ADVERTISEMENT

ಬಂದರಿಗೆ ಕಂಟೈನರ್ ಹಡಗು: ನವ ಮಂಗಳೂರು ಬಂದರಿನಲ್ಲಿ ದಾಖಲೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 16:26 IST
Last Updated 26 ಜುಲೈ 2022, 16:26 IST
ನವ ಮಂಗಳೂರು ಬಂದರಿಗೆ ಬಂದಿದ್ದ ಎಂ.ವಿ.ನಯ್ಯರ್ ಕಂಟೈನರ್‌ ಕಾರ್ಗೊ
ನವ ಮಂಗಳೂರು ಬಂದರಿಗೆ ಬಂದಿದ್ದ ಎಂ.ವಿ.ನಯ್ಯರ್ ಕಂಟೈನರ್‌ ಕಾರ್ಗೊ   

ಮಂಗಳೂರು: ನವ ಮಂಗಳೂರು ಬಂದರಿಗೆ ಬಂದಿರುವ ಎಂ.ವಿ.ನೆಯ್ಯರ್ ಎಂಬ ಹಡಗು 1,936 ಟಿಇಯು (twenty foot equivalent unit) ಸಾಮರ್ಥ್ಯದ ಕಂಟೈನರ್ ಸರಕುಗಳನ್ನು ಹೊತ್ತುತಂದಿದೆ.

ಎಂಬಿಕೆ ಲಾಜಿಸ್ಟಿಕ್ಸ್‌ ಎಜೆನ್ಸಿಯ ಸಿಮಾ ಮರೈನ್ ಇಂಡಿಯಾಗೆ ಸೇರಿದ ಈ ಹಡಗು ಜೆಎಸ್‌ಡಬ್ಲ್ಯು ಕಂಟೈನರ್‌ ಟರ್ಮಿನಲ್‌ನಲ್ಲಿ ನಿಂತಿದೆ. ಈ ಹಡಗಿನಲ್ಲಿ 1,011 ಟಿಇಯು ಆಮದು ಕಂಟೈನರ್ ಮತ್ತು 925 ಟಿಇಯು ರಫ್ತು ಕಂಟೈನರ್‌ಗಳು ಇದ್ದು, ಸೋಮವಾರ ಇಲ್ಲಿಂದ ಮುಂದಕ್ಕೆ ಹೊರಟಿತು. ನವ ಮಂಗಳೂರು ಬಂದರಿನಲ್ಲಿ ಈ ವರೆಗೆ ನಿರ್ವಹಿಸಿದ ಅತಿದೊಡ್ಡ ಪಾರ್ಸೆಲ್ ಗಾತ್ರದ ಕಂಟೈನರ್ ಹಡಗು ಇದಾಗಿದೆ. ಈ ಹಿಂದೆ 2021 ಜೂನ್ 14ರಂದು ಎಂ.ವಿ. ಎಸ್‌ಎಸ್‌ಎಲ್ ಬ್ರಹ್ಮಪುತ್ರ ಹಡಗು 1,521 ಟಿಇಯುಗಳೊಂದಿಗೆ ಬಂದರಿಗೆ ಬಂದಿತ್ತು.

ನವ ಮಂಗಳೂರು ಬಂದರು ಪ್ರಾಧಿಕಾರವು 2000ನೇ ಇಸವಿಯಲ್ಲಿದ್ದ 1,000 ಟಿಇಯುದಿಂದ 2020–21ನೇ ಸಾಲಿನಲ್ಲಿ 1.5 ಲಕ್ಷ ಟಿಇಯುಗಳಷ್ಟು ಕಂಟೈನರ್ ದಟ್ಟಣೆಯನ್ನು ನಿರ್ವಹಿಸಿದೆ. ಕಳೆದ ಆರ್ಥಿಕ ವರ್ಷದವರೆಗೆ ಈ ಕಂಟೈನರ್‌ಗಳನ್ನು ಬಂದರಿನ ವಿವಿಧ ಸಾಮಾನ್ಯ ಕಾರ್ಗೊ ಬರ್ತ್‌ಗಳಲ್ಲಿ ನಿರ್ವಹಿಸಲಾಗುತ್ತಿತ್ತು. ನಿರಂತರ ಬೆಳವಣಿಗೆಯನ್ನು ಪರಿಗಣಿಸಿ ಮತ್ತು ಕಂಟೈನರ್ ಹಡಗುಗಳ ಸುಗಮ ನಿರ್ವಹಣೆಗೆ ಅನುಕೂಲವಾಗುವಂತೆ ಆಳವಾದ ಡ್ರಾಫ್ಟ್ ಬರ್ತ್‌ನಲ್ಲಿ (ನಂ.14) ಕಂಟೈನರ್‌ ನಿರ್ವಹಣೆಯ ಯಾಂತ್ರೀಕರಣ ಕೆಲಸ ಆರಂಭಿಸಿತ್ತು. ಮಂಗಳೂರು ಕಂಟೈನರ್ ಟರ್ಮಿನಲ್ ಪ್ರೈವೇಟ್‌ ಲಿಮಿಟೆಡ್‌ಗೆ ಪಿಪಿಪಿ ಮಾದರಿಯಲ್ಲಿ ನೀಡಿದ್ದ ಈ ಕಾಮಗಾರಿ ಈಗ ಪೂರ್ಣಗೊಂಡಿದೆ. ಹೀಗಾಗಿ, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಟೈನರ್‌ಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗಿದೆ. ಕಂಟೈನರ್‌ ಹಡಗುಗಳ ದಾಖಲೆ ನಿರ್ವಹಣೆಯ ಬಗ್ಗೆ ಎನ್‌ಎಂಪಿಎ ಅಧ್ಯಕ್ಷ ಡಾ. ಎ.ವಿ.ರಮಣ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.