
ಮಂಗಳೂರು: 21ನೇ ಶತಮಾನದ ಕಾಲು ಭಾಗ ಕಳೆದು ಹೋಗಿದೆ. ಈ ಶತಮಾನದ ಮೈಲಿಗಲ್ಲಾದ 2025ನೇ ಇಸವಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ಹಲವು ಪಲ್ಲಟಗಳಿಗೆ ಸಾಕ್ಷಿಯಾಯಿತು.
ಜಿಲ್ಲೆಯ ಜನರ ಪಾಲಿಗೆ ಹಲವು ಕರಾಳ ನೆನಪುಗಳನ್ನು ಉಳಿಸಿ ಹೋಗಿದೆ. ಮೂರು ಕೋಮು ದ್ವೇಷದ ಹತ್ಯೆಗಳು ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದವು. ಹಲವು ಕ್ರೀಡಾ ಚಟುವಟಿಕೆ ಈ ಕಹಿ ನೆನಪುಗಳ ನಡುವೆಯೂ ಮಧುರ ಸ್ಮೃತಿಗಳಾಗಿ ಉಳಿದವು. ಕೋಮುದ್ವೇಷದಿಂದ ವಿಚಲಿತಗೊಂಡು ಬಸವಳಿದಿದ್ದ ಮನಸುಗಳನ್ನು ಕ್ರೀಡಾಕೂಟಗಳು ಮತ್ತೆ ಬೆಸೆದವು. ವರ್ಷದ ಪ್ರಮುಖ ಬೆಳವಣಿಗೆಗಳ ಅವಲೋಕನ ಇಲ್ಲಿದೆ.
ಗುಂಪು ಹಲ್ಲೆ ನಡೆಸಿ ಹತ್ಯೆ: ನಗರದ ಹೊರವಲಯದ ಕುಡುಪುವಿನಲ್ಲಿ ಏ.28ರಂದು ಕ್ರಿಕೆಟ್ ಪಂದ್ಯ ವೀಕ್ಷಿಸಲು ತೆರಳಿದ್ದದ ಕೇರಳದ ವಯನಾಡಿನ ಮೊಹಮ್ಮದ್ ಅಶ್ರಫ್ ಎಂಬ ಯುವಕನ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದು ಜಿಲ್ಲೆಯ ಪಾಲಿನ ಕರಾಳ ಅಧ್ಯಾಯವಾಗಿ ದಾಖಲಾಯಿತು. ‘ಕ್ರಿಕೆಟ್ ಪಂದ್ಯದ ವೇಳೆ ನಡೆದ ಹಲ್ಲೆಯಿಂದಲೇ ಯುವಕ ಮೃತಪಟ್ಟಿದ್ದು ಗೊತ್ತಿದ್ದರೂ, ಅದನ್ನು ಅಸಹಜ ಸಾವು ಎಂದು ಬಿಂಬಿಸಲು ನಡೆಯಿತು ಎನ್ನಲಾದ ಯತ್ನ ’ ಆಕ್ರೋಶಕ್ಕೆ ಕಾರಣವಾಯಿತು. ಈ ಕಾರಣಕ್ಕಾಗಿಯೇ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ.ಆರ್., ಹೆಡ್ ಕಾನ್‌ಸ್ಟೆಬಲ್ ಚಂದ್ರ ಪಿ ಹಾಗೂ ಕಾನ್‌ಸ್ಟೆಬಲ್ ಯಲ್ಲಾಲಿಂಗ ಅಮಾನತಾದರು. ಈ ಪ್ರಕರಣ ಸಂಬಂಧ ಪೊಲೀಸರು 15ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದರು.
ಕುಡುಪುವಿನಲ್ಲಿ ಮಹಮ್ಮದ್ ಆಶ್ರಫ್ ಹತ್ಯೆಯ ಕಾವು ಆರುವ ಮುನ್ನವೇ ಹಿಂದುತ್ವವಾದಿ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ಮೇ 1ರಂದು ಹತ್ಯೆ ಮಾಡಲಾಯಿತು. ಬಜಪೆಯಲ್ಲಿ ಸಾರ್ವಜನಿಕರ ಎದುರೇ ಮಾರಕಾಯುಧ ಬೀಸಿ ನಡೆಸಿದ ಈ ಹತ್ಯೆ ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿತು. ಈ ಹತ್ಯೆ ನಡೆದ ಮರುದಿನ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಕರೆ ನೀಡಿದ್ದವು. ಈ ವೇಳೆ ಜಿಲ್ಲೆಯಲ್ಲಿ ಅಲ್ಲಲ್ಲಿ ಚೂರಿ ಇರಿತ ಪ್ರಕರಣಗಳು ನಡೆದವು. ಸುಹಾಸ್ ಹತ್ಯೆ ಪ್ರಕರಣದಲ್ಲಿ 12 ಆರೋಪಿಗಳನ್ನು ಕಮಿಷನರೇಟ್ ಪೊಲೀಸರು ಬಂಧಿಸಿದ್ದರು. ಈ ಹತ್ಯೆಯ ತನಿಖೆಯನ್ನು ರಾಷ್ಟ್ರಿಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿ ಕೇಂದ್ರ ಗೃಹ ಸಚಿವಾಲಯ ಬಳಿಕ ಆದೇಶ ಮಾಡಿತು.
