ADVERTISEMENT

ಉಪ್ಪಿನಂಗಡಿ |ರಾಷ್ಟ್ರೀಯ ಹೆದ್ದಾರಿ 77; ಮಂದಗತಿ ಕಾಮಗಾರಿ: ಸವಾರರ ಸಂಕಷ್ಟ

ಸಿದ್ದಿಕ್ ನೀರಾಜೆ
Published 17 ಅಕ್ಟೋಬರ್ 2025, 5:31 IST
Last Updated 17 ಅಕ್ಟೋಬರ್ 2025, 5:31 IST
ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿ ಅಂಡರ್‌ಪಾಸ್‌ನಲ್ಲಿ ಕೆಸರು ನೀರು ತುಂಬಿರುವುದು 
ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿ ಅಂಡರ್‌ಪಾಸ್‌ನಲ್ಲಿ ಕೆಸರು ನೀರು ತುಂಬಿರುವುದು    

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕದ ಚತುಷ್ಪಥ ಕಾಮಗಾರಿ ಉಪ್ಪಿನಂಗಡಿ ಭಾಗದಲ್ಲಿ ಅಪೂರ್ಣಗೊಂಡಿದ್ದು,  ಅಲ್ಲಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಹಾಗೆಯೇ ಬಿಡಲಾಗಿದ್ದು, ಇದರಿಂದಾಗಿ ಈ ಭಾಗದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.

ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯಲ್ಲಿ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು, ಅದರ ಎರಡೂ ಬದಿಗೆ ಸರ್ವೀಸ್ ರಸ್ತೆಗಳಿವೆ. ಆದರೆ ಇಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ಇನ್ನೂ ನಡೆದಿಲ್ಲ. ರಸ್ತೆಯ ಉದ್ದಕ್ಕೂ ಗುಂಡಿಗಳಿವೆ. ಅದನ್ನು ಮುಚ್ಚುವ ಸಲುವಾಗಿ ಸಿಮೆಂಟ್ ಮಿಶ್ರಿತ ಜಲ್ಲಿ ಹುಡಿಯನ್ನು ಕಾಮಗಾರಿ ಗುತ್ತಿಗೆದಾರ ಸಂಸ್ಥೆಯು ಹಾಕುತ್ತಿದೆ. ಆದರೆ ಬಿಸಿಲು ಆವರಿಸಿದ ತಕ್ಷಣ ಇದರ ಸಿಮೆಂಟ್ ಮಿಶ್ರಣ ಒಣಗಿ ಹೋಗುತ್ತಿದ್ದು, ವಾಹನಗಳು ಸಂಚರಿಸುವಾಗ ಇಡೀ ಪ್ರದೇಶ ಜಲ್ಲಿಹುಡಿ ಮಿಶ್ರಿತ ಧೂಳಿನಿಂದ ಆವರಿಸುತ್ತದೆ. ಇದರಿಂದಾಗಿ ಇಲ್ಲಿನ ಹಲವರು ಅನಾರೋಗ್ಯದಿಂದ ಬಳಲುವಂತಾಗುತ್ತಿದೆ ಎಂಬ ದೂರುಗಳು ವ್ಯಕ್ತವಾಗಿದೆ.

ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಿರುವು ಪಡೆಯಲು ಅಂಡರ್‌ಪಾಸ್ ನಿರ್ಮಿಸಿದ್ದು, ಅದಕ್ಕೆ ಇನ್ನೂ ಕಾಂಕ್ರೀಟ್ ಹಾಕಿಲ್ಲ. ಹೊಂಡಗಳಿಗೆ ಹಾಕಲಾದ ಸಿಮೆಂಟ್ ಮಿಶ್ರಣ ಹೋದ ಬಳಿಕ ಉಳಿದ ದೊಡ್ಡ ದೊಡ್ಡ ಜಲ್ಲಿಕಲ್ಲುಗಳು ದ್ವಿಚಕ್ರ ವಾಹನ ಸವಾರರಿಗೆ ಸಂಕಟವನ್ನು ತಂದೊಡ್ಡಿವೆ. ಇನ್ನು ಧೂಳು ಬರದಿರಲೆಂದು ಈ ರಸ್ತೆಗೆ ನೀರು ಹಾಕಿದರೆ ರಸ್ತೆಯಿಡೀ ಕೆಸರುಮಯವಾಗಿ ಪಾದಚಾರಿ ಹಾಗೂ ದ್ವಿಚಕ್ರ ಸವಾರರು ಕೆಸರ ನೀರಿನ ಎರಚಾಟದಿಂದ ಕಂಗೆಡಿಸುವಂತೆ ಮಾಡುತ್ತಿದೆ.

