ADVERTISEMENT

ದಸರಾ ದರ್ಶನಕ್ಕೆ ಭಕ್ತರ ದಂಡು

ಬುಧವಾರ ಆರು ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:43 IST
Last Updated 28 ಸೆಪ್ಟೆಂಬರ್ 2022, 5:43 IST

ಮಂಗಳೂರು: ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನವರಾತ್ರಿ ವೇಳೆ ಆಯೋಜಿಸಿರುವ ‘ಮಂಗಳೂರು ದಸರಾ ದರ್ಶನ’ ಪ್ಯಾಕೇಜ್ ಪ್ರವಾಸಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಮೊದಲ ದಿನ ಮೂರು ಬಸ್‌ಗಳು ಸಂಚರಿಸಿದ್ದು, ಮಂಗಳವಾರ ಐದು ಬಸ್‌ಗಳಲ್ಲಿ ಪ್ರವಾಸಿಗರು ದೇವಿ ದೇವಾಲಯಗಳ ದರ್ಶನ ಮಾಡಿದರು. ಬುಧವಾರ ಕೆಎಸ್‌ಆರ್‌ಟಿಸಿ ಆರು ಬಸ್‌ಗಳನ್ನು ಓಡಿಸಲು ಮುಂದಾಗಿದೆ.

ವಯಸ್ಕರಿಗೆ ₹ 300 ಬಸ್ ಟಿಕೆಟ್ ದರ ಹಾಗೂ ಆರು ವರ್ಷದ ಮೇಲಿನ ಮಕ್ಕಳಿಗೆ ₹ 250 ದರವಿದೆ. ಮಂಗಳವಾರ 150 ಜನರು ದೇವಾಲಯಗಳ ದರ್ಶನ ಮಾಡಿದ್ದು, ಬುಧವಾರ 200 ಜನರು ಸ್ಥಳ ಕಾಯ್ದಿರಿಸಿದ್ದಾರೆ. ಪ್ರತಿ ಬಸ್‌ನಲ್ಲಿ 30 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದೊಂದು ಕುಟುಂಬದವರೇ 15–20 ಸ್ಥಳಗಳನ್ನು ಕಾಯ್ದಿರಿಸುತ್ತಿದ್ದಾರೆ. ಬೇಡಿಕೆ ಹೆಚ್ಚಿನ ಹಿನ್ನೆಲೆಯಲ್ಲಿ ಎರಡು ವೋಲ್ವೊ, ನಾಲ್ಕು ನರ್ಮ್ ಬಸ್‌ಗಳನ್ನು ನಿಗದಿಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ರಾಜೇಶ್ ಶೆಟ್ಟಿ ತಿಳಿಸಿದರು.

ಎಲ್ಲ ದೇವಾಲಯಗಳಲ್ಲಿ ಪ್ರವಾಸಿಗರಿಗೆ ಉತ್ತಮ ಸಹಕಾರ ಸಿಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ, ಬೆಂಗಳೂರು, ಶಿವಮೊಗ್ಗ, ಇನ್ನಿತರ ಜಿಲ್ಲೆಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಅಕ್ಟೋಬರ್ 5ರವರೆಗೆ ಅನೇಕರು ಸೀಟ್ ಕಾಯ್ದಿರಿಸಿದ್ದಾರೆ ಎಂದು ಹೇಳಿದರು.

ADVERTISEMENT

ಬೆಳಿಗ್ಗೆ 8 ಗಂಟೆಗೆ ಬಿಜೈ ಬಸ್ ನಿಲ್ದಾಣದಿಂದ ಹೊರಡುವ ಬಸ್, ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಹೋಗಿ ರಾತ್ರಿ 8.30ಕ್ಕೆ ಮರಳಿ ಮಂಗಳೂರು ಬಸ್ ನಿಲ್ದಾಣಕ್ಕೆ ಬರುತ್ತದೆ. ಆನ್‌ಲೈನ್ ಟಿಕೆಟ್ ಬುಕಿಂಗ್ (9663211553) ಕೂಡ ಅವಕಾಶ ನೀಡಲಾಗಿದೆ.

‘ದಸರಾ ದರ್ಶನ ಪ್ಯಾಕೇಜ್ ಪ್ರವಾಸವು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ. ಜನರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಿಗೆ ಇದನ್ನು ವಿಸ್ತರಿಸಲು ಯೋಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.