
ಮಂಗಳೂರು: ಚಾವಣಿಯೊಂದು ಬಿಟ್ಟು ಇಲ್ಲಿ ಬೇರೇನೂ ಇಲ್ಲ. ಜನರು ನಿಂತುಕೊಳ್ಳುವಲ್ಲೇ ಗಡದ್ದಾಗಿ ನಿದ್ದೆ ಮಾಡುವವರು ಮಧ್ಯಾಹ್ನದ ಹೊತ್ತಿನಲ್ಲೇ ಕಾಣಸಿಗುತ್ತಾರೆ. ಅವರ ಪೈಕಿ ಹಲವರು ಒಂದಿಷ್ಟು ಏರಿಸಿಕೊಂಡು ಬಂದವರು. ಸಿಗರೇಟ್ ಸೇದುವವರಿಗೂ ಇದುವೇ ಸೂಕ್ತ ಜಾಗ. ಪಾನ್, ಗುಟ್ಕಾ ತಿಂದು ಖಾಲಿ ಪ್ಯಾಕೆಟ್ ಎಸೆಯುವುದಕ್ಕೂ ಇದೇ ಜಾಗ ಬೇಕು, ಉಗುಳುವುದಕ್ಕಂತೂ ಇದು ಅತ್ಯಂತ ಸೂಕ್ತ ಸ್ಥಳ ಎಂದು ತಿಳಿದುಕೊಂಡವರೇ ಹೆಚ್ಚು.
ಮಂಗಳೂರಿನ ಸರ್ವಿಸ್ ಬಸ್ ಸ್ಟ್ಯಾಂಡ್ ಎಂಬ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್ ಸೇವೆಯೊಂದು ಸಮರ್ಪಕವಾಗಿದೆ ಎನ್ನುವುದು ಬಿಟ್ಟರೆ ಉಳಿದಂತೆ ಕಾಣಸಿಗುವುದು ಅವ್ಯವಸ್ಥೆ, ಅಸೌಕರ್ಯಗಳು. ಬಸ್ ನಿಲ್ದಾಣವನ್ನು ನಿತ್ಯವೂ ಬಳಸುವ ಪ್ರಯಾಣಿಕರು, ಬಸ್ ಚಾಲಕರು, ಏಜೆಂಟರು ಮುಂತಾಗಿ ಎಲ್ಲರಲ್ಲೂ ಇವೆ ಸಮಸ್ಯೆಗಳ ದೊಡ್ಡ ಪಟ್ಟಿ.
ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಂಡಿರುವ ಬಸ್ ನಿಲ್ದಾಣಕ್ಕೆ ಹೊಸ ರೂಪ ಬಂದಿದೆ. ಆದರೆ ಕುಳಿತುಕೊಳ್ಳಲು ಆಸನಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಒಳ್ಳೆಯ ಶೌಚಾಲಯವಾಗಲಿ ಇಲ್ಲ. ಸ್ವಚ್ಛತೆಯ ಬಗ್ಗೆಯಂತೂ ಮಾತನಾಡುವುದೇ ಬೇಡ ಎನ್ನುತ್ತಾರೆ ಬಳಕೆದಾರರು. ನವೀಕರಣಗೊಂಡಾಗ ಛಾವಣಿಯನ್ನು ಅಳವಡಿಸಲಾಗಿದೆ. ಆದರೆ ಅದು ಪ್ರತಿ ಪ್ಲ್ಯಾಟ್‌ಫಾರ್ಮ್ ಮೇಲೆ ಮಾತ್ರ ಇದೆ. ಆದ್ದರಿಂದ ನಿಲ್ದಾಣದ ಒಳಗೆ ಓಡಾಡುವಾಗ, ಬಸ್ ಹತ್ತುವಾಗ ಮತ್ತು ಇಳಿಯುವಾಗ ಬಿಸಿಲು–ಮಳೆ ತಾಗಲೇಬೇಕು. ಜಡಿಮಳೆಯಾದರಂತೂ ನಿಂತಿರುವ ಜಾಗದಲ್ಲೂ ಮೈಮೇಲೆ ನೀರು ಬೀಳುತ್ತದೆ.
