ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಬರಬಾರದು. ಅದಕ್ಕೆ ಯಾವತ್ತೂ ಅವಕಾಶ ನೀಡಬಾರದು. ಶಾಂತಿ ಮರುಸ್ಥಾಪನೆಯಾಗಬೇಕು...
ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಕುರಿತು ಚರ್ಚಿಸಲು ಇಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ ಅವರ ಸ್ಪಷ್ಟೋಕ್ತಿ ಇದು.
‘ಜಿಲ್ಲೆಯ ಜನರಿಗೆ ಸೌಹಾರ್ದದ ಸಂದೇಶ ರವಾನಿಸುವ ಅಗತ್ಯವಿತ್ತು. ಈ ಸಭೆಯ ಮೂಲಕ ಅದು ಈಡೇರಿದೆ. ಧಾರ್ಮಿಕ ಮುಖಂಡರನ್ನು ಸೇರಿಸಿ ಸಾಮಾಜಿಕ ಸೌಹಾರ್ದ ರ‍್ಯಾಲಿ ನಡೆಸುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಅವರು ತಿಳಿಸಿದರು.
‘ಮತೀಯ ಗೂಂಡಾಗಿರಿ ನಡೆಸಬಾರದು. ಗೋಹತ್ಯೆ ನಡೆದರೆ, ಗೋವುಗಳ ಅಕ್ರಮ ಸಾಗಾಟ ಕಂಡುಬಂದರೆ ಪೊಲಿಸರಿಗೆ ಮಾಹಿತಿ ನೀಡಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು’ ಎಂದರು.
ಜಿಲ್ಲೆಯ ಕೆಂಪು ಕಲ್ಲು ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸರ್ಕಾರಕ್ಕೆ ಪಾವತಿಯಾಗಬೇಕಾದ ತೆರಿಗೆ ಕಟ್ಟಿ, ಪರವಾನಗಿ ಪಡೆದು ಅಧಿಕೃತವಾಗಿ ಕೆಂಪು ಕಲ್ಲು ತೆಗೆಯುವುದಕ್ಕೆ ಅಡ್ಡಿ ಇಲ್ಲ. ರಾಯಧನ ಹೆಚ್ಚಾಗಿದೆ ಎಂಬ ದೂರು ಇದ್ದರೆ ಸಂಬಂಧ ಪಟ್ಟ ಸಚಿವರ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದರೆ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಲಾಗದು’ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ‘ಸಂಘಟನೆಗಳ ಅತಿರೇಕದ ನಿಲುವು ಸಂಘರ್ಷಕ್ಕೆ ಕಾರಣವಾಗಬಾರದು. ರಾಜಕೀಯ ಕಾರ್ಯಸೂಚಿಗಳು ಹಿಂಸೆಗೆ, ದ್ವೇಷಕ್ಕೆ ದಾರಿ ಮಾಡಿಕೊಡಬಾರದು’ ಎಂದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ‘ಭಿನ್ನಾಭಿಪ್ರಾಯಗಳನ್ನು ದೂರ ಇಟ್ಟು ಸಾಮರಸ್ಯ ಸಾಧಿಸಲಾಗದು. ಯಾರೂ ಸಮಸ್ಯೆಯ ಭಾಗ ಆಗದೇ, ಪರಿಹಾರದ ಭಾಗವಾಗಬೇಕು’ ಎಂದರು.
‘ಗಣೇಶೋತ್ಸವವನ್ನು ಸರ್ಕಾರಿ ಶಾಲೆಯಲ್ಲಿ ಆಚರಿಸಬಾರದು, ಹಬ್ಬದ ಮೆರವಣಿಗೆ ರಾತ್ರಿ 11 ಗಂಟೆ ಒಳಗೆ ನಿಲ್ಲಿಸಬೇಕು ಎಂದು ಷರತ್ತು ಹಾಕಿದಾಗ ಧಾರ್ಮಿಕ ಭಾವನೆ ಕೆರಳುತ್ತದೆ. ಮಂಗಳೂರು ದಸರಾ ಮೆರವಣಿಗೆ ಮುಗಿಯುವಾಗ ಬೆಳಿಗ್ಗೆಯಾಗುತ್ತದೆ. ನಿಯಮಗಳು ಈ ಮಣ್ಣಿನ ಗುಣಕ್ಕೆ ಅನುಗುಣವಾಗಿರಬೇಕು‘ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
‘ಭಾಷಣ ಕೇಳಿ ಯಾರೂ ಕೊಲೆ ಮಾಡುವುದಿಲ್ಲ. ಈ ಸಲ ಜಿಲ್ಲೆಯಲ್ಲಿ ಎಲ್ಲೂ ಕೋಮು ಗಲಭೆ ಆಗಿಲ್ಲ. ಕಾನೂನು ವ್ಯವಸ್ಥೆ ವೈಫಲ್ಯದಿಂದ ಸಮಸ್ಯೆ ಆಗಿದೆ ಅಷ್ಟೆ. ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಸಮುದಾಯವೊಂದರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಯಿತು. ಈ ಬೆಳವಣಿಗೆಗಳಿಂದ ನಂಬಿಕೆಗೆ ಅಪಚಾರ ಆಗುತ್ತದೆ. ಇದು ಮರುಕಳಿಸಿದರೆ ಈ ರೀತಿ ಸಭೆ ಮಾಡುತ್ತಲೇ ಇರಬೇಕಾಗುತ್ತದೆ. ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯುವುದು ಒಳ್ಳೆಯದೇ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
‘ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಎಳೆದೊಯ್ಯುವ ಕೆಲಸ ಆಗಬೇಕು. ಅಂತಹವರಿಗೆ ಉತ್ತೇಜನ ಕೊಡುವರು, ಹಣಕಾಸು ವ್ಯವಸ್ಥೆ ಮಾಡುವವರನ್ನು ಸದೆಬಡಿಯಬೇಕು. ಕಟ್ಟುನಿಟ್ಟಿನ ಕ್ರಮ ಎಂದು ದೇವಸ್ಥಾನದ ಜಾತ್ರೆಯನ್ನು ಪೊಲೀಸರು ನಿಲ್ಲಿಸುವುದಲ್ಲ. ಕುದ್ರೋಳಿ, ಮಹಾಲಿಂಗೇಶ್ವರ ಜಾತ್ರೆ ನಿಲ್ಲಿಸಲು ಯಾವ ಅಧಿಕಾರಿಯಿಂದಲೂ ಆಗದು’ ಎಂದು ಶಾಸಕ ಅಶೋಕ್ ರೈ ಹೇಳಿದರು.
