ADVERTISEMENT

ಮಂಗಳೂರು | ಆಸ್ತಿ ತೆರಿಗೆ ಗದ್ದಲ; ‘ಅಪೂರ್ಣ’ ಸಭೆಯ ಗೊಂದಲ

ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಎರಡು ಬಾರಿ ಸ್ಥಗಿತ; ಮಾಹಿತಿ ನೀಡದೆ ಹೊರಹೋದ ಮೇಯರ್

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 14:36 IST
Last Updated 29 ಫೆಬ್ರುವರಿ 2024, 14:36 IST
ಮಹಾನಗರ ಪಾಲಿಕೆ ಕಚೇರಿಯ ಹೊರಗೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು
ಮಹಾನಗರ ಪಾಲಿಕೆ ಕಚೇರಿಯ ಹೊರಗೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು   

ಮಂಗಳೂರು: ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ ಆಡಳಿತ–ಪ್ರತಿಪಕ್ಷಗಳ ಸದಸ್ಯರಿಂದ ಆರೋಪ–‍ಪ್ರತ್ಯಾರೋಪ, ಎರಡು ಬಾರಿ ಸಭೆಯಿಂದ ಎದ್ದು ನಡೆದ ಮೇಯರ್‌, ಚದುರಿದ ಬಿಜೆಪಿ ಸದಸ್ಯರು, ಮಧ್ಯಾಹ್ನದ ವರೆಗೆ ಒಳಗೆಯೇ ಕುಳಿತು ಪ್ರತಿಭಟನೆ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕಾರ್ಪೊರೇಟರ್‌ಗಳು...

ಮಂಗಳೂರು ಮಹಾನಗರ ಪಾಲಿಕೆಯ ‘ಅಪೂರ್ಣ’ ಸಾಮಾನ್ಯ ಸಭೆಯಲ್ಲಿ ಗುರುವಾರ ನಡೆದ ಪ್ರಸಂಗಗಳು ಇವು.

ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸಂಬಂಧಿಸಿ ಚರ್ಚೆ ಆಗಬೇಕು ಎಂದು ಆಡಳಿತ ಪಕ್ಷವಾದ ಬಿಜೆಪಿಯ ಸದಸ್ಯೆ ಸಂಗೀತಾ ನಾಯಕ್ ಒತ್ತಾಯಿಸುತ್ತಿದ್ದಂತೆ ಆರಂಭವಾದ ಗದ್ದಲ ಕೊನೆಗೆ ಗೊಂದಲದಲ್ಲಿ ಮುಕ್ತಾಯವಾಯಿತು. ಪೀಠ ಬಿಟ್ಟು ಹೊರಹೋದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸಭೆ ಮುಂದುವರಿಯುವ ಅಥವಾ ಮಂದೂಡಿರುವ ಬಗ್ಗೆ ಯಾವ ಮಾಹಿತಿಯೂ ನೀಡದೇ ಇದ್ದುದೇ ಗೊಂದಲಕ್ಕೆ ಕಾರಣ.

ADVERTISEMENT

ಆಸ್ತಿ ತೆರಿಗೆ ಹೆಚ್ಚಳಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸದಸ್ಯರು, ಕೇಂದ್ರ ಸರ್ಕಾರ ಕಾರಣ ಎಂದು ಕಾಂಗ್ರೆಸ್ ಸದಸ್ಯರು ದೂರಿದರು. ಎರಡೂ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ಹೆಚ್ಚುತ್ತಿದ್ದಂತೆ ಮೇಯರ್ ಗಂಟೆ ಬಾರಿಸಿ ಹೊರನಡೆದರು.

ಬಿಜೆಪಿ ಸದಸ್ಯರು ಕೂಡ ಹೊರ ನಡೆದು ಮೇಯರ್ ಕಚೇರಿಯಲ್ಲಿ ಒಟ್ಟುಸೇರಿದರು. ಕಾಂಗ್ರೆಸ್ ಸದಸ್ಯರು ಒಳಗೆಯೇ ಕುಳಿತುಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು. 20 ನಿಮಿಷಗಳ ನಂತರ ಸಭೆ ಆರಂಭವಾಯಿತು. ಕಾಂಗ್ರೆಸ್ ಸದಸ್ಯರು ಫಲಕಗಳನ್ನು ಹಿಡಿದುಕೊಂಡು ಮತ್ತೆ ಮೇಯರ್ ಪೀಠದತ್ತ ಸಾಗಿದರು. ಮತ್ತೊಮ್ಮೆ ಗದ್ದಲವಾಯಿತು. ಮತ್ತೆ ಮೇಯರ್ ಎದ್ದುಹೋದರು. ಬಿಜೆಪಿ ಸದಸ್ಯರ ಪೈಕಿ ಕೆಲವರು ಮೇಯರ್ ಕಚೇರಿಯಲ್ಲಿ ಕುಳಿತರೆ ಕೆಲವರು ಚದುರಿದರು.

