ಬಂಧನ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ಇಬ್ಬರು ಅಪರಿಚಿತರು ತನ್ನ ಮೇಲೆ ತಲ್ವಾರ್ ಬೀಸಿ ಕೊಲೆ ಮಾಡಲು ಯತ್ನಿಸಿದರು ಎಂದು ಬಂಟ್ವಾಳ ಸಜೀಪ ಮುನ್ನೂರು ನಿವಾಸಿ ಉಮರ್ ಫಾರೂಕ್ (48) ನೀಡಿದ್ದ ದೂರು ಸುಳ್ಳು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಸುಳ್ಳು ದೂರು ನೀಡಿದ ಕಾರಣಕ್ಕೆ ಉಮರ್ ಫಾರೂಕ್ ವಿರುದ್ಧವೇ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನಾನು 11.06.2025ರಂದು ಮುಂಜಾನೆ ಜೀಪ್‌ನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ, ಸಜೀಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು, ನನ್ನ ಮೇಲೆ ತಲ್ವಾರ್ ಬೀಸಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ಈ ವ್ಯಕ್ತಿ ದೂರು ನೀಡಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ (68/2025) ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ತನಿಖೆ ನಡೆಸಿದಾಗ, ಇದೊಂದು ಸುಳ್ಳು ಪ್ರಕರಣ ಎಂಬುದು ಸಾಬೀತಾಗಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಗಲಭೆ ಉಂಟಾಗುವಂತೆ ಸಾರ್ವಜನಿಕರನ್ನು ಪ್ರಚೋದಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಯಭೀತಿ ಸೃಷ್ಟಿಸಿ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಮಾಡಿ, ಸುಳ್ಳು ದೂರು ನೀಡಿರುವ ಹಿನ್ನೆಲೆಯಲ್ಲಿ ಉಮರ್ ಫಾರೂಕ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (128/2025) ಬಿಎನ್‌ಎಸ್ ಕಲಂ:192, 353(1)(b), 230(1), 248(A) ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೇ ಆರೋಪಿ ಉಮರ್ ಪಾರೂಕ್‌ನನ್ನು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ಸೆ. 6ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.