
ಮಂಗಳೂರು: ಬೆಂಗಳೂರಿನಿಂದ ಮಾದಕ ಪದಾರ್ಥಗಳನ್ನು ತಂದು ಇಲ್ಲಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದವರಿಗೆ ಮಾದಕ ವಸ್ತು ಎಂಡಿಎಂಎ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಗಳಿಂದ 90 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ತಾಲ್ಲೂಕಿನ ಮಲ್ಲೂರು ಗ್ರಾಮದ ಬದ್ರಿಯಾ ನಗರದ ಅಹಮ್ಮದ್ ಶಾಬೀತ್ (35 ವರ್ಷ), ಬಂಟ್ವಾಳ ತಾಲ್ಲೂಕು ಬಿ.ಮೂಡ ಗ್ರಾಮದ ಜೋಡುಮಾರ್ಗದ ಮಹಮ್ಮದ್ ಶಂಶೀರ್ (36), ಸರಪಾಡಿ ಗ್ರಾಮದ ಮಠದಬೆಟ್ಟುವಿನ ನೌಶೀನಾ ( 27) ಬಂಧಿತ ಆರೋಪಿಗಳು. ಇವರಲ್ಲಿ ಆರೋಪಿ ಅಹಮ್ಮದ್ ಶಾಬಿತ್ ಬಿ.ಸಿ.ರೋಡ್ ಕೈಕಂಬ, ಜೋಡುಮಾರ್ಗದಲ್ಲಿ ವಾಸವಾಗಿದ್ದ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ಅಹಮ್ಮದ್ ಶಾಬೀತ್ ಬಳಿ 60.5 ಗ್ರಾಂ, ಶಂಶೀರ್ ಬಳಿ 15.32 ಗ್ರಾಂ ಹಾಗೂ ನೌಶೀನಾ ಬಳಿ 11.53 ಗ್ರಾಂ ಎಂಡಿಎಂಎ ಸಿಕ್ಕಿದೆ. ಆರೋಪಿ ಅಹಮ್ಮದ್ ಶಾಬೀತ್ ಮಂಗಳೂರಿನಲ್ಲಿ ಮಾದಕ ಪದಾರ್ಥ ಮಾರಾಟ ದಂದೆ ನಡೆಸುವ ಪೆಡ್ಲರ್‌ಗಳಿಗೆ ಬೆಂಗಳೂರಿನಿಂದ ಎಂಡಿಎಂಎಯನ್ನು ಪೂರೈಸುತ್ತಿದ್ದ. ಈ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆರೋಪಿ ನೌಶಿನಾ ಎಂಬ ಮಹಿಳೆಯನ್ನೂ ಈ ಕೃತ್ಯಕ್ಕೆ ಬಳಸಿಕೊಂಡಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಅರ್ಕುಳದಲ್ಲಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.