 ಮಧ್ಯಾಹ್ನ 1 ಗಂಟೆಯ ವರೆಗೂ ಒಳಗೆ ಕುಳಿತ ಕಾಂಗ್ರೆಸ್ ಸದಸ್ಯರು ನಂತರ ಪಾಲಿಕೆ ಕಚೇರಿಯ ಹೊರಗೆ ಬಂದು ಹೆಬ್ಬಾಗಿಲ ಬಳಿ ಪ್ರತಿಭಟನೆ ನಡೆಸಿದರು.

ಆಡಳಿತ ಪಕ್ಷದವರ ವಾದ

ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾರ್ಗಸೂಚಿ ಮೌಲ್ಯ ಹೆಚ್ಚಿಸಿದ್ದರಿಂದ ಈಗ ತೆರಿಗೆ ದುಪ್ಪಟ್ಟು ಆಗಿದೆ. ಮಂಗಳೂರು ನಗರದಲ್ಲಿ ಸೆಂಟ್‌ಗೆ ₹ 5 ಲಕ್ಷದಷ್ಟು ಇದ್ದ ಆಸ್ತಿ ಮೌಲ್ಯ ಈಗ ₹ 20 ಲಕ್ಷದ ವರೆಗೂ ಏರಿದೆ. ಜನರಿಗೆ ಆಸ್ತಿ ತೆರಿಗೆ ಹೊರೆಯಾಗಬಾರದು ಎಂಬುದು ನಮ್ಮ ಕಾಳಜಿ. ಈ ಹಿನ್ನೆಲೆಯಲ್ಲಿ 2021ರ ಮಾರ್ಗಸೂಚಿ ದರದ ಪ್ರಕಾದ ತೆರಿಗೆ ನಿರ್ಧರಿಸಲಾಗಿದೆ. ಆದರೆ ಈ ನಿರ್ಧಾರವನ್ನು ಪಾಲನೆ ಮಾಡದ ಹಾಗೆ ಪಾಲಿಕೆ ಆಯುಕ್ತರ ಮೇಲೆ ಸರ್ಕಾರ ಒತ್ತಡ ಹೇರಿದೆ. ಹೀಗಾಗಿ ತೆರಿಗೆ ಮೊತ್ತ ಏರಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ಸರ್ಕಾರದ ಮಾನದಂಡಗಳ ಪ್ರಕಾರ ತೆರಿಗೆ ಹೆಚ್ಚಳ ಮಾಡಿದ ನಂತರ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಮತ್ತು ಅನುಭವಿ ಶಶಿಧರ್ ಹೆಗ್ಡೆ ಜೊತೆ ಮಾತುಕತೆ ಮಾಡಲಾಗಿತ್ತು. ಆಯುಕ್ತರಿಗೂ ಸೂಚನೆ ನೀಡಲಾಗಿತ್ತು. ಆದರೆ ಈಗ ಎಲ್ಲವನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ತೆರಿಗೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲಾಗುವುದು. ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದ ಅವರು ವಿರೋಧ ಪಕ್ಷದವರಿಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದರು.

ವಿರೋಧ ಪಕ್ಷದವರ ವಾದ

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮಂಗಳೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಾಗುತ್ತದೆ. ಕಾಂಗ್ರೆಸ್ ಆಡಳಿತ ಇದ್ದ 5 ವರ್ಷ ಸ್ವಯಂಘೋಷಿತ ಆಸ್ತಿ ತೆರಿಗೆಯ ಹೊರೆ ಹಾಕಲಿಲ್ಲ. 2021ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ 2021ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಸ್ತಿ ಮೌಲ್ಯದ ಆಧಾರದಲ್ಲಿ ತೆರಿಗೆ ವಿಧಿಸಿದೆ ಎಂದು ಪ್ರತಿಪಕ್ಷ ನಾಯಕ ಪ್ರತಾಪಚಂದ್ರ ಶೆಟ್ಟಿ ದೂರಿದರು.

ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ತುಳಸಿಕಟ್ಟೆಗೂ ತೆರಿಗೆ ವಿಧಿಸಲಾಗಿದೆ ಎಂದು ಬಿಜೆಪಿಯವರು ಹೇಳಿದ್ದರು. ಈಗ ಮನೆಗೆ ಮಾತ್ರವಲ್ಲ, ಅಂಗಳಕ್ಕೂ ತೆರಿಗೆ ಬರುತ್ತಿದೆ. ₹ 10 ಸಾವಿರ ಇದ್ದ ತೆರಿಗೆ ಈಗ ₹ 50ರಿಂದ ₹ 70 ಸಾವಿರದ ವರೆಗೆ ಏರಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.