ಕಾಂಕ್ರಿಟ್ ಹಾಸಿ ನಿರ್ಮಿಸಿರುವ ಪ್ಲ್ಯಾಟ್‌ಫಾರ್ಮ್‌ಗಳಿಗೆ ಅಳವಡಿಸಿರುವ ಟೈಲ್ಸ್ ಎದ್ದುಹೋಗಿವೆ. ಕೆಲವೆಡೆ ಬಸ್ ಬಡಿದು ಒಂದಷ್ಟು ಭಾಗಗಳೇ ಕುಸಿದು ಬಿದ್ದಿವೆ. ಹೀಗಾಗಿ ನಿಲ್ದಾಣದ ಅಂದವೇ ಕೆಟ್ಟುಹೋಗಿದೆ. ಯಾವ ಪ್ಲ್ಯಾಟ್‌ಫಾರ್ಮ್‌ನಲ್ಲೂ ಆಸನದ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ನಿಂತೇ ಬಸ್‌ಗೆ ಕಾಯಬೇಕು. ವಯಸ್ಸಾದವರು, ಅಶಕ್ತರು ಮತ್ತು ಗರ್ಭಿಣಿಯರು ಬಸ್ ತಡವಾಗುವುದಾದರೆ ಪ್ಲ್ಯಾಟ್‌ಫಾರ್ಮ್‌ನ ಅಂಚಿನಲ್ಲಿ ಕುಳಿತುಕೊಳ್ಳುತ್ತಾರೆ. ಕೆಲವೊಮ್ಮೆ ಹಾಗೆ ಕುಳಿತವರ ಕಾಲಿಗೆ ಸೋಕುತ್ತ ಬಸ್‌ಗಳು ಸಾಗುತ್ತವೆ.
ಮಾರುಕಟ್ಟೆಗೆ ಹೊಂದಿಕೊಂಡೇ ಇರುವುದರಿಂದ ಇಲ್ಲಿ ಸದಾ ಸದ್ದು–ಗದ್ದಲ. ಅದರ ಜೊತೆಯಲ್ಲಿ ಕೆಲವು ಬಸ್‌ನವರ ಅಬ್ಬರದ ಸಂಗೀತ, ಕರ್ಕಶ ಹಾರನ್ ಇತ್ಯಾದಿಗಳು ಪರಿಸರವನ್ನು ಮತ್ತಷ್ಟು ಹಾಳುಮಾಡುತ್ತವೆ. ಸಿಗರೇಟ್ ಸೇವನೆ, ಗುಟ್ಕಾ ಮುಂತಾದವುಗಳ ಜೊತೆಯಲ್ಲಿ ಮಾರುಕಟ್ಟೆಗೆ ತಾಗಿಕೊಂಡಿರುವ ಜಾಗದಲ್ಲಿ ಮಧ್ಯಾಹ್ನದ ವೇಳೆ ಒಣಮೀನು ಬಿಸಿಲಿಗೆ ಹಾಕುವುದು ಕೂಡ ಕಂಡುಬರುತ್ತದೆ. ಇದರಿಂದ ತೊಂದರೆಯಾಗುತ್ತದೆ ಎಂದು ಕೆಲವರು ದೂರಿದರು. ನಿಲ್ದಾಣದ ನಿರ್ಗಮನ ಭಾಗದಲ್ಲಿ ರಾತ್ರೋರಾತ್ರಿ ಗೂಡಂಗಡಿಗಳು ತಲೆ ಎತ್ತುತ್ತಿವೆ ಎಂಬ ಆರೋಪವೂ ಇದೆ.
ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ನಡುವೆ ಗೊಂದಲ ಉಂಟಾದದ್ದೇ ಮೂಲಸೌಲಭ್ಯ ಕೊರತೆಗೆ ಕಾರಣ ಎಂದು ಹೇಳಲಾಗುತ್ತಿದೆ. ‘ರಸ್ತೆ, ಮತ್ತಿತರ ಕಾಮಗಾರಿಗಳನ್ನು ನಗರ ಪಾಲಿಕೆ ಮಾಡಿದ್ದು ಛಾವಣಿ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಆಸನ ಮತ್ತಿತರ ಸೌಕರ್ಯ ನಮಗೆ ಸಂಬಂಧಪಟ್ಟ ವಿಷಯವಲ್ಲ’ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳಿದರೆ, ‘ಚಾವಣಿ ನಿರ್ಮಿಸಿದವರಿಗೆ ಅದರ ಕೆಳಗೆ ಕುಳಿತುಕೊಳ್ಳುವ ವ್ಯವಸ್ಥೆ ಬೇಕು ಎಂದು ತಿಳಿಯುವುದಿಲ್ಲವೇ..?’ ಎಂದು ಪಾಲಿಕೆ ಅಧಿಕಾರಿಗಳು ಪ್ರಶ್ನಿಸುತ್ತಾರೆ.
