ADVERTISEMENT

ಉಡುಪಿ, ದಕ್ಷಿಣ ಕನ್ನಡದ ಎರಡೂ ಕ್ಷೇತ್ರ ಗೆಲ್ಲುತ್ತೇವೆ: ಸಲೀಂ ಅಹ್ಮದ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 15:18 IST
Last Updated 26 ಆಗಸ್ಟ್ 2023, 15:18 IST
ಸಲೀಂ ಅಹ್ಮದ್‌
ಸಲೀಂ ಅಹ್ಮದ್‌    

ಮಂಗಳೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕರಾವಳಿಗೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲಿದೆ.‌ ದಕ್ಷಿಣ ಕನ್ನಡ ಮತ್ತು ಉಡುಪಿ– ಚಿಕ್ಕಮಗಳೂರು ಕ್ಷೇತ್ರಗಳೆರಡರಲ್ಲೂ ಪಕ್ಷವು ಜಯಭೇರಿ ಬಾರಿಸಲಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಕ್ಷವು ಬೇರೆಯೇ ರೀತಿಯ ಸವಾಲನ್ನು ಹೊಂದಿದೆ. ಲೋಕಸಭೆ ಚುನಾವಣೆಗೆ ಇಲ್ಲೂ ಈಗಾಗಲೇ ಸಿದ್ಧತೆ ಆರಂಭಿಸಿದ್ದೇವೆ’ ಎಂದರು.

‘ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ನಾಯಕರನ್ನು ನೇಮಿಸಲಿದ್ದೇವೆ. ಅವರು ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಜಿಲ್ಲಾ ಮುಖಂ‌ಡರ ಜೊತೆ ಚರ್ಚಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಚುನಾವಣೆಗೆ ಕನಿಷ್ಠ 6 ತಿಂಗಳು ಮೊದಲೇ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

ಕಳೆದ ಅವಧಿಯಲ್ಲಿ ಕೆಲ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದ ಕೆಲವು ಶಾಸಕರು ಪಕ್ಷಕ್ಕೆ ಮರಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಲೀಂ,‘ನಾವು ಆಪರೇಷನ್‌ ಕಮಲದಂತೆ ಯಾವುದೇ ಶಾಸಕರನ್ನು ಸೆಳೆಯಲು ಮುಂದಾಗಿಲ್ಲ. ಸ್ಪಷ್ಟ ಬಹುಮತವನ್ನು ಪಡೆದಿರುವ ನಮಗೆ ಅದರ ಅಗತ್ಯವೂ ಇಲ್ಲ. ಯಾರಾದರೂ ನಮ್ಮ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಮರಳಲು ಮುಂದಾದರೆ, ಪಕ್ಷದ ವರಿಷ್ಠರು ಈ ಬಗ್ಗೆ ಕ್ರಮಕೈಗೊಳ್ಳಲಿದ್ದಾರೆ. ನಮ್ಮ ಪ‍ಕ್ಷದ ಸಿದ್ಧಾಂತಗಳನ್ನು ಒಪ್ಪಿ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುವವರಿಗೂ ಸ್ವಾಗತ’ ಎಂದರು.

‘ಜಿಲ್ಲಾ ಪಂಚಾಯಿತಿ ಮತ್ತು ತ್ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರದಂತೆ ಈಗಿನ ಸರ್ಕಾರ ಮುಂದೂಡುವುದಿಲ್ಲ. ಈ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥಗೊಂಡ ತಕ್ಷಣವೇ ಈ ಚುನಾವಣೆಗಳನ್ನೂ ನಡೆಸಲು ಸರ್ಕಾರ ಕ್ರಮಕೈಗೊಳ್ಳಲಿದೆ. ಈ ಚುನಾವಣೆಗೂ ಸಿದ್ಧತೆ ಆರಂಭಿಸಲಾಗಿದೆ’ ಎಂದರು.

‘ಪಕ್ಷವು ಚುನಾವಣೆಗೆ ಮುನ್ನ ಭರವಸೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಮೂರು ಅನುಷ್ಠಾನವಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಇದೇ ತಿಂಗಳ ಅಂತ್ಯದಲ್ಲಿ ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತದೆ. ಯುವನಿಧಿ ಯೋಜನೆಯೂ ಡಿಸೆಂಬರ್‌ನಲ್ಲಿ ಕಾರ್ಯರೂಪಕ್ಕೆ ಬರಲಿದೆ. ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳಲ್ಲ ಆರಂಭಿಕ ಹಂತದಲ್ಲಿ ಕಾಣಿಸಿಕೊಂಡಿರುವ ಸಣ್ಣ ಪುಟ್ಟ ಲೋಪಗಳನ್ನು ಬಗೆಹರಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ’ ಎಂದರು.

‘2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ನೀಡಿದ್ದ ಯಾವ ಭರವಸೆಗಳೂ ಈಡೇರಿಲ್ಲ. ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ಕಪ್ಪುಹಣವನ್ನೂ ತರಲಿಲ್ಲ. ಪ್ರತಿವ್ಯಕ್ತಿಯ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಬಿಡಿ, ನಯಾಪೈಸೆಯೂ ತಲುಪಿಲ್ಲ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಹಾಗೂ ರೈತರ ವರಮಾನ ದ್ವಿಗುಣಗೊಳಿಸುವ ಭರವಸೆಗಳೂ ಈಡೇರಿಲ್ಲ. ಕೇಂದ್ರ ಬಿಜೆಪಿ ಸರ್ಕಾರವನ್ನು ನಾವು ಬೆತ್ತಲೆಗೊಳಿಸಲಿದ್ದೇವೆ’ ಎಂದರು.

‘ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಲಾದ ಕಾರ್ಯಕ್ರಮಗಳನ್ನು ನೋಡಿದ ಬಳಿಕ ಹೆಚ್ಚಿನ ಮತದಾರರು, ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್‌ ಕೈಹಿಡಿಯುತ್ತಾರೆ. ರಾಜ್ಯದಲ್ಲಿ ಪಕ್ಷವು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಪಕ್ಷದ ಮುಖಂಡರಾದ ಬಿ.ರಮಾನಾಥ ರೈ, ಜೆ.ಆರ್.ಲೋಬೊ, ಐವನ್ ಡಿಸೋಜ, ಲುಕ್ಮನ್ ಬಂಟ್ವಾಳ್, ಸುದರ್ಶನ್ ಜೈನ್, ತೇಜಸ್ವಿರಾಜ್, ಶಾಹುಲ್ ಹಮೀದ್, ಟಿ.ಎಂ.ಶಹೀದ್, ಸದಾಶಿವ ಉಳ್ಳಾಲ್, ಜೋಕಿಮ್ ಡಿಸೋಜ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.