ADVERTISEMENT

ಮಂಗಳೂರು | ಉದ್ಯೋಗದ ಹಕ್ಕು ಕಸಿದ ಕೇಂದ್ರ ಸರ್ಕಾರ: ಎಸ್. ಅಪ್ಪಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 2:40 IST
Last Updated 6 ಫೆಬ್ರುವರಿ 2026, 2:40 IST
‘ಮನರೇಗಾ ಬಚಾವೋ ಸಂಗ್ರಾಮ್’ ಪ್ರಯುಕ್ತ ಕಾಂಗ್ರೆಸ್ ಸಮಿತಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮೂಲಕ ತೆರಳಿ ಗಾಂಧಿ ಪ್ರತಿಮೆ ಎದುರು ಸಭೆ ನಡೆಸಿದರು : ಪ್ರಜಾವಾಣಿ ಚಿತ್ರ
‘ಮನರೇಗಾ ಬಚಾವೋ ಸಂಗ್ರಾಮ್’ ಪ್ರಯುಕ್ತ ಕಾಂಗ್ರೆಸ್ ಸಮಿತಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮೂಲಕ ತೆರಳಿ ಗಾಂಧಿ ಪ್ರತಿಮೆ ಎದುರು ಸಭೆ ನಡೆಸಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ‘ಮನರೇಗಾ ಬಚಾವೋ ಸಂಗ್ರಾಮ್’ ಪ್ರಯುಕ್ತ ಕಾಂಗ್ರೆಸ್ ಸಮಿತಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದ ಬಲ್ಮಠದಿಂದ ಲಾಲ್‌ಬಾಗ್‌ ಬಳಿ ಇರುವ ಗಾಂಧೀಜಿ ಪ್ರತಿಮೆಯವರೆಗೆ ಪಾದಯಾತ್ರೆ ನಡೆಸಿದರು. 

ವಿಬಿ ಜಿ ಗ್ರಾಮ್ ಜಿ ರದ್ದುಪಡಿಸಬೇಕು, ಮನರೇಗಾ ಮರುಸ್ಥಾಪಿಸಬೇಕು ಎಂದು ಘೋಷಣೆ ಕೂಗಿದರು. ಗಾಂಧೀಜಿ ಪ್ರತಿಮೆ ಎದುರು ಮಾತನಾಡಿದ ಕಾಂಗ್ರೆಸ್‌ ಮಹಿಳಾ ಸಮಿತಿಯ ಮಂಗಳೂರು ನಗರ ಘಟಕದ ಅಧ್ಯಕ್ಷೆ ಎಸ್. ಅಪ್ಪಿ, ‘ಗ್ರಾಮೀಣ ಪ್ರದೇಶಗಳ ರಸ್ತೆ, ಕೆರೆ, ಬಾವಿ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವರದಾನವಾಗಿದ್ದ ನರೇಗಾ ಯೋಜನೆಯ ಹೆಸರು ಹಾಗೂ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಹಳ್ಳಿಯ ಪ್ರತಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದ ನರೇಗಾ, ಬಡ ಜನರ ಹಕ್ಕು ಆಗಿತ್ತು. ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗದ ಭರವಸೆ ನೀಡಿತ್ತು. ಇದನ್ನು ಬದಲಿಸುವ ಮೂಲಕ ಕೇಂದ್ರ ಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡಿದೆ’ ಎಂದರು. 

ಕಾಂಗ್ರೆಸ್ ಮುಖಂಡ ಪದ್ಮರಾಜ್ ಪೂಜಾರಿ ಮಾತನಾಡಿ, ‘ಮಹಾತ್ಮ ಗಾಂಧಿ ರಾಮರಾಜ್ಯದ ಕನಸು ಕಂಡವರು. ಬಂಡವಾಳಶಾಹಿಗಳ ವಿರುದ್ಧ ಹೋರಾಟ ಮಾಡಿದವರು. ಯುಪಿಎ ನೇತೃತ್ವದ ಸರ್ಕಾರ ನರೇಗಾ ಯೋಜನೆಗೆ ಗಾಂಧೀಜಿ ಹೆಸರು ಇಟ್ಟಿತ್ತು. ಪಂಚಾಯಿತಿ ಮಟ್ಟದಲ್ಲಿ 100 ದಿನ ಕೆಲಸ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಿಸಿ, ಅಧಿಕಾರ ಕೇಂದ್ರೀಕರಣ ಮಾಡಲು ಹೊರಟಿದೆ. ಗ್ರಾಮ ಪಂಚಾಯಿತಿಗಳ ಹಕ್ಕು ಮೊಟಕುಗೊಳಿಸಿದೆ. ಯೋಜನೆ ಬದಲಿಸುವ ಇಚ್ಛೆ ಇದ್ದರೆ, ಕೂಲಿ ದರದಲ್ಲಿ ಹೆಚ್ಚಳ ಮಾಡಬಹುದಿತ್ತು. ಬಂಡವಾಳಶಾಹಿಗಳನ್ನು ಬೆಂಬಲಿಸುವ ಎನ್‌ಡಿಎ ನೇತೃತ್ವದ ಸರ್ಕಾರವು ಬಡವರ ಕುತ್ತಿಗೆ ಹಿಸುಕಿದೆ’ ಎಂದರು. 

ADVERTISEMENT

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ‘ಬಿಜೆಪಿಯವರಿಗೆ ಗಾಂಧೀಜಿ ಮತ್ತು ಸಂವಿಧಾನ ಎರಡರ ಮೇಲೆಯೂ ನಂಬಿಕೆ ಇಲ್ಲ. ಹೀಗಾಗಿ, ಮನರೇಗಾ ಯೋಜನೆಯ ಹೆಸರು ಬದಲಿಸಿದ್ದಾರೆ’ ಎಂದರು. 

ಮಾಜಿ ಶಾಸಕ ಜೆ.ಆರ್.ಲೋಬೊ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ನಿಗಮಗಳ ಅಧ್ಯಕ್ಷರಾದ ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ಮುಖಂಡರಾದ ಸುರೇಶ್ ಬಲ್ಲಾಳ್, ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಡೆನ್ನಿಸ್ ಡಿಸಿಲ್ವ, ಸುಹಾನ್ ಆಳ್ವ, ದಿನೇಶ್ ಮುಳೂರ್, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ವಿನಯ್ ರಾಜ್, ಪ್ರವೀಣ್ ಆಳ್ವ, ಟಿ. ಕೆ. ಸುಧೀರ್, ಚಂದ್ರಕಲಾ ಜೋಗಿ, ರೂಪ ಚೇತನ್ ಇದ್ದರು. 

ದಾಖಲೆಯಲ್ಲಿ ವಿಬಿ ಜಿ ಗ್ರಾಮ್ ಜಿ ಎಂದಿದ್ದರೂ ಜಿ ರಾಮ್ ಜಿ ಎನ್ನುತ್ತ ಬಿಜೆಪಿಯವರು ಭಾವನಾತ್ಮಕವಾಗಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಪದ್ಮರಾಜ್ ಪೂಜಾರಿ ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.