ಮಂಗಳೂರು: ನಗರದ ಲೇಡಿಹಿಲ್‌ನ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆವರೆಗೆ ಹಾಗೂ ಕೆಪಿಟಿಯಿಂದ ಯೆಯ್ಯಾಡಿವರೆಗೆ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನು ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಸೋಮವಾರ ತೆರವುಗೊಳಿಸಿದರು.
ಕಾಕತಾಳೀಯ ಎಂಬಂತೆ ಅಂತರರಾಷ್ಟ್ರೀಯ ಹುಲಿ ದಿನವಾದ ಸೋಮವಾರವೇ ಪಾಲಿಕೆ ‘ಟೈಗರ್’ ಕಾರ್ಯಾಚರಣೆ ನಡೆಸಿದೆ. ಬುಲ್‌ಡೋಜರ್‌ಗಳ ಮೂಲಕ ಗೂಡಂಗಡಿಗಳನ್ನು ಧ್ವಂಸಗೊಳಿಸಿದೆ. ಅದರಲ್ಲಿದ್ದ ಮಾರಾಟ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಗಡಿಯನ್ನು ಹಾನಿಗೊಳಿಸದಂತೆ ವ್ಯಾಪಾರಿಗಳು ಗೋಳಿಟ್ಟರೂ ಅಧಿಕಾರಿಗಳು ಕಿವಿಗೊಡಲಿಲ್ಲ.
ಮಣ್ಣಗುಡ್ಡೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸುವಾಗ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಸಂಘಟನೆಯ ಮುಖಂಡರು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಪ್ರತಿರೋಧ ಒಡ್ಡಿದರು. ಬುಲ್‌ಡೋಜರ್‌ಗೆ ಅಡ್ಡ ನಿಂತು ಪ್ರತಿಭಟಿಸಿದರು. ‘2014ರ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ನಮಗೆ ಬೀದಿ ಬದಿ ವ್ಯಾಪಾರ ವಲಯವನ್ನು ಗುರುತಿಸಿ ಹಂಚಿಕೆ ಮಾಡಿಲ್ಲ. ಗುರುತಿನ ಚೀಟಿ ನೀಡಿ, ಜೀವನೋಪಾಯಕ್ಕೆ ವ್ಯವಸ್ಥೆ ಮಾಡಿಲ್ಲ. ಈಗ ಏಕಾಏಕಿ ಬೀದಿ ಬದಿ ವ್ಯಾಪಾರಕ್ಕೆ ಅಡ್ಡಿಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕಿವಿಗೊಡದ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರಿಸಿ ಸರಕು ಸರಂಜಾಮುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹೋದರು.
‘ಬಡವರನ್ನು ಬೀದಿಗೆ ತರುತ್ತಿದ್ದೀರಿ. ಬೀದಿ ಬದಿ ವ್ಯಾಪಾರಕ್ಕೆ ವಲಯ ನಿರ್ಮಿಸುವುದಿಲ್ಲ. ಮಣ್ಣಗುಡ್ಡೆಯಲ್ಲಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಿಸಲು ಸ್ಥಳೀಯರ ವಿರೋಧವಿದೆ ಎಂದು ಮೇಯರ್ ಹೇಳಿಕೆ ಕೊಡುತ್ತಾರೆ. ದೊಡ್ಡವರ ವ್ಯಾಪಾರಕ್ಕೆ ಯಾರ ವಿರೋಧವೂ ಇರುವುದಿಲ್ಲ. ಹೊರರಾಜ್ಯದವರು ಬಂದು ಬೀದಿ ಬದಿ ವ್ಯಾಪಾರ ನಡೆಸಿದರೆ ಏನೂ ಮಾಡುತ್ತಿಲ್ಲ. ಸ್ಥಳೀಯರನ್ನು ಗುರಿ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಬೀದಿ ಬದಿ ವ್ಯಾಪಾರಿಗಳು ಆರೋಪಿಸಿದರು.
'ನಗರದಲ್ಲಿ ಅದೆಷ್ಟೋ ಬಿಲ್ಡರ್‌ಗಳು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಅವರನ್ನು ಮುಟ್ಟುವ ಧೈರ್ಯ ಪಾಲಿಕೆಗೆ ಇಲ್ಲ. ಇವರ ದಾಳಿ ಏನಿದ್ದರೂ ಬಡವರ ಮೇಲೆ’ ಎಂದು ಸಿಪಿಐ ಮುಖಂಡ ಸುನಿಲ್ ಕುಮಾರ್ ಬಜಾಲ್ ಹರಿಹಾಯ್ದರು.
