ADVERTISEMENT

ಅನಿಲ ಪೈಪ್‌ಲೈನ್‌ನಿಂದ ಕರ್ನಾಟಕ, ಕೇರಳ ಸಮಗ್ರ ಅಭಿವೃದ್ಧಿ: ಪ್ರಧಾನಿ ಮೋದಿ

ಸಾಗರ ಸಂಪನ್ಮೂಲಗಳ ಸದ್ಬಳಕೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 5:29 IST
Last Updated 6 ಜನವರಿ 2021, 5:29 IST
ಕೊಚ್ಚಿನ್‌–ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ ಉದ್ಘಾಟನೆಯ ಕಾರ್ಯಕ್ರಮವನ್ನು ಮಂಗಳೂರಿನ ಎಂಸಿಎಫ್‌ ಆವರಣದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌, ಗಣ್ಯರು ವೀಕ್ಷಿಸಿದರು.
ಕೊಚ್ಚಿನ್‌–ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ ಉದ್ಘಾಟನೆಯ ಕಾರ್ಯಕ್ರಮವನ್ನು ಮಂಗಳೂರಿನ ಎಂಸಿಎಫ್‌ ಆವರಣದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌, ಗಣ್ಯರು ವೀಕ್ಷಿಸಿದರು.   

ಮಂಗಳೂರು: ‘ಕರ್ನಾಟಕ, ಕೇರಳ ಒಳಗೊಂಡಂತೆ ಸಮುದ್ರ ತೀರ ಹೊಂದಿರುವ ದಕ್ಷಿಣದ ಇತರ ರಾಜ್ಯಗಳ ಸಾಗರ ಸಂಪನ್ಮೂಲ ಆಧರಿಸಿದ ನೀಲಿ ಆರ್ಥಿಕತೆಯ ಸಮಗ್ರ ಅಭಿವೃದ್ಧಿ ಯೋಜನೆಯು ಕಾರ್ಯಗತಗೊಳ್ಳುತ್ತಿದೆ. ಸಾಗರ ಸಂಪನ್ಮೂಲ ಆಧರಿಸಿದ ಆರ್ಥಿಕತೆಯು ಆತ್ಮನಿರ್ಭರ ಭಾರತದ ಪ್ರಮುಖ ಮೂಲವಾಗಿರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊಚ್ಚಿನ್‌–ಮಂಗಳೂರು ನಡುವಿನ ನೈಸರ್ಗಿಕ ಅನಿಲ ಪೈಪ್‌ಲೈನ್‌ ಅನ್ನು ವರ್ಚ್ಯುವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ ಸಂದರ್ಭದಲ್ಲಿ ಕರಾವಳಿ ತೀರದ ತ್ವರಿತ ಹಾಗೂ ಸಮತೋಲನದ ಅಭಿವೃದ್ಧಿ ಕುರಿತ ಮುನ್ನೋಟವನ್ನು ಅವರು ಹಂಚಿಕೊಂಡರು.

ಬಂದರುಗಳು ಮತ್ತು ಕರಾವಳಿ ಪ್ರದೇಶದ ರಸ್ತೆಗಳನ್ನು ವಿವಿಧ ರೀತಿಯಲ್ಲಿ ಸಂಪರ್ಕಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಸುಲಲಿತ ಜೀವನ ಮತ್ತು ಸುಗಮ ಉದ್ದಿಮೆ - ವಹಿವಾಟು ನಡೆಸುವುದಕ್ಕೆ ಆದರ್ಶವಾಗುವಂತೆ ಕರಾವಳಿ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.

ADVERTISEMENT

ಮೀನುಗಾರ ಸಮುದಾಯಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ‘ಮೀನುಗಾರರು ತಮ್ಮ ಜೀವನೋಪಾಯಕ್ಕೆ ಸಾಗರ ಸಂಪತ್ತನ್ನೇ ಅವಲಂಬಿಸಿದ್ದಾರೆ. ಇದರ ಜತೆಗೆ ಅವರು ಸಾಗರ ಸಂಪತ್ತಿನ ಕಾವಲುಗಾರರೂ ಹೌದು’ ಎಂದು ಬಣ್ಣಿಸಿದರು.

