ADVERTISEMENT

ಮಂಗಳೂರು | ಗಡೀಪಾರು ಪಟ್ಟಿಗೆ ಆಕ್ಷೇಪ: ಎಸ್‌ಪಿ ಭೇಟಿ ಮಾಡಿದ ಬಿಜೆಪಿ ನಿಯೋಗ

ಮಂಗಳೂರು ಪೊಲೀಸ್ ಕಮಿಷನರ್, ದ.ಕ. ಜಿಲ್ಲಾ ಎಸ್‌ಪಿ ಭೇಟಿ ಮಾಡಿದ ಬಿಜೆಪಿ ನಿಯೋಗ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:37 IST
Last Updated 3 ಜೂನ್ 2025, 15:37 IST
<div class="paragraphs"><p>ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಿಜೆಪಿಯ ನಿಯೋಗದಲ್ಲಿ ಕಿಶೋರ್ ಕುಮಾರ್‌ ಪುತ್ತೂರು, ಯತೀಶ್‌, ಹರೀಶ್ ಪೂಂಜ, ಡಾ.ವೈ.ಭರತ್ ಶೆಟ್ಟಿ, ಭಾಗಿರಥಿ ಮುರುಳ್ಯ, ಸತೀಶ್ ಕುಂಪಲ ಇದ್ದರು </p></div>

ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಿಜೆಪಿಯ ನಿಯೋಗದಲ್ಲಿ ಕಿಶೋರ್ ಕುಮಾರ್‌ ಪುತ್ತೂರು, ಯತೀಶ್‌, ಹರೀಶ್ ಪೂಂಜ, ಡಾ.ವೈ.ಭರತ್ ಶೆಟ್ಟಿ, ಭಾಗಿರಥಿ ಮುರುಳ್ಯ, ಸತೀಶ್ ಕುಂಪಲ ಇದ್ದರು

   

ಪ್ರಜಾವಾಣಿ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 36 ಮಂದಿಯನ್ನು ಗಡೀಪಾರು ಮಾಡಲು ನಿರ್ಧರಿಸಿರುವ ಜಿಲ್ಲಾಡಳಿತ, ಈ ಕುರಿತು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರ ಹೆಸರುಗಳನ್ನು ವಿನಾಕಾರಣ ಸೇರಿಸಿದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ADVERTISEMENT

ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ಬಿಜೆಪಿಯ ನಿಯೋಗವು ಮಂಗಳೂರು ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ಕೆ. ಅವರನ್ನು ಮಂಗಳವಾರ ಭೇಟಿ ಮಾಡಿತು. ಗಡೀಪಾರು ಕ್ರಮ ಹಾಗೂ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ ಬಗ್ಗೆ ಆಕ್ಷೇಪ ಸಲ್ಲಿಸಿತು.

ಈಚೆಗೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು, ಮುಖಂಡರನ್ನು ಗಡೀಪಾರು ಮಾಡುವ ಪ್ರಸ್ತಾವ ಕೈಬಿಡಬೇಕು. ಕಾರ್ಯಕರ್ತರ ಮನೆಗೆ ರಾತ್ರಿ ವೇಳೆ ತೆರಳಿ ವಿಚಾರಣೆ ನಡೆಸುವುದನ್ನು ನಿಲ್ಲಿಸಬೇಕು ಎಂದೂ ನಿಯೋಗವು ಆಗ್ರಹಿಸಿತು. 

ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಉಳಿಪಾಡಿ, ಹರೀಶ್ ಪೂಂಜ, ಭಾಗಿರಥಿ ಮುರುಳ್ಯ, ಬಿಜೆಪಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಮತ್ತಿತರರು ನಿಯೋಗದಲ್ಲಿದ್ದರು.

ಪೊಲೀಸ್ ಅಧಿಕಾರಿಗಳ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್ ಕುಂಪಲ, ‘ಜಿಲ್ಲೆಯಲ್ಲಿ  ತಿಂಗಳಿನಿಂದ ಈಚೆಗೆ ಶಾಂತಿ, ಸಾಮರಸ್ಯ ಕದಡುವ ಘಟನೆಗಳು ಮರುಕಳಿಸಿವೆ. ಈ ಬೆಳವಣಿಗೆಗಳ ಬಗ್ಗೆ ಇಬ್ಬರು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಹಂಚಿಕೊಂಡಿದ್ದೇವೆ. ಈ ಹಿಂದೆ ಇದ್ದ ಅಧಿಕಾರಿಗಳೇ ಗಡೀಪಾರು ಪ್ರಕ್ರಿಯೆ ಆರಂಭಿಸಿದ್ದರು ಎಂದು ಎಸ್ಪಿ ಹಾಗೂ ಕಮಿಷನರ್‌ ತಿಳಿಸಿದ್ದಾರೆ’ ಎಂದರು.

