ADVERTISEMENT

ಕಲುಷಿತ ಆಹಾರ ಸೇವನೆ: 116 ವಿದ್ಯಾರ್ಥಿನಿಯರು ಒಳರೋಗಿಗಳಾಗಿ ದಾಖಲು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 10:10 IST
Last Updated 7 ಫೆಬ್ರುವರಿ 2023, 10:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ಕಲುಷಿತ ಸೇವಿಸಿ ಅಸ್ವಸ್ಥ ಗೊಂಡ ನಗರದ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರಲ್ಲಿ 116 ಮಂದಿ ನಗರದ ವಿವಿಧ ಅಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಬಹುತೇಕ ಮಂದಿ ಹಾಸ್ಟೆಲ್ ಗೆ ಮರಳಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಈಗಲೂ ಆಸ್ಪತ್ರೆಗಳಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಜಿಲ್ಲಾ ಸರ್ವೇಕ್ಷಣಾ ಘಟಕದ ವಿಶೇಷ ತಜ್ಞರ ತಂಡವನ್ನು ಹಾಸ್ಟೆಲ್ ಗೆ ಕಳುಹಿಸಲಾಗಿದೆ‌. ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವನ್ನು ಕಂಡುಹಿಡಿಯಲು ಅವರ ಮಲದ ಮಾದರಿ, ರಕ್ತದ ಮಾದರಿ ಹಾಗೂ ಹಾಸ್ಟೆಲ್ ನ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


'ವಿಷಪೂರಿತ ಆಹಾರ ಸೇವನೆಯಿಂದ ಈ ರೀತಿ ಅವಘಡ ಸಂಭವಿಸಿರಬಹುದು' ಎಂದು ತಂಡವು ಅಭಿಪ್ರಾಯಪಟ್ಟಿದೆ. ಹಾಸ್ಟೆಲ್ ನಲ್ಲಿದ್ದ ವಿವಿಧ ಆಹಾರ ಪದಾರ್ಥಗಳು ಹಾಗೂ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಯ ನಿರೀಕ್ಷಣೆಯಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ.


ಆಹಾರ ಸುರಕ್ಷತಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಸುರತ್ಕಲ್ ನ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರನ್ನು ಒಳಗೊಂಡ ಅಧಿಕಾರಿಗಳ ತಂಡ ಸಿಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಮೂರು ಹಾಸ್ಟೆಲ್ ಗಳಿಗೆ ಭೇಟಿ ನೀಡಿದೆ.

ADVERTISEMENT


ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕಿರುವ ತಂಡವು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ರಾಜೇಶ್ ಅವರಿಗೆ ವರದಿ ಸಲ್ಲಿಸಿದೆ.


'ಸಿಟಿ ಗ್ರೂಪ್‌ ಆಫ್ ಇನ್ ಸ್ಟಿಟ್ಯೂಷನ್ಸ್ ಗೆ ಸಂಬಂಧಿಸಿದಂತೆ ಹಾಸ್ಟೆಲ್ನಲ್ಲಿ ವಾಂತಿ ಬೇಧಿ ಪ್ರಕರಣಗಳು ಪತ್ತೆಯಾದ ಬಗ್ಗೆ ಸೋಮವಾರ ಸಂಜೆ 4.30 ಕ್ಕೆ‌ ಜಿಲ್ಲಾ ಸರ್ವೇಕ್ಷಣಾ ಪಟಕಕ್ಕೆ ಮಾಹಿತಿ ಬಂದಿತ್ತು. ಬಿ.ಎಸ್‌ಸಿ ಹಾಗೂ ಜನರಲ್ ನರ್ಸಿಂಗ್‌ನ‌ ಕೆಲವೊಂದು ವಿದ್ಯಾರ್ಥಿಗಳಲ್ಲಿ ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿದ್ದವು. ಕೂಡಲೇ ನಗರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಯವರು ಹಾಗೂ ಸಿಬ್ಬಂದಿ ಹಾಸ್ಟೆಲ್ಗೆ ಭೇಟಿ ಕೊಟ್ಟು ವಿದ್ಯಾರ್ಥಿನಿಯರನ್ನು ಪರೀಕ್ಷೆಗೊಳಪಡಿಸಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲು ಮಾಡುವಂತಹ ಯಾವುದೇ ಪ್ರಕರಣಗಳು ಕಂಡುಬಂದಿರಲಿಲ್ಲ. ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಏಕಾಏಕಿ ವಾಂತಿ ಬೇಧಿ ಕಂಡು ಬಂದಿದೆ. ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಈ ವಿಚಾರ ತಿಳಿದು ಜಿಲ್ಲಾಡಳಿತ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ನೇರವಾಗಿ ಮಾತನಾಡಿಸಿ ಹಾಗೂ ವಿವಿಧ ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಆರೋಗ್ಯದ ಮಾಹಿತಿ ಪಡೆದಿದ್ದೇವೆ. ಒಟ್ಟು 231 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಅವರನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 115 ವಿದ್ಯಾರ್ಥಿನಿಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಹಾಸ್ಟೆಲ್ ಗೆ ಮರಳಿದ್ದಾರೆ. ಒಳರೋಗಿಗಳಾಗಿದ್ದ 116 ವಿದ್ಯಾರ್ಥಿನಿಯರು ಒಳ ರೋಗಿಗಳಾಗಿಚಿಕಿತ್ಸೆ ಪಡೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ವಿದ್ಯಾರ್ಥಿಗಳು ಆತಂಕಕ್ಕೆ‌ ಒಳಗಾಗಿರುವುದು ಗಮನಕ್ಕೆ ಬಂದಿದೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಅಲ್ಪ ಪ್ರಮಾಣದ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ. ರಾತ್ರಿ ಸಮಯವಾಗಿದ್ದರಿಂದ ವಿವಿಧ ಆಸ್ಪತ್ರೆಯ ಹಾಗೂ ಹಾಸ್ಟೆಲ್‌ನ ಮುಂಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸೇರಿದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ವಿದ್ಯಾರ್ಥಿಗಳನ್ನು ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ' ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.


