
ಬೆಳ್ತಂಗಡಿ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್‌ಐಟಿ) ವಶಪಡಿಸಿಕೊಂಡಿದ್ದ ಮೊಬೈಲ್‌ಗಳನ್ನು ಮರಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬೆಳ್ತಂಗಡಿಯ ಜೆಎಂಎಫ್‌ಸಿ ಹೆಚ್ಚುವರಿ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಈ ಪ್ರಕರಣ ಸಂಬಂಧ ಉಜಿರೆಯ ಗಣೇಶ್ ಶೆಟ್ಟಿ ಮತ್ತು ಗಿರೀಶ್ ಮಟ್ಟಣ್ಣವರ್ ಅವರ ಮೊಬೈಲ್‌ಗಳನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿತ್ತು. ತಮ್ಮ ಮೊಬೈಲ್‌ಗಳನ್ನು ಮರಳಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅವರಿಬ್ಬರು ನ್ಯಾಯಾಲಯಕ್ಕೆ ವಕೀಲರ ಮೂಲಕ ಇದೇ 24ರಂದು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇದೇ 26ರಂದು ವಿಚಾರಣೆ ನಡೆದಿತ್ತು. ನ್ಯಾಯಾಲಯ ಅವರ ಕೋರಿಕೆಯನ್ನು ಪುರಸ್ಕರಿಸಿಲ್ಲ.
ಎಸ್‌ಐಟಿ ವರದಿ– ವಿಚಾರಣೆ ಜ.3ಕ್ಕೆ ಮುಂದೂಡಿಕೆ:
ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಸುಳ್ಳು ಪುರಾವೆಗಳನ್ನು ಸಲ್ಲಿಸಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಲಾಗಿದೆ ಎಂಬ ಬಗ್ಗೆ ಎಸ್ಐಟಿ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 215 ಅಡಿ ನ.20ರಂದು ವರದಿ ಸಲ್ಲಿಸಿತ್ತು. ಸಾಕ್ಷಿ ದೂರುದಾರನಾಗಿದ್ದ ಚಿನ್ನ ಸಿ.ಎನ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ್, ಜಯಂತ್ ಟಿ., ವಿಠಲ ಗೌಡ, ಸುಜಾತಾ ಭಟ್ ನ್ಯಾಯಾಲಯದ ದಾರಿ ತಪ್ಪಿಸಿದ ಕುರಿತ ಮುಂದಿನ ತನಿಖೆಗೆ ಬಿಎನ್‌ಎಸ್ಎಸ್ ಸೆಕ್ಷನ್ 379ರ ಅಡಿ ನಿರ್ದೇಶನ ನೀಡುವಂತೆ ಎಸ್‌ಐಟಿ ಕೋರಿತ್ತು. ಇದರ ವಿಚಾರಣೆ ಇದೇ 26ರಂದು ನಡೆದಿದ್ದು, ಸೋಮವಾರ ಈ ಕುರಿತು ಆದೇಶ ಪ್ರಕಟಿಸುವ ನಿರೀಕ್ಷೆ ಇತ್ತು.
ನ್ಯಾಯಾಲಯವು ಇದರ ವಿಚಾರಣೆಯನ್ನು 2026ರ ಜ.3ಕ್ಕೆ ಮುಂದೂಡಿದ್ದು, ಅಂದೇ ಆದೇಶ ಪ್ರಕಟಿಸುವ ನಿರೀಕ್ಷೆ ಇದೆ.
ಎಸ್ಐಟಿಯ ಎಸ್.ಪಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸೋಮವಾರ ಹಾಜರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.