‘ಅಪರಾಧ ಪ್ರಕರಣಗಳಲ್ಲಿ ಭಾಗವಹಿಸದ ಹಿಂದುತ್ವವಾದಿ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಗಡೀಪಾರು ಮಾಡಲು ನೋಟಿಸ್ ನೀಡಿದ್ದು ಸರಿಯಲ್ಲ. ಹಿಂದುತ್ವಕ್ಕಾಗಿ ದುಡಿಯುತ್ತಿರುವವರನ್ನು ಕ್ರಿಮಿನಲ್‌ ರೀತಿ ಬಿಂಬಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಕಾರ್ಯಕರ್ತರ ಮನೆಗೆ ಪೊಲೀಸರು ವಿಚಾರಣೆ ನೆಪದಲ್ಲಿ ರಾತ್ರಿ ಹೊತ್ತಿನಲ್ಲಿ ಭೇಟಿ ನೀಡುವುದನ್ನು ನಿಲ್ಲಿಸಬೇಕು. ಈ ರೀತಿ ಮಾಡುವುದರಿಂದ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪನೆ ಆಗದು’ ಎಂದು ತಿಳಿಸಿದರು.

‘ಇಂತಹ ಕ್ರಮ ಕೈಗೊಳ್ಳುವುದಕ್ಕೆ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿನ ಜನಪ್ರತಿನಿಧಿಗಳ ಜೊತೆ ಚರ್ಚಿಸಬೇಕಿತ್ತು. ಹಿಂದೆಲ್ಲ ಅಹಿತಕರ ಘಟನೆ ನಡೆದಾಗ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಈ ಸಲ ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. 

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಎಫ್.ಐ.ಆರ್. ದಾಖಲಿಸಿದ್ದು, ಹಿಂದುತ್ವವಾದಿ ನಾಯಕರನ್ನು ಗುರುತಿಸಿ ಗಡಿಪಾರು ಮಾಡಲು ಹೊರಟಿರುವುದು, ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿಕೆ ಮಾಡಿರುವಂತಿದೆ. ಸಂಘ ಪರಿವಾರದ ಕಾರ್ಯಕರ್ತರ ಮನೋಬಲ ಕುಗ್ಗಿಸಲು ಪೊಲೀಸ್ ಇಲಾಖೆಯ ದುರ್ಬಳಕೆಯನ್ನು ನಿಲ್ಲಿಸದಿದ್ದರೆ ಹೋರಾಟ ಅನಿವಾರ್ಯ. ಈ ಬಗ್ಗೆ ಪರಿವಾರದ ಸಂಘಟನೆಗಳು ಮತ್ತು ಬಿಜೆಪಿ ಜೊತೆಯಾಗಿ ನಿರ್ಧಾರ ತೆಗೆದುಕೊಳ್ಳಲಿದೆ. ಅಮಾಯಕರು, ಸಂಘ ಪರಿವಾರದ ಕಾರ್ಯಕರ್ತರ ಜತೆಯಲ್ಲಿ ಪಕ್ಷ ಸದಾ ನಿಲ್ಲಲಿದೆ’ ಎಂದರು.

‘ಪೊಲೀಸ್‌ ಇಲಾಖೆಯು ಆಡಳಿತ ಪಕ್ಷದ ನಿರ್ದೇಶನ ಪಾಲಿಸದೇ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದೇವೆ. ಜಿಲ್ಲೆಯ ಶಾಂತಿ ಸ್ಥಾಪನೆಗೆ ಪಕ್ಷವು ಸದಾ ಸಹಕರಿಸಲಿದೆ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇವೆ’ ಎಂದರು. 

