ADVERTISEMENT

ರಸ್ತೆ ಏಕಮುಖ ಸಂಚಾರ: ಸಾರಿಗೆ ನೌಕರರ ಮನವಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:46 IST
Last Updated 14 ಡಿಸೆಂಬರ್ 2025, 7:46 IST
   

ಪುತ್ತೂರು: ನಗರದ ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆಯ ಮುಂಭಾಗದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯು ಕಿರಿದಾದ ಮತ್ತು ಏರು ರಸ್ತೆಯಾಗಿದ್ದು, ಈ ರಸ್ತೆಯ ಅಂಬಿಕಾ ಶಾಲೆಗೆ ತಿರುಗುವ ಬಳಿಯಿಂದ ಸಿಟಿ ಅಸ್ಪತ್ರೆಯ ಮುಂಭಾಗದ ತನಕದ ಏಕಮುಖ ಸಂಚಾರ ರಸ್ತೆಯನ್ನಾಗಿಸಬೇಕು ಎಂದು ಕೋರಿ ಕೆಎಸ್‌ಆರ್‌ಟಿಸಿ  ಸ್ಟಾಫ್ ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. 

ಪುತ್ತೂರಿನ ದರ್ಬೆ ಕಡೆಯಿಂದ ಬರುವ ಬಸ್‌ಗಳು ಅರುಣಾ ಸಭಾಭವನ ಬಳಿ ತಿರುವು ಪಡೆದು ಎಪಿಎಂಸಿ ರಸ್ತೆ ಪ್ರವೇಶಿಸಿ ಸಿಟಿ ಆಸ್ಪತ್ರೆಯ ಮುಂಭಾಗದಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಬೇಕಾಗಿದೆ. ಕಿರಿದಾದ ಮತ್ತು ಏರು ರಸ್ತೆಯಾಗಿರುವ ಇದು ದ್ವಿಮುಖ ಸಂಚಾರ ರಸ್ತೆಯಾಗಿದೆ. ರಸ್ತೆಯ ಒಂದು ಬದಿ ಹೊಸದಾಗಿ ಒಳಚರಂಡಿಯ ವ್ಯವಸ್ಥೆ ಮಾಡಿರುವುದರಿಂದ ರಸ್ತೆ ಇನ್ನಷ್ಟು ಕಿರಿದಾಗಿದೆ. ಇದರಿಂದ ಎರಡು ಕಡೆಯ ವಾಹನಗಳು ಸುಗಮವಾಗಿ ಚಲಿಸಲು ಅಸಾಧ್ಯವಾಗಿದೆ. ಹಾಗಾಗಿ ಈ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿಸಿ ನಾಮಫಲಕ ಅಳವಡಿಸಲು ಆದೇಶ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಾರಿಗೆ ನೌಕರರ ಯೂನಿಯನ್ ಪುತ್ತೂರು ವಿಭಾಗದ ಕಾರ್ಯದರ್ಶಿ ಕೋಚಣ್ಣ ಪೂಜಾರಿ, ಚಾಲಕರಾದ ಅಬ್ದುಲ್ ಅಝೀಝ್, ಶಶಿಧರ, ಲೋಕೇಶ್, ಪ್ರಕಾಶ್ ಮೊಂತೋರೋ ಅವರು ಪುತ್ತೂರಿನ ವಿಭಾಗಾಧಿಕಾರಿ, ನಗರಸಭೆಯ ಆಯುಕ್ತರು, ಪುತ್ತೂರು ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಶಾಸಕ ಅಶೋಕ್ ಕುಮಾರ್‌ ರೈ ಅವರಿಗೆ  ಮನವಿ ಸಲ್ಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.