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಿಂದ ಕರಾವಳಿಯಲ್ಲಿ ಕಾಣಿಸಿಕೊಂಡ ಕೋಮುಸೂಕ್ಷ್ಮ ಪರಿಸ್ಥಿತಿ ಇನ್ನೇನು ತಹಬಂದಿಗೆ ಬಂದಿತು ಎನ್ನುವಷ್ಟರಲ್ಲಿ ಬಂಟ್ವಾಳ ತಾಲ್ಲೂಕಿನ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಎಂಬುವರನ್ನು ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಮೇ 27ರಂದು ಹತ್ಯೆ ಮಾಡಲಾಯಿತು. ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೂ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಹತ್ಯೆ ಸಂಚು ರೂಪಿಸಿದ್ದ ಆರೋಪಿ ಬಜರಂಗ ದಳದ ಪುತ್ತೂರು ಜಿಲ್ಲಾ ಘಟಕದ ಸಂಚಾಲಕನಾಗಿದ್ದ ಭರತ್ ಕುಮ್ಡೇಲು ತಲೆಮರೆಸಿಕೊಂಡಿದ್ದ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು 2000ರ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೊಕಾ) ಅಡಿ ಪ್ರಕರಣ ದಾಖಲಿಸಿದ ಬಳಿಕ ಪೊಲೀಸರಿಗೆ ಶರಣಾಗಿದ್ದ.
‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು 2000’ರ ಪ್ರಕಾರ ಧಾರ್ಮಿಕ ಹಬ್ಬಗಳು ಹಾಗೂ ಆ ಪ್ರಯುಕ್ತ ನಡೆಯುವ ಮೆರವಣಿಗೆ, ಶೋಭಾಯಾತ್ರೆಗಳ ಸಂದರ್ಭದಲ್ಲಿ ಶಾಂತಿ–ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿದವು. ರಾತ್ರಿ 11.30ರ ಬಳಿಕ ಮೆವಣಿಗೆಗೆ, ಧ್ವನಿ ವರ್ಧಕ ಬಳಕೆಗೆ ಅವಕಾಶ ನೀಡದಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪೊಲೀಸರ ಸೂಚನೆ ಪಾಲಿಸದ ಕಾರಣಕ್ಕೆ ಕೃಷ್ಣ ಜನ್ಮಾಷ್ಠಮಿ ವೇಳೆ ಬಳಸಿದ್ದ ಧ್ವನಿವರ್ಧಕ ವ್ಯವಸ್ಥೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಲವೆಡೆ ಯಕ್ಷಗಾನ ಹಾಗೂ ನಾಟಕ ಪ್ರದರ್ಶನಕ್ಕೆ ತಡೆ ಒಡ್ಡಲಾಗಿತ್ತು. ಮಸೀದಿಯೊಂದರ ಧ್ವನಿವರ್ಧಕ ವ್ಯವಸ್ಥೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಕೇಪು: ಕೋಳಿ ಅಂಕ ವಿವಾದ....
ವಿಟ್ಲ ವ್ಯಾಪ್ತಿಯ ಕೇಪು ಗ್ರಾಮದ ಉಳ್ಳಾಲ್ತಿ ಕ್ಷೇತ್ರದಲ್ಲಿ ಹರಕೆ ರೂಪದಲ್ಲಿ ನಡೆದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ 16ಮಂದಿಯನ್ನು ವಶಕ್ಕೆ ಪಡೆದರು. ಕಾನೂನು ಬಾಹಿರವಾದ ಕೋಳಿ ಅಂಕಕ್ಕೆ ಪ್ರಚೋದಿಸಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡರು. ಕೋಳಿ ಅಂಕದ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ 27 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದರು.
ಮಳೆಯ ಅಬ್ಬರ: ಈ ವರ್ಷ ಮೇ ತಿಂಗಳಲ್ಲೇ ಶುರುವಾದ ಮಳೆ ಡಿಸೆಂಬರ್ ತಿಂಗಳವರೆಗೂ ಮುಂದುವರಿದಿತ್ತು. ಮೇ, ಜೂನ್ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಅನೇಕ ಸಾವು ನೋವುಗಳಿಗೂ ಕಾರಣವಾಯಿತು. ಜೂನ್‌ಗೆ ಮುನ್ನವೇ ಮಳೆ ಶುರುವಾಗಿದ್ದರಿಂದ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಿಲ್ಲ.