'ಹಾಸ್ಟೆಲ್ ಗೆ ವಿಶೇಷ ವೈದ್ಯಕೀಯ ತಂಡವನ್ನು ಆಂಬುಲೆನ್ಸ್ ಸಹಿತ ಕಳುಹಿಸಲಾಗಿದ್ದು, ಅಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳ ಆರೋಗ್ಯ ಕತಪಾಸಣೆ ನಡೆಸಲಾಗಿದೆ. ಆಹಾರ ತಯಾರಿಸಿದ ಅಡುಗೆ ಕೋಣೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಅಡುಗೆ ಮಾಡಿ ಇಟ್ಟಿದ್ದ ವಿವಿಧ ಆಹಾರ ಮಾದರಿಗಳನ್ನು ಪರೀಕ್ಷೆ ಸಲುವಾಗಿ ಸಂಗ್ರಹಿಸಲಾಗಿದೆ. ಶೀತಲೀಕರಣ ಪೆಟ್ಟಿಗೆಯಲ್ಲಿಟ್ಟ ಮಾಂಸ ಹಾಗೂ ಇತರೆ ಆಹಾರ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಮುಂದಿನ ಆದೇಶದವರೆಗೆ ಈ ಅಡುಗೆ ಮನೆಯಲ್ಲಿ ಆಹಾರ ತಯಾರಿಸದಂತೆ ನಿರ್ಬಂಧ ವಿಧಿಸಲಾಗಿದೆ. ಮಕ್ಕಳಿಗೆ ಶುದ್ಧ ಆಹಾರ ಹಾಗೂ ನೀರನ್ನು ಪೂರೈಸುವಂತೆ ಸೂಚಿಸಲಾಗಿದೆ ಎಂದೂ ತಂಡವು ತಿಳಿಸಿದೆ.

ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ 13 ವಿದ್ಯಾರ್ಥಿನಿಯರಲ್ಲಿ ಹೊಟ್ಟೆ ನೋವು ಮತ್ತು ಜ್ವರದ ಲಕ್ಷಣಗಳು ಕಂಡು ಬಂದಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ವೈದ್ಯಕೀಯ ತಂಡವನ್ನು ಸ್ಥಳದಲ್ಲೇ ಉಳಿದುಕೊಳ್ಳಲು ಸೂಚಿಸಲಾಯಿತು ಎಂದು ತಂಡವು ವರದಿಯಲ್ಲಿ ತಿಳಿಸಿದೆ.

ಯಾವುದೇ ವಿದ್ಯಾರ್ಥಿಗಳು ತಮ್ಮ ಸ್ವಂತ ಊರಿಗೆ ತೆರಳದಂತೆ ಆಡಳಿತ ಮಂಡಳಿಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ನಿಕಟ ಸಂಪರ್ಕ ಹೊಂದಿ ಕಾಲಕಾಲಕ್ಕೆ ಯೋಗಕ್ಷೇಮವನ್ನು ವಿಚಾರಿಸಲಾಗುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೂರು ದಾಖಲು:

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ನೀಡಿದ ದೂರಿನ ಅನ್ವಯ ನಗರ ಪೂರ್ವ ಠಾಣೆಯಲ್ಲಿ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.