ADVERTISEMENT

ಕೇರಳದಲ್ಲಿ ಝಿಕಾ ವೈರಸ್‌ ಪ್ರಕರಣ ಹೆಚ್ಚಳ: ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 12:01 IST
Last Updated 13 ಜುಲೈ 2021, 12:01 IST
ವಾಹನಗಳನ್ನು ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ
ವಾಹನಗಳನ್ನು ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ   

ಮಂಗಳೂರು: ಕೇರಳದಲ್ಲಿ ಝಿಕಾ ವೈರಸ್‌ ಹಾಗೂ ಡೆಲ್ಟಾ ಪ್ಲಸ್‌ ಪ್ರಕರಣಗಳು ವರದಿಯಾಗುತ್ತಿದ್ದು, ಕೇರಳದೊಂದಿಗೆ ಗಡಿ ಹಂಚಿಕೊಂಡಿರುವದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಸದ್ಯ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಜಿಲ್ಲೆಗೆ ಬರುವ ಪ್ರತಿಯೊಬ್ಬರ ತಪಾಸಣೆ ಆರಂಭಿಸಲಾಗಿದೆ.

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ಗೃಹ ಸಚಿವರ ನಿರ್ದೇಶನದಂತೆ ಕರ್ನಾಟಕ- ಕೇರಳದ ಗಡಿ ಭಾಗಗಳಲ್ಲಿ ಪ್ರಯಾಣಿಸುವವರ ತಪಾಸಣೆ ಬಿಗಿಗೊಳಿಸಲಾಗುತ್ತಿದೆ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಸದ್ಯ ನಿಯಂತ್ರಣದಲ್ಲಿದೆ. ಆದರೆ ಕೇರಳದಲ್ಲಿ ಸೋಂಕು ಹೆಚ್ಚುತ್ತಿದ್ದು, ಝಿಕಾ ವೈರಸ್‌, ಡೆಲ್ಟಾ ಪ್ಲಸ್‌ ಪ್ರಕರಣಗಳು ಹೆಚ್ಚುತ್ತಿವೆ. ಸೋಂಕು ಹರಡುವುದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತಲಪಾಡಿ, ನೆತ್ತಿಲಪದವು, ನಾರ್ಯ ಕ್ರಾಸ್, ನಂದಾರ ಪಡ್ಪು, ಮುದುಂಗಾರು ಕಟ್ಟೆ, ತೌಡುಗೋಳಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಸಿಬ್ಬಂದಿಯನ್ನೂ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಪ್ರತಿ ಠಾಣೆಯಲ್ಲಿ 4–5 ಪೊಲೀಸ್ ಸಿಬ್ಬಂದಿಯನ್ನು ಮೂರು ಪಾಳಿಯಲ್ಲಿ ನಿಯೋಜಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ತಪಾಸಣೆ ನಡೆಸಲಿದ್ದಾರೆ. ರೈಲ್ವೆ ಪೊಲೀಸರ ಸಹಕಾರದೊಂದಿಗೆ ಮಂಗಳೂರು ಸೆಂಟ್ರಲ್‌ ಹಾಗೂ ಮಂಗಳೂರು ಜಂಕ್ಷನ್‌ ರೈಲ್ವೆ ನಿಲ್ದಾಣಗಳಲ್ಲಿಯೂ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ನಿತ್ಯ ಕೆಲಸಗಳಿಗೆ ಬರುವವರು, ವಿದ್ಯಾರ್ಥಿಗಳಿಗೆ ಈಗಾಗಲೇ ಕೋವಿಡ್–19 ನಿರೋಧಕ ಲಸಿಕೆ ಅಥವಾ ಆರ್‌ಟಿಪಿಸಿಆರ್‌ ನೆಗೆಟಿವ್ ಪ್ರಮಾಣ ಪತ್ರದ ಆಧಾರದಲ್ಲಿ 14 ದಿನಗಳ ಅವಧಿಗೆ ಪಾಸ್ ನೀಡಲಾಗುತ್ತಿದೆ. ಉಳಿದ ಜನರು 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ. ಅನಗತ್ಯವಾಗಿ ಗಡಿಗಳಲ್ಲಿ ಸಂಚರಿಸುವ ಮೂಲಕ ಕೋವಿಡ್ ಹರಡುವುದನ್ನು ತಡೆಯುವುದು ಮಾತ್ರ ಈ ತಪಾಸಣೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಕೇರಳ- ಕರ್ನಾಟಕ ನಡುವೆ ಬಸ್ ಸಂಚಾರ ಸದ್ಯಕ್ಕೆ ಆರಂಭವಾಗಿಲ್ಲ. ಆರಂಭವಾದಲೂ ಇದೇ ರೀತಿಯ ಕ್ರಮವನ್ನು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

10 ಕಡೆ ಚೆಕ್‌ಪೋಸ್ಟ್‌: ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಗಡಿ ಭಾಗದ ಹತ್ತು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.

ವಿಟ್ಲ ಠಾಣೆ ವ್ಯಾಪ್ತಿಯ ಸಾರಡ್ಕ, ಸಾಲೆತ್ತೂರು, ಕನ್ಯಾನ, ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಮೇನಾಲ, ಸ್ವರ್ಗ, ಸುಳ್ಯ ಪದವು, ಸುಳ್ಯ ಠಾಣೆ ವ್ಯಾಪ್ತಿಯು ಮೂರೂರು, ಮಂಡೆಕೋಲು, ಬಡ್ಡಡ್ಕ, ಕನ್ನಡಿತೋಡಿನಲ್ಲಿ ಚೆಕ್‌ಪೋಸ್ಟ್‌ಗಳು ಕಾರ್ಯಾರಂಭ ಮಾಡಿವೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಜನರ ತಪಾಸಣೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಅಥವಾ ಲಸಿಕೆ ಪಡೆದ ಪ್ರಮಾಣಪತ್ರ ಇರುವವರಿಗೆ ಮಾತ್ರ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT