮ್ಮ ಕಷ್ಟವನ್ನು ಅರಿಬೇಕು. ವ್ಯಾಪಾರ, ವಹಿವಾಟಿಗೆ ಸರಿಯಾದ ಸ್ಥಳಾವಕಾಶ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.