ಇದೇ ಕಾರಣಕ್ಕೆ ಸರ್ಕಾರವು ಕರಾವಳಿ ಪ್ರದೇಶದ ಪರಿಸರ ಸಂರಕ್ಷಿಸಲು ಮತ್ತು ಅದನ್ನು ಸಮೃದ್ಧಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ, ಪ್ರತ್ಯೇಕ ಮೀನುಗಾರಿಕೆ ಇಲಾಖೆ, ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ಜಲಚರಗಳ ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

₹20 ಸಾವಿರ ಕೋಟಿ ಮೊತ್ತದ ಮತ್ಸ್ಯ ಸಂಪದ ಯೋಜನೆ ಕರ್ನಾಟಕ ಮತ್ತು ಕೇರಳದ ಲಕ್ಷಾಂತರ ಮೀನುಗಾರರಿಗೆ ಪ್ರಯೋಜನ ನೀಡಲಿದೆ. ಕಡಲ ಕಳೆಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸುವುದರಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದಕ್ಕಾಗಿ ಸಾಗರ ಕಳೆ ಬೆಳೆಯುವುದಕ್ಕೆ ರೈತರನ್ನು ಉತ್ತೇಜಿಸಲಾಗುತ್ತಿದೆ ಎಂದೂ ಪ್ರಧಾನಿ ಮೋದಿ ಹೇಳಿದರು.

ವರ್ಚ್ಯುವಲ್‌ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇರಳ ರಾಜ್ಯಪಾಲ ಆರೀಫ್‌ ಮೊಹಮ್ಮದ್ ಖಾನ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಪ್ರಲ್ಹಾದ್ ಜೋಷಿ, ಮುರಳಿಧರನ್‌, ಗೇಲ್‌ ಇಂಡಿಯಾ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಜೈನ್ ಭಾಗವಹಿಸಿದ್ದರು.

ಶುದ್ಧ ಇಂಧನ, ಸಂಪರ್ಕಕ್ಕೆ ಒತ್ತು

‘21ನೇ ಶತಮಾನದಲ್ಲಿ ಸಂಪರ್ಕ ಮತ್ತು ಶುದ್ಧ ಇಂಧನ ಬಳಕೆಗೆ ಹೆಚ್ಚು ಮಹತ್ವ ನೀಡುವ ದೇಶಗಳು ಹೊಸ ಎತ್ತರಕ್ಕೆ ತಲುಪಲಿವೆ ಎಂದು ವಿಶ್ವದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ’ ಎಂದೂ ಪ್ರಧಾನಿ ಮೋದಿ ಹೇಳಿದರು.

2014ರ ಮೊದಲು 27 ವರ್ಷಗಳಲ್ಲಿ ಕೇವಲ 15 ಸಾವಿರ ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗ ನಿರ್ಮಿಸಲಾಗಿತ್ತು. ಆದರೆ, 6 ವರ್ಷಗಳಲ್ಲಿ ದೇಶದಾದ್ಯಂತ 16 ಸಾವಿರ ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ 5–6 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ’ ಎಂದರು.

‘ಕೇಂದ್ರ ಸರ್ಕಾರವು ಸಿಎನ್‌ಜಿ ಇಂಧನ ಕೇಂದ್ರಗಳು, ಪಿಎನ್‌ಜಿ ಸಂಪರ್ಕಗಳುಮತ್ತು ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದರಿಂದಾಗಿ ಸೀಮೆಎಣ್ಣೆಯ ಕೊರತೆ ತಗ್ಗಿದ್ದು, ಅನೇಕ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಸರ್ಕಾರಗಳು ಸೀಮೆಎಣ್ಣೆ ಮುಕ್ತವಾಗಿರುವುದಾಗಿ ಘೋಷಿಸಿಕೊಂಡಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.