ಬಂಧನ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡನಾಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ಭಾನುವಾರ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಕಂಕನಾಡಿಯ ಮ್ಯಾಕ್ ಮಾಲ್‌ನ ಪಾರ್ಕಿಂಗ್‌ನಲ್ಲಿ ಬ್ಲ್ಯಾಕ್ ಮೂನ್ ರೆಸ್ಟೊ ಕಫೆ ಎಂಬ ಹೆಸರಿನಲ್ಲಿ ಕೊಠಡಿಯೊಂದರಲ್ಲಿ ಬಾರ್ ನಡೆಸುತ್ತಿದ್ದ ಸಿದ್ದಿಕ್, ಅಬ್ದುಲ್ ನಾಸಿರ್ ಮತ್ತು ಸಫ್ವಾನ್ ಎಂಬವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
2024ರಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆದು ಕೆಫೆಟೇರಿಯಾ ಹೆಸರಿನಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು. ಗ್ರಾಹಕರನ್ನು ಮಾದಕ ಲೋಕದಲ್ಲಿ ತೇಲಿಸಿ ಮೂವರೂ ಹಣ ಸಂಪಾದಿಸುತ್ತಿದ್ದರು. ಆರೋಪಿಗಳಿಂದ ಹುಕ್ಕಾ ಸೇದುವ ಉಪಕರಣಗಳು, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ, ಎಸ್ಐ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ಎಎಸ್ಐ ಸುಜನ್ ಶೆಟ್ಟಿ, ಪೂರ್ವ ಠಾಣೆಯ ಪಿಎಸ್ಐ ಮನೋಹರ್ ಪ್ರಸಾದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.