ADVERTISEMENT

ವಿಟ್ಲ | ಮಣ್ಣು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 14:14 IST
Last Updated 8 ಫೆಬ್ರುವರಿ 2024, 14:14 IST
   

ವಿಟ್ಲ: ಕನ್ಯಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಣ್ಣಿನ ಅಕ್ರಮ ಗಣಿಗಾರಿಕೆ (ರೆಡ್ ಬಾಕ್ಸೈಟ್ ದಂಧೆ) ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ಯಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಯೊಬ್ಬರು ತಮ್ಮ ಸಹೋದರನ ಜೊತೆಗೆ ಸೇರಿ ಸರ್ಕಾರದ ನಿವೇಶನಕ್ಕೆ ಕಾದಿರಿಸಿದ ನಾಲ್ಕು ಎಕರೆ ಜಾಗದಲ್ಲಿ ಮಣ್ಣು ಅಕ್ರಮ ಸಾಗಾಣಿಕೆ ಮಾಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ದೂರು ನೀಡಲಾಗಿದೆ. ತಹಶೀಲ್ದಾರರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರೂ, ಯಾವುದೇ ಕ್ರಮವಾಗಿಲ್ಲ. ಜಿಲ್ಲಾಧಿಕಾರಿ, ಭೂ ಮತ್ತು ಗಣಿ ಇಲಾಖೆಯ ರಾಜ್ಯ ನಿರ್ದೇಶಕರು ಭೂ ಮತ್ತು ಗಣಿ ಇಲಾಖೆ ಸಚಿವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ಕೊಳ್ನಾಡು, ಪಜೀರು ಇನ್ನಿತರ ಪ್ರದೇಶಗಳ ಪರವಾನಗಿ ಇಟ್ಟುಕೊಂಡು ಕನ್ಯಾನ ಗ್ರಾಮದಿಂದ ದಿನಕ್ಕೆ ಸಾವಿರಾರು ಟನ್ ಕೆಂಪು ಮಣ್ಣು ಸಾಗಣೆ ಮಾಡಲಾಗುತ್ತಿದೆ ಎಂದರು.

ಈ ಪ್ರದೇಶದಿಂದ ಮಣ್ಣು ಹೇರಿಕೊಂಡು ಪ್ರತಿದಿನ ನೂರಾರು ಅಧಿಕ ಭಾರದ ಲಾರಿಗಳು ಸಂಚರಿಸುವುದರಿಂದ ರಸ್ತೆಗಳು ಹದಗೆಟ್ಟು ಹೋಗಿವೆ. ಇದರಿಂದ ವಾಹನಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಧಾರ್ಮಿಕ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ತೊಂದರೆಯಾಗಬಹುದು. ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ರಾಜ್ಯ ಗಣಿ ಇಲಾಖೆಯಿಂದ ಜಿಪಿಎಸ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕೂಡ ಅಧಿಕಾರಿಗಳು ಇದನ್ನು ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ. ಗಣಿ ಇಲಾಖೆಯ ಉಪನಿರ್ದೇಶಕರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಅವರು ಗಣಿಗಾರಿಕೆ ಮಾಡುವವರ ಪರವಾಗಿದ್ದು, ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯ ಮೊಯಿದೀನ್ ಕುಂಞ, ಅಬ್ದುಲ್ ಮಜೀದ್ ಇದ್ದರು.

ಮಣ್ಣು ಸಾಗಣೆ ಮಾಡುವ ಲಾರಿಗಳು
ಮಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.