‘ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದ್ದು ಮಹಾನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ. ರಸ್ತೆ, ಪ್ಲ್ಯಾಟ್‌ಫಾರಂ ಮತ್ತಿತರ ಕಾಮಗಾರಿಗಳು ಮುಗಿಯುವಷ್ಟರಲ್ಲಿ ಮಹಾನಗರ ಪಾಲಿಕೆ ಪ್ರತಿನಿಧಿಗಳ ಅವಧಿ ಮುಗಿಯಿತು. ಆದ್ದರಿಂಧ ಚಾವಣಿ ಮಾಡುವಂತೆ ಸ್ಮಾರ್ಟ್ ಸಿಟಿಯ ಆಡಳಿತ ಮಂಡಳಿಗೆ ಕೋರಿಕೆ ಬಂತು. ಹೀಗಾಗಿ ಅದನ್ನಷ್ಟೇ ನಾವು ಮಾಡಿದ್ದು’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಎಂಜಿನಿಯರ್ ಚಂದ್ರಕಾಂತ್ ತಿಳಿಸಿದರು.
‘ಮೂಲಸೌಲಭ್ಯಗಳನ್ನು ಸ್ಮಾರ್ಟ್ ಸಿಟಿಯವರೇ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದಾದರೆ ಮಹಾನಗರ ಪಾಲಿಕೆ ಸೌಲಭ್ಯಗಳನ್ನ ಒದಗಿಸಲು ಗಮನ ನೀಡಲಿದೆ’ ಎಂದು ಪಾಲಿಕೆ ಅಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.
ಬಸ್ ನಿಲ್ದಾಣದ ಸುತ್ತ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ. ನೆಹರು ಮೈದಾನದ ಜೊತೆಯಲ್ಲಿ ಬಸ್ ನಿಲ್ದಾಣ ಕೂಡ ಒಂದು ಪಾಯಿಂಟ್ ಆಗಿದ್ದು ರಾತ್ರಿ ಗಸ್ತು ಕಡ್ಡಾಯವಾಗಿದೆ. ಹೊಯ್ಸಳ ವಾಹನ ಸದಾ ತಿರುಗಾಡುತ್ತಿರುತ್ತದೆ ಎಂದು ಮಂಗಳೂರು ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ಗುರುರಾಜ್ ತಿಳಿಸಿದರು.
‘ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು ಇಲ್ಲಿನ ದೊಡ್ಡ ಸಮಸ್ಯೆ. ಆದ್ದರಿಂದ ಕ್ಯಾಮೆರಾ ಅಳವಡಿಸುವಂತೆ ಮಹಾನಗರ ಪಾಲಿಕೆಗೆ ತಿಳಿಸಲಾಗಿದೆ. ಅದಕ್ಕೆ ಸ್ಪಂದನೆ ಸಿಗಲಿಲ್ಲ. ನಿರ್ಗಮನದ ಜಾಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಹೊಸ ಅಂಗಡಿಗಳ ಪೈಕಿ ಕೆಲವು ಖಾಲಿ ಉಳಿದಿವೆ. ಅಲ್ಲಿ ಕೆಲವೊಮ್ಮೆ ಕುಡುಕರು ಮಲಗುತ್ತಾರೆ. ಪೊಲೀಸರು ಅವರನ್ನು ಎಬ್ಬಿಸಿ ಬೇರೆ ಕಡೆ ಕಳುಹಿಸುತ್ತಾರೆ. ಅಲ್ಲಿ ಗೇಟ್ ಅಳವಡಿಸುವಂತೆಯೂ ಪಾಲಿಕೆಗೆ ತಿಳಿಸಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.