
ಕಾರ್ಯಕ್ರಮದಲ್ಲಿ ದ್ವೇಷಭಾಷಣ ತಡೆಯಲು ₹ 2 ಲಕ್ಷ ಭದ್ರತಾ ಠೇವಣಿ | ಅರೆಬರೆ ಮಾಹಿತಿ ಹಂಚಿ ಕೋಮುದ್ವೇಷ ಹರಡಲು ಯತ್ನ: ಕಮಿಷನರ್
ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ರೌಡಿಗಳ ಪಟ್ಟಿಯಲ್ಲಿ ಹೆಸರಿರುವ 807 ಮಂದಿಯೂ ಸೇರಿದಂತೆ ಒಟ್ಟು 895 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ.
‘ಮುಚ್ಚಳಿಕೆ ಬರೆದುಕೊಟ್ಟವರಲ್ಲಿ 521ಮಂದಿ ಹಿಂದೂಗಳು ಹಾಗೂ 351 ಮಂದಿ ಮುಸ್ಲಿಮರು ಹಾಗೂ 23 ಮಂದಿ ಇತರ ಧರ್ಮದವರು ಇದ್ದಾರೆ. ಹಿಂದೂಗಳ ಪೈಕಿ 474 ಮಂದಿ ರೌಡಿಗಳ ಪಟ್ಟಿಯಲ್ಲಿ ಹೆಸರಿರುವವರು ಹಾಗೂ 47 ಮಂದಿ ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳು. ಮುಸ್ಲಿಮರ ಪೈಕಿ 321 ಮಂದಿ ರೌಡಿಗಳ ಪಟ್ಟಿಯಲ್ಲಿ ಹೆಸರಿರುವವರು ಹಾಗೂ 30 ಮಂದಿ ಇತರರು. ಇತರ ಧರ್ಮದವರಲ್ಲಿ 11 ಮಂದಿ ರೌಡಿಶೀಟರ್‌ಗಳು ಹಾಗೂ 23 ಮಂದಿ ಇತರರು’ ಎಂದು ಕಮಿನಷರ್ ವಿವರಿಸಿದ್ದಾರೆ.
ನಗರದಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ‘ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳುವ ವಿಚಾರದಲ್ಲಿ ತಾರತಮ್ಯ ನಡೆಸಲಾಗುತ್ತಿದೆ’ ಎಂಬ ಆರೋಪ ವ್ಯಕ್ತವಾಗಿದ್ದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್, ಈ ಕುರಿತ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ.
‘ಬಜಪೆಯಲ್ಲಿ ಶಾರದೋತ್ಸವ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿ ನೀಡುವ ಮುನ್ನ ವಿಶ್ವ ಹಿಂದೂ ಪರಿಷತ್/ ಬಜರಂಗದಳದಿಂದ ಹಾಗೂ ಪ್ರತಿಭಟನೆಗೆ ಅನುಮತಿ ನೀಡುವ ಮುನ್ನ ಎಸ್‌ಡಿಪಿಐನಿಂದ ತಲಾ ₹ 2 ಲಕ್ಷ ಭದ್ರತಾ ಠೇವಣಿ ಪಡೆಯಲಾಗಿತ್ತು. ಇಂತಹ ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.
‘ಪೊಲೀಸರು ಯಾರ ವಿರುದ್ಧವೂ ಯಾವುದೇ ಪೂರ್ವದ್ವೇಷದಿಂದ ಕ್ರಮ ಕೈಗೊಳ್ಳುವುದಿಲ್ಲ. ನಮ್ಮವರು ಸಾಕ್ಷಿ ಪುರಾವೆಗಳ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಸಾರ್ವಜನಿಕ ನೆಮ್ಮದಿಗೆ ಭಂಗವನ್ನು ಉಂಟುಮಾಡುವವರ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಅಧಿಕಾರ ಪೊಲೀಸರಿಗೆ ಇದೆ. ಅದನ್ನು ಇನ್ನು ಮುಂದೆಯೂ ಬಳಸುತ್ತೇವೆ’ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
‘ಅರೆಬರೆ ಮಾಹಿತಿ ಹಂಚಿಕೊಳ್ಳುವ ಮೂಲಕ ಮುಗ್ಧ ಸಾರ್ವಜನಿಕರ ಮನಸುಗಳಲ್ಲಿ ಕೋಮುದ್ವೇಷ ಹರಡುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಅಪರಾಧ ಚಟುವಟಿಕೆ ನಿಯಂತ್ರಣ ಜನರ ಕೈಯಲ್ಲೇ ಇದೆ. ಯಾರು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೋ ಆ ಸಮುದಾಯದವರ ಅಪರಾಧ ಕೃತ್ಯಗಳ ಸಂಖ್ಯೆಯೂ ಜಾಸ್ತಿ ಇರುತ್ತದೆ. ಅದಕ್ಕೆ ತಕ್ಕಂತೆ ಪೊಲೀಸರು ಕ್ರಮ ವಹಿಸುತ್ತಾರೆ’ ಎಂದು ಅವರು ತಿಳಿಸಿದ್ದಾರೆ.
‘ಭದ್ರತಾ ಠೇವಣಿಯ ₹ 10.15 ಲಕ್ಷ ಮುಟ್ಟುಗೋಲು’
‘ಮುಚ್ಚಳಿಕೆಯ ಷರತ್ತುಗಳನ್ನು ಉಲ್ಲಂಘಿಸಿದಕ್ಕಾಗಿ ಒಟ್ಟು 54 ಮಂದಿಯಿಂದ ಭದ್ರತಾ ಠೇವಣಿಯ ₹ 10.15 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವರಲ್ಲಿ 39 ಮಂದಿ ಹಿಂದೂಗಳು. ಅವರ ಭದ್ರತಾ ಠೇವಣಿಯಿಂದ ₹ 7.40 ಲಕ್ಷ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 13 ಮಂದಿ ಮುಸ್ಲಿಮರಿದ್ದು ಅವರ ಭದ್ರತಾ ಠೇವಣಿಯಿಂದ ₹ 2.40 ಲಕ್ಷ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇತರ ಧರ್ಮಕ್ಕೆ ಸೇರಿದ ಇಬ್ಬರ ಭದ್ರತಾ ಠೇವಣಿಯ ₹ 35 ಸಾವಿರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನಷ್ಟು ಪ್ರಕರಣಗಳಲ್ಲಿ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.