ADVERTISEMENT

LS Polls | ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಪ್ರಚಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 7:44 IST
Last Updated 19 ಏಪ್ರಿಲ್ 2024, 7:44 IST
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖರ ಮನೆಗೆ ಭೇಟಿ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ ಪಾಲ್ಗೊಂಡಿದ್ದರು
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖರ ಮನೆಗೆ ಭೇಟಿ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ ಪಾಲ್ಗೊಂಡಿದ್ದರು   

ಸುಳ್ಯ: ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಪ್ರವಾಸ ನಡೆಸಿದರು.

ಕಾರ್ಯಕರ್ತರ ಜೊತೆ ಸೇರಿ ಮತದಾರರನ್ನು ಭೇಟಿ ಮಾಡಿದ ಅವರು ಲಾಲ್‌ಕೃಷ್ಣ ಆಡ್ವಾಣಿ ಅವರಿಂದಲೇ ಸೈ ಎನ್ನಿಸಿಕೊಂಡಿದ್ದ ಸುಳ್ಯ ಕ್ಷೇತ್ರದ ಶಕ್ತಿಯನ್ನು ಮತ್ತೆ ದೇಶಕ್ಕೆ ಪರಿಚಯಿಸೋಣ ಎಂದರು.

ಬುಧವಾರ ಬೆಳಿಗ್ಗೆ ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಚೌಟ, ನಿವೃತ್ತ ಯೋಧರಾದ ಅಡ್ಡಂತಡ್ಕ ದೇರಣ್ಣ ಗೌಡರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಕೆವಿಜಿ ವಿದ್ಯಾಸಂಸ್ಥೆ, ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.

ADVERTISEMENT

ಅರಂತೋಡು ಸಹಕಾರಿ ಸಂಘದ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಸಮೀಪದ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಪಕ್ಷದ ಹಿರಿಯರಾದ ಬಿ.ಕೆ. ಬೆಳ್ಯಪ್ಪ ಗೌಡ ಕಡ್ತಲ್ಕಜೆ ಮನೆಗೆ ಭೇಟಿ ನೀಡಿದರು.

ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನ, ಇಚ್ಲಂಪಾಡಿ ಉಳ್ಳಾಲ್ತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಗೋಳಿತೊಟ್ಟು ಸಿದ್ಧಿವಿನಾಯಕ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.

ನಾರಿಶಕ್ತಿ ಬೂತ್ ಅಭಿಯಾನ

ಮಂಗಳೂರು:  ಕ್ಷೇತ್ರದಲ್ಲಿ ಮತ ಚಲಾಯಿಸಲು ಗುರುವಾರದಿಂದ (ಏ.18ರಿಂದ) ಚುನಾವಣಾ ದಿನ ಸೇರಿ ಒಂಬತ್ತು ದಿನಗಳಿದ್ದು, ಈ ದಿನಗಳಲ್ಲಿ ಬಿಜೆಪಿ ಮಹಿಳಾ ಘಟಕ ವಿಭಿನ್ನವಾಗಿ ಪ್ರಚಾರ ಕೈಗೊಳ್ಳಲಿದೆ. ಏ.26ರಂದು ಮತದಾನ ನಡೆಯುವ ಎಲ್ಲ ಬೂತ್‌ಗಳಲ್ಲಿ ಮಹಿಳಾ ಮತದಾರರೇ ಮೊದಲು ಮತ ಚಲಾಯಿಸುವಂತೆ ಮಾಡಲು ಮನೆ–ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್ ತಿಳಿಸಿದ್ದಾರೆ.

ಶ್ರೀರಾಮ ನವಮಿ ಶುಭ ಸಂದರ್ಭದಲ್ಲಿ ಮಹಿಳಾ ಘಟಕವು ಈ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸಿದೆ. ರಾಮ ರಾಜ್ಯದ ಪರಿಕಲ್ಪನೆ ಹಿಡಿದು ಹೊರಟಿರುವ ಬ್ರಿಜೇಶ್ ಚೌಟರಿಗೆ ಬೆಂಬಲವಾಗಿ ತಾಯಂದಿರ ಕೊಡುಗೆ ಇದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.