‘ಕಾರ್ಯಾಚರಣೆ ಮುಂದುವರಿಯಲಿದೆ’ ‘
ಬೀದಿ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಗೂಡಂಗಡಿಗಳನ್ನು ಮೇಯರ್ ಸೂಚನೆ ಮೇರೆಗೆ ಹಾಗೂ ಪಾಲಿಕೆ ಕೌನ್ಸಿಲ್ ನಿರ್ಣಯದಂತೆ ತೆರವುಗೊಳಿಸುತ್ತಿದ್ದೇವೆ. ಸುಮಾರು 25 ಗೂಡಂಗಡಿಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ತಿಳಿಸಿದರು. ‘ತೆರವಿಗೆ ಮುನ್ನ ನೋಟಿಸ್ ನೀಡಿದ್ದೇವೆ. ಕಾರ್ಯಾಚರಣೆ ನಡೆಸಲಾದ ಬಹುತೇಕ ಅಂಗಡಿಗಳು ಆಹಾರ ಪದಾರ್ಥಗಳನ್ನು ಮಾಡುತ್ತಿದ್ದವುಗಳು. ಅಲ್ಲಿ ಸ್ವಚ್ಛತೆ ಕಾಪಾಡುತ್ತಿರಲಿಲ್ಲ. ಮಣ್ಣಗುಡ್ಡೆಯ ವ್ಯಾಪಾರಿಯೊಬ್ಬರು ಪಾತ್ರೆ ತೊಳೆಯಲು ಹಾಗೂ ಗ್ರಾಹಕರಿಗೆ ಕೈ ತೊಳೆಯಲು ನೀಡಲು ಡ್ರಂನಲ್ಲಿ ಸಂಗ್ರಹಿಸಿದ್ದ ನೀರಿನಲ್ಲಿ ಸೊಳ್ಳೆಗಳ ಲಾರ್ವಗಳು ಕಂಡುಬಂದಿವೆ ಎಂದರು. ‘ಬೀದಿ ಬದಿ ವ್ಯಾಪಾರ ವಲಯ ಸ್ಥಾಪಿಸಲು ಲೇಡಿಗೋಷನ್ ಕಾವೂರು ಸುರತ್ಕಲ್ ಹಾಗೂ ಮಣ್ಣಗುಡ್ಡೆ ಸಹಿತ ಐದು ಕಡೆ ಜಾಗ ಗುರುತಿಸಿದ್ದೇವೆ. ಇವುಗಳಲ್ಲಿ ಲೇಡಿಗೋಷನ್ ಬಳಿಯ ವ್ಯಾಪಾರ ವಲಯ ಸಿದ್ಧವಾಗಿದ್ದರೂ ಅಲ್ಲಿ ವ್ಯಾಪಾರ ನಡೆಸಲು ಬೀದಿ ಬದಿ ವ್ಯಾಪಾರಿಗಳು ಅಷ್ಟು ಆಸಕ್ತಿ ತೋರಿಸುತ್ತಿಲ್ಲ’ ಎಂದರು.
‘ತೆರವು ಕಾನೂನು ಬಾಹಿರ’
‘ಮೇಯರ್ ಸುಧೀರ್ ಶೆಟ್ಟಿ ಅವರ ಸರ್ವಾಧಿಕಾರದ ತೀರ್ಮಾನವನ್ನು ಪಾಲಿಕೆ ಅಧಿಕಾರಿಗಳು ಜಾರಿ ಮಾಡಿದ್ದಾರೆ. ಈ ತೆರವು ಕಾರ್ಯಾಚರಣೆ ಕಾನೂನುಬಾಹಿರ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಆರೋಪಿಸಿದ್ದಾರೆ.
‘ಮೇಯರ್ ಕುಮ್ಮಕ್ಕಿನಿಂದ ಪಾಲಿಕೆ ಅಧಿಕಾರಿಗಳು ಬಡ ಬೀದಿ ವ್ಯಾಪಾರಿಗಳ ಸೊತ್ತುಗಳನ್ನು ನಾಶ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಗುರುತಿಸಿರುವ ಅಧಿಕೃತ ಬೀದಿ ವ್ಯಾಪಾರಿಗಳ ಮೇಲೆಯೂ ದಾಳಿ ನಡೆಸಲಾಗಿದೆ. ಸಂಘದ ಮುಖಂಡರನ್ನು ಬಂಧನದಲ್ಲಿಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಇಂತಹ ದಬ್ಬಾಳಿಕೆಯಿಂದ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದರು.
‘ಈ ಹಿಂದೆ ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಿದ ಮೇಯರ್‌ಗಳ ರಾಜಕೀಯ ಬದುಕು ಅವಸಾನ ಕಂಡಿದೆ ಎಂಬುದನ್ನು ಈಗಿನ ಮೇಯರ್ ಮರೆಯಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.