ವಿದ್ಯುತ್
ಮ೦ಗಳೂರು: ಮ೦ಗಳೂರು ವಿದ್ಯುತ್ ಸರಬರಾಜು ನಿಗಮದ (ಮೆಸ್ಕಾ೦) ಜಾಗೃತ ದಳದ ಅಧಿಕಾರಿಗಳು ಕಳೆದ 11 ತಿಂಗಳಲ್ಲಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನದ ಪ್ರಕರಣಗಳನ್ನು ಪತ್ತೆ ಮಾಡಿ, ಒಟ್ಟು ₹3.22 ಕೋಟಿ ದಂಡ ವಿಧಿಸಿದ್ದಾರೆ.
ಮೆಸ್ಕಾ೦ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಅವರ ಮಾರ್ಗದರ್ಶನ, ಹಿರಿಯ ಅಧಿಕಾರಿಗಳ ನಿಗಾ ಹಾಗೂ ಮೆಸ್ಕಾ೦ ಜಾಗೃತದಳದ ಪೊಲೀಸ್ ಉಪ ಅಧೀಕ್ಷಕ ಟಿ.ಆರ್. ಜಯಶಂಕರ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು.
2024ರ ಎಪ್ರಿಲ್ 1ರಿ೦ದ 2025ರ ಫೆಬ್ರುವರಿ 25ರವರೆಗಿನ ಅವಧಿಯಲ್ಲಿ 28,390 ಸ್ಥಾವರಗಳನ್ನು ಪರಿಶೀಲಿಸಿದ ಅಧಿಕಾರಿಗಳು ವಿದ್ಯುತ್ ಕಳ್ಳತನ ಮತ್ತು ದುರುಪಯೋಗದ 1,170 ಪ್ರಕರಣಗಳನ್ನು ಪತ್ತೆಮಾಡಿ ತಪ್ಪಿತಸ್ಥರಿಗೆ ಒಟ್ಟು ₹3,22,11,000 ದಂಡ ವಿಧಿಸಿದ್ದಾರೆ.
ಎಲ್ಲಾದರೂ ವಿದ್ಯುತ್ ಕಳ್ಳತನವಾಗುತ್ತಿರುವ ಮಾಹಿತಿ ಲಭಿಸಿದರೆ ಗ್ರಹಕರು ಮೆಸ್ಕಾಂನ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಕಳ್ಳತನ ತಪ್ಪಿಸಲು ಸಹಕರಿಸಬೇಕು. ಮಾಹಿತಿ ನೀಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಮೆಸ್ಕಾ೦ ಜಾಗೃತ ದಳದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಪೊಲೀಸ್ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಸ್ಕಾ೦ ಜಾಗೃತ ದಳದ ದೂರವಾಣಿ ಸಂಖ್ಯೆ (ಕ್ರಮವಾಗಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್):
ದಕ್ಷಿಣ ಕನ್ನಡ 9480833083, 9448289436, ಉಡುಪಿ ಜಿಲ್ಲೆ: 9480833084, 9448289441 ಚಿಕ್ಕಮಗಳೂರು ಜಿಲ್ಲೆ: 9480833086, 9448289556 ಶಿವಮೊಗ್ಗ ಜಿಲ್ಲೆ: 94480833085, 9448289452.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.