ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂರು ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಕುರಿತು ಇ–ಮೇಲ್ ಮೂಲಕ ಬೆದರಿಕೆ ಒಡ್ಡಲಾಗಿದೆ. ಈ ಶಾಲೆಗಳನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದಾಗ ಯಾವುದೇ ಬಾಂಬ್‌ಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯ ಅತ್ತಾವರದ ಮಣಿಪಾಲ್ ಸ್ಕೂಲ್, ಮಂಗಳೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ನೀರುಮಾರ್ಗದ ಪ್ರೆಸಿಡೆನ್ಸಿ ಸ್ಕೂಲ್ ಮತ್ತು ಪಿ.ಯು. ಕಾಲೇಜು ಮತ್ತು ಕೇಂಬ್ರಿಜ್ ಸ್ಕೂಲ್‌ಗಳ ಪ್ರಾಂಗಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಡಲಾಗಿದೆ ಎಂದು ಇ–ಮೇಲ್ ಮೂಲಕ ಬೆದರಿಕೆ ಒಡದ್ಡಲಾಗಿತ್ತು. ತಕ್ಷಣವೇ ಈ ಶಾಲೆಗಳಿಗೆ ಪೊಲೀಸರ ತಂಡಗಳನ್ನು ಕಳುಹಿಸಲಾಗಿದೆ. ವಿಧ್ವಂಸಕ ಕೃತ್ಯ ತಡೆ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳಗಳನ್ನು ಕಳುಹಿಸಿ ತಪಾಸಣೆಗೆ ಒಳಪಡಿಸಲಾಗಿದೆ. ವಿಧ್ವಂಸಕ ಕೃತ್ಯಕ್ಕೆ ಕಾರಣವಾಗುವ ಯಾವುದೇ ಸಾಮಗ್ರಿಗಳು ಈ ಶಾಲೆಗಳ ಪ್ರಾಂಗಣದಲ್ಲಿ ಕಂಡು ಬಂದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
‘ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸುರಕ್ಷತೆ ಸಲುವಾಗಿ ಪೊಲೀಸ್ ಸಿಬ್ಬಂದಿಯನ್ನು ಈ ಶಾಲೆಗಳಿಗೆ ನಿಯೋಜಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳೂ ಜಾಗೃತೆ ವಹಿಸಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
‘ಇ–ಮೇಲ್ ಮೂಲಕ ಬೆದರಿಕೆ ಒಡ್ಡಿದ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಈ ಮೇಲ್‌ಗಳ ಮೂಲವನ್ನು ಹಾಗೂ ಇದನ್ನು ಕಳುಹಿಸಿದವರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.