
ಮಂಗಳೂರು: ಹೃದ್ರೋಗಿಯೊಬ್ಬರಿಗೆ 35 ವರ್ಷಗಳ ಹಿಂದೆ ಅಭಿಧಮನಿಯಲ್ಲಿ ಅಳವಡಿಸಿದ್ದ ಪೇಸ್ ಮೇಕರ್ ತಂತಿಯನ್ನು ಒಮೆಗಾ ಆಸ್ಪತ್ರೆ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ರಹಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ.ಕೆ.ಮುಕುಂದ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಬುಧವಾರ ಮಾಹಿತಿ ನೀಡಿದ ಅವರು, ‘68 ವರ್ಷದ ವ್ಯಕ್ತಿಯೊಬ್ಬರು ಒಂದು ವರ್ಷದಿಂದ ಪದೇ ಪದೇ ಜ್ವರದಿಂದ ಬಳಲುತ್ತಿದ್ದರು. ಅವರ ಅಭಿಧಮನಿಯಲ್ಲಿ ಅಳವಡಿಸಿದ್ದ ಹಳೆಯ ಪೇಸ್ ಮೇಕರ್‌ನಿಂದಾಗಿ ಈ ಸಮಸ್ಯೆ ಎದುರಾಗುತ್ತಿರುವುದು ತಪಾಸಣೆ ವೇಳೆ ದೃಢಪಟ್ಟಿತ್ತು’ ಎಂದರು.
‘ಎಲೆಕ್ಟ್ರೊ ಫಿಸಿಯಾಲಜಿಸ್ಟ್ ಡಾ.ಯಾಜ್ಞಿಕ್ ಮುಕುಂದ್ ಕುಂಬಳೆ ಅವರು ಕ್ಯಾಥ್‌ಲ್ಯಾಬ್‌ನಲ್ಲಿ ಸುಮಾರು ಒಂದು ಗಂಟೆ ಚಿಕಿತ್ಸೆ ನೀಡುವ ಮೂಲಕ ರೋಗಿಯ ದೇಹದಲ್ಲಿದ್ದ ಪೇಸ್ ಮೇಕರ್ ತಂತಿಯನ್ನು ಶಸ್ತ್ರಚಿಕಿತ್ಸೆರಹಿತ ತಂತ್ರಜ್ಞಾನ ಬಳಸಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅರಿವಳಿಕೆ ತಜ್ಞೆ ಡಾ.ಮೇಘನಾ ಮುಕುಂದ್ ಸಹಕರಿಸಿದ್ದಾರೆ. ರೋಗಿಯು ದೀರ್ಘಕಾಲದ ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ. ಶಸ್ತ್ರಚಿಕಿತ್ಸೆರಹಿತವಾಗಿ ಪೇಸ್ ಮೇಕರ್ ಹೊರತೆಗೆಯುವ ಪ್ರಕ್ರಿಯೆ ಅತ್ಯಂತ ಸವಾಲಿನಿಂದ ಕೂಡಿರುತ್ತದೆ’ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಯಾಜ್ಞಿಕ್ ಮುಕುಂದ್, ಡಾ.ಮೇಘನಾ ಮುಕುಂದ್, ಡಾ.ಅಭಿಜಿತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.