ADVERTISEMENT

ಮಂಗಳೂರು | ಪೊಲೀಸರಿಂದಲೇ ದೌರ್ಜನ್ಯ: ಅಳಲು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:22 IST
Last Updated 29 ಡಿಸೆಂಬರ್ 2025, 6:22 IST
<div class="paragraphs"><p>ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಹವಾಲು ಆಲಿಸುವ ಸಭೆಯಲ್ಲಿ ಮುಖಂಡರೊಬ್ಬರು ಮಾತನಾಡಿದರು</p></div>

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಹವಾಲು ಆಲಿಸುವ ಸಭೆಯಲ್ಲಿ ಮುಖಂಡರೊಬ್ಬರು ಮಾತನಾಡಿದರು

   

ಮಂಗಳೂರು: ಕೆಲ ಪೊಲೀಸ್ ಅಧಿಕಾರಿಗಳಿಂದಲೇ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದಲಿತ ಮುಖಂಡರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಹವಾಲು ಸ್ವೀಕಾರ ಸಭೆಯಲ್ಲಿ ಆರೋಪಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್. ಎನ್ ಅಧ್ಯಕ್ಷತೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗಿರೀಶ್ ಕುಮಾರ್, ‘ಕೆಲ ಪೊಲೀಸ್ ಅಧಿಕಾರಿಗಳು ದೂರು ನೀಡಿದ ದಲಿತರ ಪರ ನಿಲ್ಲುವ ಬದಲು ಅವರ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದಾರೆ. ಸಂತ್ರಸ್ತರ ವಿರುದ್ಧವೇ  ದೂರು ದಾಖಲಿಸಿದ ಉದಾಹರಣೆಗಳಿವೆ. ಮೂಲ್ಕಿ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದವರಿಗೆ ಕಿರುಕುಳ ನೀಡಲಾಗಿದೆ’ ಎಂದು ಆರೋಪಿಸಿದರು.‌

ADVERTISEMENT

ಇದಕ್ಕೆ ಧ್ವನಿಗೂಡಿಸಿದ ಸದಾಶಿವ ಉರ್ವಸ್ಟೋರ್, ‘ಕೆಲವೇ ಕೆಲವು ಅಧಿಕಾರಿಗಳ ದುರ್ವರ್ತನೆಯಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಿದ್ದೇನೆ’ ಎಂದರು.  ಮುಕೇಶ್ ಕುಮಾರ್, ಮೂಡುಬಿದಿರೆಯ ಸುಮತಿ ಅವರೂ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಟೀಕಿಸಿದರು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಸಿಪಿ ಮಿಥುನ್, ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ದಾಖಲೆಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ವೈದ್ಯಕೀಯ ಕಡತಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿಲ್ಲ. ಕೆಲ ಸಿಬ್ಬಂದಿ ಬೇಜವ್ದಾರಿಯಿಂದ ವರ್ತಿಸುತ್ತಾರೆ. ಸರ್ಕಾರದ ಸವಲತ್ತುಗಳ ಬಗ್ಗೆ ರೋಗಿಗಳಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ನೆರವು ಕೋರಿ ಆಸ್ಪತ್ರೆಯ ಆಯುಷ್ಮಾನ್ ನೋಂದಣಿ ಕೇಂದ್ರಕ್ಕೆ ಹೋದವರನ್ನು ಸತಾಯಿಸಲಾಗುತ್ತದೆ ಎಂದು
ಮುಕೇಶ್ ಆರೋಪಿಸಿದರು.

‘ಎರಡನೇ ಮಹಡಿಯ ವಾರ್ಡ್‌ಗಳಲ್ಲಿ ಸುಮಾರು 150 ಹಾಸಿಗೆಗಳಿಗೆ ಸಂಬಂಧಿಸಿದ ಕಡತಗಳು ಒಂದೇ ಕೌಂಟರ್‌ನಲ್ಲಿದೆ. ಹಾಸಿಗೆ ಸಂಖ್ಯೆ ನಮೂದಿಸದ ಕಾರಣ ಯಾವ ಹೆಸರಿನ ರೋಗಿ ಯಾವ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುವುದಿಲ್ಲ. ರೋಗಿಗಳ ಹೆಸರು ಕರೆದು ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಹೆಸರಿನ ಇಬ್ಬರು ರೋಗಿಗಳಿದ್ದರೆ ಇಂಜೆಕ್ಷನ್, ಔಷಧ ಅದಲು–ಬದಲಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದೂರು ನೀಡುವಂತೆ ಡಿಸಿಪಿ ಸಲಹೆ ನೀಡಿದರು.

ಮುಖಂಡರಾದ ಅಮಲ ಜ್ಯೋತಿ, ವಿಶ್ವನಾಥ ಚೆಂಡ್ತಿಮಾರ್, ಭಾಸ್ಕರ್ ಮೂಡುಬಿದಿರೆ ಮೊದಲಾದವರು ಪಾಲ್ಗೊಂಡಿದ್ದರು.  ದಕ್ಷಿಣ ಎಸಿಪಿ ವಿಜಯಕ್ರಾಂತಿ ಕಾರ್ಯಕ್ರಮ ನಿರೂಪಿಸಿದರು.

ಅಂಬೇಡ್ಕರ್ ವೃತ್ತವನ್ನು ತ್ವರಿತವಾಗಿ ನಿರ್ಮಿಸಿ: ಚಂದ್ರಕುಮಾರ್‌ ಒತ್ತಾಯ

ಕ್ಲಬ್‌ಗಳಿಗೆ ಪರವಾನಿಗೆ ನೀಡುವಾಗ ತಾರತಮ್ಯ: ರಮೇಶ್ ಆರೋಪ

ವೆನ್ಲಾಕ್‌ ಆಸ್ಪತ್ರೆ ಕಡತ ನಿರ್ವಹಣೆ: ‌ಅಸಮಾಧಾನ

ಡಿಸಿಆರ್‌ಇ ಠಾಣೆ–ಸಿಬ್ಬಂದಿ ಕೊರತೆ
‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಡಿಸಿಆರ್‌ಇ ಠಾಣೆಯ ಎಸ್.ಪಿ ಯಾಗಿರುವ ಸಿ.ಎ.ಸೈಮನ್ ಅವರಿಗೆ ಧರ್ಮಸ್ಥಳ ಪ್ರಕರಣದ ಸಲುವಾಗಿ ರಚಿಸಿರುವ ಎಸ್ಐಟಿ ಹೆಚ್ಚುವರಿ ಹೊಣೆಯೂ ಇದೆ. ದೂರುದಾರರು ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ’ ಎಂದು ಕೆಲವರು ದೂರಿದರು. ‘ಕಾರ್ಕಳದ ಅಭಿಷೇಕ್ ಆಚಾರ್ಯ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದೆ. ಅದು ಹನಿಟ್ರ್ಯಾಪ್ ಅಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಆದರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವತಿ ವಿರುದ್ಧ ಅಪಪ್ರಚಾರ ಮುಂದುವರಿದಿದೆ. ಈ ಬಗ್ಗೆ ನ್ಯಾಯಕೋರಿ ಡಿಸಿಆರ್‌ಇ ಮೊರೆ ಹೋದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ಆನಂದ ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಆರ್‌ಇ ಠಾಣೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.