ಯಾವುದೇ ಧರ್ಮ ಅಥವಾ ಜಾತಿ ಮೇಲೆ ದ್ವೇಷದ ರಾಜಕಾರಣ ಮಾಡಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿ ಕ್ರಿಮಿನಲ್ ಕೆಲಸ ಮಾಡುವುದು. ಆಮೇಲೆ ಧರ್ಮದ ಹೆಸರು ಹೇಳುವುದು ತಪ್ಪಲ್ಲವೇ?
-ಸಿದ್ದರಾಮಯ್ಯ, ಮುಖ್ಯಮಂತ್ರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಎಸ್‌.ಪಿ ಅರುಣ್ ಕೆ. ಪ್ರಾಮಾಣಿಕ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಇದೊಂದು ಫಲಪ್ರದ ಭೇಟಿ.
ಸತೀಶ್ ಕುಂಪಲ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ

‘ಗಡೀಪಾರು ಪಟ್ಟಿ ತಯಾರಿಸಿದ್ದು ಕಾಂಗ್ರೆಸ್‌ ನಾಯಕರು’

‘ಅನೇಕ ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದವರ ಹೆಸರು ಗಡೀಪಾರಿಗಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರಿಗೆ ಸಮಸ್ಯೆ ಉಂಟುಮಾಡಬೇಕೆಂಬ ಉದ್ದೇಶದಿಂದ ಸಚಿವರು ಹಾಗೂ ಕಾಂಗ್ರೆಸ್‌ ನಾಯಕರು ಸೇರಿಕೊಂಡು ಈ ಗಡೀಪಾರು ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿದ್ದಾರೆ‘ ಎಂದು ನಿಯೋಗದಲ್ಲಿದ್ದ ಶಾಸಕ ಡಾ.ವೈ.ಭರತ್ ಶೆಟ್ಟಿ ದೂರಿದರು. ‘ಗೋಹತ್ಯೆ ಲವ್‌ ಜಿಹಾದ್‌ ಮುಂತಾದ ಸಮಸ್ಯೆಗಳನ್ನು ಹೇಳಿಕೊಂಡವರ ಮೇಲೆ ಪ್ರಚೋದನಕಾರಿ ಹೇಳಿಕೆಯ ನೆಪದಲ್ಲಿ ಎಫ್ಐಆರ್ ದಾಖಲು ಮಾಡುವುದು ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ. ಕಾರ್ಯಕರ್ತರ ಮೇಲೆ ಸುಮ್ಮನೆ ಪ್ರಕರಣ ದಾಖಲಿಸಿ ಕಿರುಕುಳ ನೀಡುವುದುನ್ನು ಖಂಡಿತಾ ಒಪ್ಪುವುದಿಲ್ಲ’ ಎಂದರು.  ‘ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಠಾಣೆಗಳು ಕಾಂಗ್ರೆಸ್‌ ಪಕ್ಷದ ಕಚೇರಿಯ ರೀತಿ ಕಾರ್ಯ ನಿರ್ವಹಿಸಬಾರದು. ಕಾನೂನು ಪಾಲನೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದೇವೆ’ ಎಂದು ತಿಳಿಸಿದರು.

‘ಹಿಂದೂಗಳ ದಮನಕ್ಕೆಂದೇ ತಯಾರಿಸಿದ ಪಟ್ಟಿ’

‘ಗಡೀಪಾರು ಮಾಡುವ ಸಲುವಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಮುಸಲ್ಮಾನರ ಹೆಸರು ಕೂಡ ಇದೆ ಎಂದು ನಮಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿ ಶಾಂತಿ ಕದಡುತ್ತಿರುವ ಮುಸ್ಲಿಂ ಮುಖಂಡರ ಹೆಸರುಗಳೇ ಇಲ್ಲ. ಹಿಂದುತ್ವವಾದಿ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಮಹೇಶ್ ಶೆಟ್ಟಿ ತಿಮರೋಡಿ ಭರತ್ ಕುಮ್ಡೇಲು ಮೊದಲಾದವರ ಹೆಸರುಗಳನ್ನು ಬೇಕೆಂದೇ ಸೇರಿಸಿದ್ದಾರೆ. ಹಿಂದೂಗಳನ್ನು ದಮನಿಸಲೆಂದೇ ತಯಾರಿಸಿದ ಪಟ್ಟಿ ಇದು’ ಎಂದು ನಿಯೋಗದಲ್ಲಿದ್ದ ಶಾಸಕ ಹರೀಶ್ ಪೂಂಜ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.