ADVERTISEMENT

ಮಂಗಳೂರು ಆರ್‌ಟಿಒ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 13:13 IST
Last Updated 15 ಡಿಸೆಂಬರ್ 2025, 13:13 IST
   

ಮಂಗಳೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಬಾಂಬ್ ಇಡಲಾಗಿದೆ ಎಂದು ಇ–ಮೇಲ್‌ ಮೂಲಕ ಸೋಮವಾರ ಬೆದರಿಕೆ ಒಡ್ಡಲಾಗಿದೆ. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಇಡೀ ಕಚೇರಿಯನ್ನು ಪರಿಶೀಲನೆ ನಡೆಸಿದ್ದು, ಎಲ್ಲೂ ಬಾಂಬ್‌ ಪತ್ತೆಯಾಗಿಲ್ಲ.

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ನಸುಕಿನಲ್ಲಿ 1 ಗಂಟೆ 19 ನಿಮಿಷಕ್ಕೆ ಕಚೇರಿಯ ಇ–ಮೇಲ್ ವಿಳಾಸಕ್ಕೆ ಮೇಲ್‌ ಬಂದಿತ್ತು. ಕಚೇರಿಯ ಸಿಬ್ಬಂದಿ ಅದನ್ನು ಮಧ್ಯಾಹ್ನ 12.05 ಗಂಟೆಗೆ ಓದಿದ್ದರು.

‘ಆರ್‌ಟಿಒ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸಲು ಪಾಕಿಸ್ತಾನದ ಐಎಸ್‌ಐ ಕೋಶಗಳ ತಮಿಳುನಾಡು ವಿಭಾಗವು ಮಾಜಿ ಎಲ್‌ಟಿಟಿಇಯವರ ಜೊತೆ ಸೇರಿಕೊಂಡಿದೆ. ಐದು ಕಡೆ ಬಾಂಬ್‌ಗಳನ್ನು ಇಡಲಾಗಿದೆ’ ಎಂದು ಆ ಇ–ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಉಪ ಸಾರಿಗೆ ಆಯುಕ್ತ (ಪ್ರಭಾರ) ಮುರುಗೇಂದ್ರ ಬಿ.ಶಿರೋಲ್ಕರ್‌ ಅವರು ಈ ಬಗ್ಗೆ ನಗರ ದಕ್ಷಿಣ ಠಾಣೆಗೆ ದೂರು ನೀಡಿದ್ದರು.

ADVERTISEMENT

‘ಡಿಟಿಒ ಅವರಿಂದ ಬಂದ ದೂರನ್ನು ಆಧರಿಸಿ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಎಲ್ಲೂ ಬಾಂಬ್ ಪತ್ತೆಯಾಗಿಲ್ಲ. ಹುಸಿ ಸಂದೇಶ ಕಳುಹಿಸಿದ ಬಗ್ಗೆ ನಗರ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಕುರಿತ ತನಿಖೆ ಪ್ರಗತಿಯಲ್ಲಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ ಸಿ.ಎಚ್‌. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.