ಉಪ್ಪಿನಂಗಡಿ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಸಾಗುವ ವಾಹನಗಳು ಏಕಮುಖ ಸಂಚಾರದ ಹೆದ್ದಾರಿಯನ್ನು ದಾಟಿ, ಅದೇ ಹೆದ್ದಾರಿಯಲ್ಲಿ ಸ್ವಲ್ಪ ದೂರದ ತನಕ ವಿರುದ್ಧ ದಿಕ್ಕಿನಲ್ಲಿ ಸಾಗಿ ಮತ್ತೊಂದು ಬದಿಯ ಸರ್ವೀಸ್‌ ರಸ್ತೆಯನ್ನು ಪ್ರವೇಶಿಸಬೇಕಾಗಿದೆ. ಈ ಸರ್ವೀಸ್‌ ರಸ್ತೆ ಕೂಡ ಕಿರಿದಾಗಿದ್ದು, ಆ ಕಡೆ, ಈ ಕಡೆಯಿಂದ ಎರಡು ಭಾರಿ ವಾಹನಗಳು ರಸ್ತೆಯಲ್ಲಿ ಬಂದರೆ ವಾಹನ ಚಲಾಯಿಸಲು ಸಂಕಷ್ಟಪಡಬೇಕಾದ ಸ್ಥಿತಿಯಿದೆ. ಇಲ್ಲಿ ಅವೈಜ್ಞಾನಿಕವಾಗಿ ವಾಹನಗಳಿಗೆ ಹೆದ್ದಾರಿ ಪ್ರವೇಶಿಸಲು ಅನುವು ಮಾಡಿಕೊಟ್ಟಿರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಎದುರಾಗುವ ಸಮಸ್ಯೆಯಿಂದಾಗಿ ಅಪಘಾತಕ್ಕೆ ಹೇತುವಾಗುತ್ತಿದೆ.

ADVERTISEMENT

ನೆಕ್ಕಿಲಾಡಿಯಲ್ಲಿ:

ನೆಕ್ಕಿಲಾಡಿಯಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆದಿದ್ದರೂ, ಸರ್ವೀಸ್ ರಸ್ತೆಗಳ ಕೆಲಸ ಅಪೂರ್ಣವಾಗಿದೆ. ಪುತ್ತೂರು ಕಡೆಯಿಂದ ಬರುವ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಅಂಡರ್‌ಪಾಸ್ ಮೂಲಕ ಮತ್ತೊಂದು ರಸ್ತೆಯಲ್ಲಿ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ವಾಹನಗಳು ನೇರವಾಗಿ ಹೆದ್ದಾರಿಗೆ ನುಗ್ಗುತ್ತವೆ. ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳು ನೆಕ್ಕಿಲಾಡಿ ಜಂಕ್ಷನ್‌ನಿಂದ ಸ್ವಲ್ಪ ದೂರದ ತನಕ ಏಕಮುಖ ಸಂಚಾರವನ್ನು ಪಡೆಯಬೇಕಾಗಿದೆ. ಮತ್ತೊಂದು ಹೆದ್ದಾರಿಯಲ್ಲಿ ಬಿ.ಸಿ.ರೋಡ್‌ನಿಂದ ಉಪ್ಪಿನಂಗಡಿ ಕಡೆಗೆ ಬರುವ ವಾಹನಗಳು ಸಾಗಿ ಬರುತ್ತವೆ. ಆದರೆ ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ಎರಡೂ ಹೆದ್ದಾರಿಗಳ ಮಧ್ಯೆ ಯಾವುದೇ ಡಿವೈಡರ್ ಅಳವಡಿಸದೇ ಉದ್ದಕ್ಕೆ ತೆರೆದು ಇಡಲಾಗಿದೆ. ಹೀಗಾಗಿ ಇಲ್ಲಿ ನಿರಂತರವಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ.

ದಿನಕ್ಕೊಂದು ಪಥ ಬದಲಾವಣೆ:

ಒಂದು ಕಡೆ ಆರಂಭಿಸಿದ ಕಾಮಗಾರಿಯನ್ನು ಮುಗಿಸಿ ಮತ್ತೆ ಬೇರೆ ಕಡೆ ಕಾಮಗಾರಿ ನಡೆಸಲು ಈ ಗುತ್ತಿಗೆದಾರ ಸಂಸ್ಥೆ ಮುಂದಾಗುತ್ತಿಲ್ಲ. 200-300 ಮೀಟರ್‌ನಷ್ಟು ದೂರ ಕಾಮಗಾರಿ ನಡೆದರೆ, ಮುಂದಿನ ಕಾಮಗಾರಿ ಬಾಕಿಯಾಗಿರುತ್ತದೆ. ಒಂದೋ ಎರಡು ತಿಂಗಳು ಬಿಟ್ಟು ಮತ್ತೆ ಆ ಕಾಮಗಾರಿಯನ್ನು ನಡೆಸಲಾಗುತ್ತದೆ. ಇದರಿಂದಾಗಿ ಹೆದ್ದಾರಿಯ ಪಥ ದಿನಕ್ಕೊಂದು ಕಡೆಗೆ ಬದಲಾವಣೆಯಾಗಿರುತ್ತದೆ. ಇಂದು ಹೋದ ದಾರಿ ನಾಳೆ ಮುಚ್ಚಿ ಬೇರೆ ದಾರಿಯ ಮೂಲಕ ಬರಬೇಕಾಗುತ್ತದೆ. ಇದು ಕೂಡ ವಾಹನ ಸವಾರರಿಗೆ ಗೊಂದಲವನ್ನುಂಟು ಮಾಡುತ್ತಿದೆ.

