ADVERTISEMENT

ಶತಮಾನದ ಬಾವಿ ಪುನರುಜ್ಜೀವನಕ್ಕೆ ಕ್ರಮ: ವೇದವ್ಯಾಸ ಕಾಮತ್

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ದಿವಾಕರ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:35 IST
Last Updated 19 ಸೆಪ್ಟೆಂಬರ್ 2020, 3:35 IST
ಹಂಪನಕಟ್ಟೆಯಲ್ಲಿ ಪತ್ತೆಯಾಗಿರುವ ಪುರಾತನ ಬಾವಿಯನ್ನು ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ದಿವಾಕರ್‌ ಪಾಂಡೇಶ್ವರ್‌ ಶುಕ್ರವಾರ ವೀಕ್ಷಿಸಿದರು.
ಹಂಪನಕಟ್ಟೆಯಲ್ಲಿ ಪತ್ತೆಯಾಗಿರುವ ಪುರಾತನ ಬಾವಿಯನ್ನು ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ದಿವಾಕರ್‌ ಪಾಂಡೇಶ್ವರ್‌ ಶುಕ್ರವಾರ ವೀಕ್ಷಿಸಿದರು.   

ಮಂಗಳೂರು: ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಹಾಗೂ ಪುರಾತತ್ವ ಇಲಾಖೆಗಳ ಸಹಭಾಗಿತ್ವದಲ್ಲಿ ಹಂಪನಕಟ್ಟೆಯಲ್ಲಿ ಪತ್ತೆಯಾಗಿರುವ ಶತಮಾನದ ಬಾವಿಯನ್ನು ಸಂರಕ್ಷಣೆ ಮಾಡುವ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮೇಯರ್ ದಿವಾಕರ ಪಾಂಡೇಶ್ವರ ಜೊತೆಗೆ ಶುಕ್ರವಾರ ಬಾವಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಭೆ ನಡೆಯಲಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈ ಬಾವಿಯ ಅಭಿವೃದ್ಧಿ ಮಾಡುವ ಬಗ್ಗೆ ಚರ್ಚಿಸಲಾಗುವುದು. ಬಾವಿಯ ನೀರನ್ನು ಉಪಯೋಗಿಸುವ ಕುರಿತಂತೆ ವೈಜ್ಞಾನಿಕ ತಪಾಸಣೆ ನಡೆಸಬೇಕಿದೆ ಎಂದು ಹೇಳಿದರು.

ADVERTISEMENT

ಪಾಲಿಕೆ ಸದಸ್ಯರಾದ ಪೂರ್ಣಿಮಾ, ಲೀಲಾವತಿ, ಚಂದ್ರಾವತಿ, ಜಯಶ್ರೀ ಕುಡ್ವ, ಕೆನರಾ ಜುವೆಲರ್ಸ್‌ ಮಾಲೀಕ ಧನಂಜಯ ಪಾಲ್ಕೆ ಇದ್ದರು.

ಬಾವಿ ರಕ್ಷಣೆಗೆ ಮನವಿ: ‘ನಮ್ಮ ಸಂಸ್ಥೆಯ ಎದುರು ಭಾಗದಲ್ಲಿ 60 ವರ್ಷಗಳಿಗೂ ಹಿಂದೆ ಕುಡಿಯುವ ನೀರಿನ ಬಾವಿಯೊಂದಿತ್ತು. ಈ ಬಾವಿಯಿಂದ ನಾವು, ನಮ್ಮ ಮಳಿಗೆಯ ಬದಿಯಲ್ಲಿರುವ ಹೋಟೆಲ್ ತಾಜ್‌ಮಹಲ್ ಅಹ್ಮದ್ ಹಾಜೀ ಕಟ್ಟಡದವರು 1962ರವರೆಗೆ ನೀರು ಬಳಸುತ್ತಿದ್ದೆವು. ನಳ್ಳಿ ನೀರಿನ ಸಂಪರ್ಕ ಬಂದ ಮೇಲೆ ಬಾವಿಯ ನೀರು ಬಳಸಿಲ್ಲ. ಬಳಿಕ ಬಾವಿಗೆ ಕಾಂಕ್ರೀಟ್‌ ಸ್ಲ್ಯಾಬ್ ಅಳವಡಿಸಿದ್ದೆವು. ನಂತರ ಅದರ ಮೇಲೆ ಡಾಂಬರು ಹಾಕಲಾಗಿತ್ತು. ಕೆಲ ದಿನಗಳ ಹಿಂದೆ ಈ ಪ್ರದೇಶದಲ್ಲಿ ಕೆಲಸ ನಡೆಯುತ್ತಿದ್ದಾಗ ಈ ಬಾವಿ ಗೋಚರಿಸಿದೆ. ಶತಮಾನದ ಇತಿಹಾಸ ಹೊಂದಿರುವ ಈ ಬಾವಿ ರಕ್ಷಿಸಬೇಕು’ ಎಂದು ಕೆನರಾ ಜುವೆಲ್ಲರ್ಸ್‌ ಮಾಲೀಕ ಧನಂಜಯ ಪಾಲ್ಕೆ ಅವರು, ಮೇಯರ್ ದಿವಾಕರ್ ಪಾಂಡೇಶ್ವರ್ ಅವರಿಗೆ ಮನವಿ ಮಾಡಿದರು.

ಬಾವಿ ಸುಮಾರು 100 ಅಡಿ ಆಳ ಹೊಂದಿದೆ. ನಾಲ್ಕು ದಶಕಗಳ ನಂತರ ಗೋಚರಿಸಿರುವ ಈ ಬಾವಿ ಇಂದಿಗೂ ಸುಸ್ಥಿತಿಯಲ್ಲಿದ್ದು, ಹಳೆಯ ಕಾಲದ ನೆನಪುಗಳನ್ನು ಮೆಲುಕುಹಾಕಿದೆ.

ಶತಮಾನದ ಹಿಂದೆ ದೂರದಿಂದ ನಗರಕ್ಕೆ ಬಂದವರಿಗೆ ಸ್ಥಳೀಯರಾದ ಅಪ್ಪಣ್ಣ ಅವರು ಈಗಿನ ಹಂಪನಕಟ್ಟೆಯ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನೀರು ಕೊಡುತ್ತಿದ್ದರು ಎಂದು ಹೇಳಲಾಗುತ್ತದೆ. ಆ ಕಾಲದಲ್ಲಿ ಅಪ್ಪಣ್ಣ ಅವರು ಇದೇ ಬಾವಿಯಿಂದ ನೀರು ನೀಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿ ಹಿಂದೆ ‘ಅಪ್ಪಣ್ಣ ಕಟ್ಟೆ’ಯಾಗಿದ್ದ ಆ ಪ್ರದೇಶ ನಂತರದಲ್ಲಿ ‘ಹಂಪನಕಟ್ಟೆ’ಯಾಗಿ ಹೆಸರು ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.