ಮಂಜನಾಡಿ ಗ್ರಾಮದ ಮೇ 30 ರಂದು ಸುರಿದ ಭಾರೀ ಮಳೆಯಿಂದಾಗಿ ಉರುಮನೆಕೋಡಿಯಲ್ಲಿ ಭೂಕುಸಿತದಿಂದ ಮನೆ ಕುಸಿದು ವೃದ್ಧೆ ಪ್ರೇಮಾ (60), ಅವರ ಮೊಮ್ಮಕ್ಕಳಾದ ಆರ್ಯನ್ (3) ಮತ್ತು ಆರುಷ್ (2) ಮೃತಪಟ್ಟರು. ಮಕ್ಕಳ ತಾಯಿ ಅಶ್ವಿನಿ ಎರಡೂ ಕಾಲುಗಳನ್ನು ಕಳೆದುಕೊಂಡರು. ಮನೆ ಯಜಮಾನ ಒಂದು ಕಾಂತಪ್ಪ ಪೂಜಾರಿಯವರ ಎಡಕಾಲಿಗೆ ಗಂಭೀರ ಗಾಯವಾಯಿತು.
ನವೋಲ್ಲಾಸ ತುಂಬಿದ ಕ್ರೀಡೆ:
ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ನಿರ್ಮಾಣಗೊಂಡ ಹೊಸ ಕ್ರೀಡಾ ಸೌಕರ್ಯಗಳಿಂದಾಗಿ ಮಂಗಳೂರು ಈ ವರ್ಷ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಿತು.
ಜನವರಿಯಲ್ಲಿ ನಡೆದಿದ್ದ ‘ಕರ್ನಾಟಕ ಕ್ರೀಡಾಕೂಟ’ದ ಟ್ರ್ಯಾಕ್ ಮತ್ತು ಫೀಲ್ಡ್, ಒಳಾಂಗಣ ಕ್ರೀಡೆಗಳ ಸ್ಪರ್ಧೆಗಳು ಅವಿಸ್ಮರಣೀಯ ಅನುಭವ ಕಟ್ಟಿಕೊಟ್ಟವು.
ಸೆಪ್ಟೆಂಬರ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬೈ ಫಿನ್ ಈಜುಕೂಟ ಮಂಗಳೂರಿಗರಿಗೂ ಫಿನ್ ಸ್ವಿಮ್ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿತ್ತು. ಡಿಸೆಂಬರ್‌ನಲ್ಲಿ ಎಮ್ಮೆಕೆರೆ ಈಜುಕೊಳದಲ್ಲಿ ನಡೆದ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಈಜುಪ್ರಿಯರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು. ದಕ್ಷಿಣ ಏಷ್ಯಾ ಮಾಸ್ಟರ್ಸ್ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಹಿರಿಯರ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸಿತ್ತು.
ಅಕ್ಟೋಬರ್ ಕೊನೆಯ ವಾರದಲ್ಲಿ ಉರ್ವದ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಸಂಕೀರ್ಣದಲ್ಲಿ ನಡೆದ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಋತ್ವಿಕ್ ಸತೀಶ್, ಮಾನಸಿ ಸಿಂಗ್ ಮಾತ್ರವಲ್ಲದೆ ಅಮೆರಿಕ, ಕೆನಡ, ಥಾಯ್ಲೆಂಡ್, ಸಿಂಗಪುರ ಮುಂತಾದ 12 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದರು. ಈ ಕ್ರೀಡೆ ಆಸುಪಾಸಿನ ಜಿಲ್ಲೆಗಳಿಂದಲೂ ಬ್ಯಾಡ್ಮಿಂಟನ್ ಪ್ರೇಮಿಗಳಿಗೆ, ವಿದ್ಯಾರ್ಥಿಗಳಿಗೆ ರಸದೌತಣ ಉಣಬಡಿಸಿತು.
ರಾವ್ಸ್ ಚೆಸ್ ಕಾರ್ನರ್ ವತಿಯಿಂದ ಶಾರದಾ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಕ್ಲಾಸಿಕಲ್, ರ‍್ಯಾಪಿಡ್, ಬ್ಲಿಟ್ಝ್ ಚೆಸ್ ಟೂರ್ನಿಯು ಈ ಬುದ್ಧಿವಂತ ಕ್ರೀಡೆಯತ್ತ ಜನರನ್ನು ಆಕರ್ಷಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.