ಒಟ್ಟಿನಲ್ಲಿ ಮೊದಲಾಗಿ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ನಡೆಸಬೇಕು. ಅದನ್ನು ಪೂರ್ಣಗೊಳಿಸಿದ ಬಳಿಕ ಉಳಿದ ಕಾಮಗಾರಿ ನಡೆಸಬೇಕು ಎಂಬ ಆಗ್ರಹ ಈ ಭಾಗದ ಜನರದ್ದಾಗಿದೆ. ಅಪೂರ್ಣ ಹಂತದಲ್ಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನ ಸವಾರರು, ಈ ಭಾಗದ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಕಳಪೆ ಕಾಮಗಾರಿ:

ನೆಕ್ಕಿಲಾಡಿ ಗ್ರಾಮದ ಒಂಟಿತಾಳಿ ಎಂಬಲ್ಲಿ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ. ಈಗಾಗಲೇ ಇಲ್ಲಿನ ತಡೆಗೋಡೆಯು ತಳಭಾಗದಿಂದ ಸ್ವಲ್ಪ ಮೇಲಕ್ಕೆ ಸಂಪೂರ್ಣ ರಸ್ತೆಯತ್ತ ಜಾರಿ ನಿಂತಿದೆ. ಎತ್ತರಿಸಿದ ರಸ್ತೆಗೆ ಅಳವಡಿಸಿರುವ ಸಿಮೆಂಟ್ ಇಟ್ಟಿಗೆಗಳಲ್ಲಿ ಬಿರುಕು ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕರ ದೂರಿನ ಬಳಿಕ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ಬಿರುಕು ಇದ್ದ 17 ಇಟ್ಟಿಗೆಗಳಿಗೆ ಸಿಮೆಂಟ್‌ನಲ್ಲಿ ತೇಪೆ ಹಾಕಿ ತೆರಳಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಶಬೀರ್ ಅಹಮ್ಮದ್ ದೂರಿದ್ದಾರೆ.


 
ಪ್ರತಿಭಟನೆ ಅನಿವಾರ್ಯ:

ಚತುಷ್ಪಥ ಕಾಮಗಾರಿಯಿಂದಾಗಿ ಧೂಳು, ಕೆಸರು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಇಲ್ಲಿನ ಜನರು ಅನುಭವಿಸುವಂತಾಗಿದೆ. ಸರ್ವೀಸ್ ರಸ್ತೆಯ ಕಾಮಗಾರಿಯನ್ನು ನಡೆಸಿ ಮುಂದಿನ ಕಾಮಗಾರಿ ನಡೆಸಬೇಕಾಗಿತ್ತು. ಆದರೆ ಎಲ್ಲಾ ಕಡೆ ಇಲ್ಲಿ ಅರ್ಧಂಬರ್ಧ ಕಾಮಗಾರಿಗಳಾಗಿವೆ. ನಮ್ಮ ತಾಳ್ಮೆಗೂ ಮಿತಿ ಇದೆ. ಇದೇ ರೀತಿ ಜನರನ್ನು ಸಮಸ್ಯೆಗೆ ಸಿಲುಕಿಸಿದರೆ ರಸ್ತೆಯಲ್ಲಿ ಧರಣಿ ನಡೆಸಿ ಪ್ರತಿಭಟಿಸುವುದು ನಮಗೆ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಹೇಳಿದರು.

ಉಪ್ಪಿನಂಗಡಿಯಲ್ಲಿ ನಿರ್ಮಿಸಲಾದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಾಗುವಾಗ ಆವರಿಸುವ ಧೂಳು 
ಮಳೆ ಬಿಟ್ಟ ಬಳಿಕ ಸರ್ವೀಸ್‌ ರಸ್ತೆಗೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರಿಟೀಕರಣ ಮಾಡಲಾಗುವುದು. ಉಳಿದ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಮಾಡಿ ಮುಗಿಸಲಾಗುವುದು. ಒಟ್ಟಿನಲ್ಲಿ ಡಿಸೆಂಬರ್ ಜನವರಿ ಒಳಗೆ ರಸ್ತೆಯನ್ನು ಲೋಕಾರ್ಪಣೆ ಮಾಡಲಾಗುವುದು.
-ರಘುನಾಥ ರೆಡ್ಡಿ ಯೋಜನಾ ವ್ಯವಸ್ಥಾಪಕ ಕೆಎನ್‌ಆರ್‌ ಗುತ್ತಿಗೆದಾರ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.