
ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಳಿಗಾಲದ ಪರಿಷ್ಕೃತ ವೇಳಾಪಟ್ಟಿ ಇದೇ 26ರಿಂದ (ಭಾನುವಾರ) ಜಾರಿಯಾಗಲಿದ್ದು, ನವದೆಹಲಿ, ತಿರುವನಂತಪುರ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನಯಾನ ಸೇವೆಗಳು ಲಭ್ಯವಾಗಲಿವೆ.
ಚಳಿಗಾಲದ ವೇಳಾಪಟ್ಟಿಯಲ್ಲಿ ದಮ್ಮಾಮ್, ದೋಹಾ, ಕುವೈತ್, ಜೆಡ್ಡಾ ಮತ್ತು ಬಹರೇನ್‌ಗೆ ವಿಮಾನಗಳ ಸೇವೆಗಳು ಹೆಚ್ಚುವರಿಯಾಗಿ ಲಭಿಸಲಿವೆ.
ಮಂಗಳೂರಿನಿಂದ ತಿರುವನಂತಪುರಕ್ಕೆ ಇದೇ 27ರಿಂದ ವಾರದಲ್ಲಿ ಮೂರು ನೇರ ವಿಮಾನ ಸೇವೆ ಒದಗಿಸುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಿಸಿದೆ. ಐಎಕ್ಸ್ 5531 ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ತಿರುವನಂತಪುರಕ್ಕೆ ಹಾರಾಟ ನಡೆಸಲಿದೆ. ಐಎಕ್ಸ್ 5532 ವಿಮಾನವು ಮಂಗಳವಾರ, ಗುರುವಾರ ಮತ್ತು ಶನಿವಾರ ತಿರುವನಂತಪುರದಿಂದ ಮಂಗಳೂರಿಗೆ ಹಾರಾಟ ನಡೆಸಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಸ್ತುತ ನವದೆಹಲಿಗೆ ಕಾರ್ಯನಿರ್ವಹಿಸುತ್ತಿರುವ ಐಎಕ್ಸ್ 1275 / ಐಎಕ್ಸ್ 1276ಗೆ ಹೆಚ್ಚುವರಿಯಾಗಿ ಎರಡನೇ ದೈನಂದಿನ ವಿಮಾನವನ್ನು (ಐಎಕ್ಸ್ 1781 / ಐಎಕ್ಸ್ 1782) ಪರಿಚಯಿಸಲಿದೆ. ಇದೇ 27ರಿಂದ ಈ ಸೇವೆ ಆರಂಭವಾಗಲಿದೆ. ಬೆಂಗಳೂರಿಗೆ ನಿತ್ಯ ಎರಡು ವಿಮಾನ ಮತ್ತು ಮುಂಬೈಗೆ ನಿತ್ಯ ತಲಾ ಒಂದು ವಿಮಾನ ಸೇವೆ ಮುಂದುವರಿಸಲಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ವಾರದಲ್ಲಿ ಆರು ದಿನ ಮತ್ತು ಪ್ರತಿ ಮಂಗಳವಾರ ಒಂದು ವಿಮಾನ ಸೇವೆಯನ್ನು ಒದಗಿಸಲಿದೆ. ಅಬುಧಾಬಿಗೆ ಪ್ರತಿದಿನ ಒಂದು ವಿಮಾನ; ದಮ್ಮಾಮ್‌ಗೆ ವಾರದಲ್ಲಿ ಐದು; ಮತ್ತು ಬಹರೇನ್, ದೋಹಾ, ಜೆಡ್ಡಾ ಮತ್ತು ಕುವೈತ್‌ಗೆ ಕ್ರಮವಾಗಿ ವಾರದಲ್ಲಿ ಮೂರು ಸೇವೆಗಳನ್ನು ಒದಗಿಸಲಿದೆ. ಸಂಸ್ಥೆಯು ದಮ್ಮಾಮ್ ಮತ್ತು ದೋಹಾಕ್ಕೆ ವಾರದಲ್ಲಿ ನೀಡುತ್ತಿದ್ದ ಸೇವೆಯನ್ನು ಹೆಚ್ಚಿಸಿದೆ. ಪ್ರಸ್ತುತ ದಮ್ಮಾಮ್‌ಗೆ ನಾಲ್ಕು ಮತ್ತು ದೋಹಾಕ್ಕೆ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದು, ಇನ್ನು ತಲಾ ಒಂದು ವಿಮಾನ ಸೇವೆ ಹೆಚ್ಚಾಗಲಿದೆ. ಪ್ರಸ್ತುತ ಬಹರೇನ್, ಕುವೈತ್ ಮತ್ತು ಜೆಡ್ಡಾಗೆ ವಾರದಲ್ಲಿ ಇನ್ನೂ ಎರಡು ವಿಮಾನಗಳ ಸೇವೆ ಹೆಚ್ಚುವರಿಯಾಗಿ ಸಿಗಲಿದೆ. ಸಂಸ್ಥೆಯು ಬೋಯಿಂಗ್ 737-8 ಮತ್ತು 737-800 ಎನ್‌ಜಿ ವಿಮಾನಗಳನ್ನು ಕಾರ್ಯಾಚರಣೆಗೆ ಬಳಸಲಿದೆ.
ಇಂಡಿಗೊ ಸಂಸ್ಥೆಯು ನಿತ್ಯ ಬೆಂಗಳೂರಿಗೆ ಆರು, ಮುಂಬೈಗೆ ಮೂರು, ಹೈದರಾಬಾದ್‌ಗೆ ಎರಡು ಮತ್ತು ದೆಹಲಿ ಮತ್ತು ಚೆನ್ನೈಗೆ ತಲಾ ಒಂದು ವಿಮಾನ ಸೇವೆಯನ್ನು ಒದಗಿಸುತ್ತಿದೆ. ಸಂಸ್ಥೆಯು ಹೈದರಾಬಾದ್ ಮತ್ತು ಚೆನ್ನೈಗೆ 72 ಆಸನಗಳ ಎಟಿಆರ್ ವಿಮಾನವನ್ನು ಮತ್ತು ಕಿರಿದಾದ ಏರ್‌ಬಸ್ ಎ-320 /321 ವಿಮಾನವನ್ನು ದೇಶದ ಇತರ ಮೂರು ನಗರಗಳಿಗೆ ಸೇವೆ ಒದಗಿಸಲು ಬಳಸಲಿದೆ. ಅಂತರರಾಷ್ಟ್ರೀಯ ಸೇವೆಗೆ ಇಂಡಿಗೊ ತನ್ನ ಏರ್ ಬಸ್ ಫ್ಲೀಟ್ ವಿಮಾನವನ್ನು ಬಳಸಲಿದ್ದು ಅಬುಧಾಬಿಗೆ ನಿತ್ಯ ಒಂದು ಮತ್ತು ದುಬೈಗೆ ವಾರಕ್ಕೆ ನಾಲ್ಕು ವಿಮಾನಗಳನ್ನು ನಿರ್ವಹಿಸಲಿದೆ.
ಚಳಿಗಾಲದ ವೇಳಾಪಟ್ಟಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೊ ಸಂಸ್ಥೆಗಳು ದೃಢಪಡಿಸಿದ್ದು, ಇದು 2026ರ ಮಾರ್ಚ್ 28ರವರೆಗೆ ಮುಂದುವರಿಯಲಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ವಿಭಾಗವು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.