ಸುಳ್ಯ ಕ್ಷೇತ್ರದಲ್ಲಿ ಇಬ್ಬರು ಮಹಿಳೆಯರ ಮನೆಗೆ ಪೊಲೀಸರು ವಿಚಾರಣೆ ಸಲುವಾಗಿ ಮಧ್ಯ ರಾತ್ರಿ ತೆರಳಿದ್ದರು ಎಂದು ಶಾಸಕಿ ಭಾಗಿರಥಿ ಮುರುಳ್ಯ ಬೇಸರ ತೋಡಿಕೊಂಡರು.
‘ಹಿಂದೂ ಸ್ವಾಮೀಜಿಗಳನ್ನು ಸಭೆಗೆ ಕರೆದಿಲ್ಲ. ಕಟೀಲು ದೇವಸ್ಥಾನದ ಅರ್ಚಕರನ್ನು ಕರೆದಿಲ್ಲ. ಬಜರಂಗದಳ, ಹಿಂದೂ ಜಾಗರಣ ವೇದಿಕೆಯವರನ್ನು ಕರೆದಿಲ್ಲ. ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಆಹ್ವಾನ ನೀಡಿಲ್ಲ’ ಎಂದು ಬಿಜೆಪಿ ಮುಖಂಡರು ಆಕ್ಷೇಪಿಸಿದರು.
‘ಎಲ್ಲ ಧರ್ಮದ ಮುಖಂಡರನ್ನೂ ಕರೆದಿದ್ದೇವೆ. ವಿಶ್ವ ಹಿಂದೂ ಪರಿಷತ್‌ನವರನ್ನೂ ಕರೆದಿದ್ದೇವೆ. ಏನಾದರೂ ಲೋಪಾಗಿದ್ದರೆ ಸರಿಪಡಿಸಿಕೊಳ್ಳೋಣ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಅಜಿತ್ ಕುಮಾರ್ ರೈ ಮಾಲಾಡಿ, ಡಾ. ಶಾಂತಾರಾಮ ಶೆಟ್ಟಿ, ,ಪ್ರದೀಪ ಕುಮಾರ್ ಕಲ್ಕೂರ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಾದವ ಶೆಟ್ಟಿ, ವಕ್ಫ್ ಸಲಹಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ನಾಸಿರ‌್ ಲಕ್ಕಿಸ್ಟಾರ್, ಆಶ್ರಫ್ ಕಿನಾರ, ಮದರ್ ತೆರೇಸಾ ವಿಚಾರ ವೇದಿಕೆಯ ರಾಯ್ ಕ್ಯಾಸ್ಟಲಿನೊ, ಕ್ರೆಡೈನ ಪುಷ್ಪರಾಜ್, ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜಪ್ಪು, ರೋಶಿನಿ ನಿಲಯದ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನ ಕಿಶೋರ್ ಅತ್ತಾವರ, ಜೆಡಿಎಸ್ ಮುಖಂಡ ಇಕ್ಬಾಲ್ ಅಹಮದ್ ಮೂಲ್ಕಿ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್, ದಲಿತ ಮುಖಂಡರಾದ ಹರಿಯಪ್ಪ ಮುತ್ತೂರ, ಎಂ.ದೇವದಾಸ್, ಅಜೀಜ್ ಪರ್ತಿಪಾಡಿ, ಬಿ.ನಾಗರಾಜ ಶೆಟ್ಟಿ, ಮೌಲಾನ ಅಬ್ದುಲ್ ಅಜೀಜ್ ದಾರಿಮಿ
ಮೊದಲಾರವರು ಮಾತನಾಡಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ಕೆ. ನರ್ವಾಡೆ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಭಾಗವಹಿಸಿದ್ದರು.
ಸಭೆಯಲ್ಲಿ ಸಮುದಾಯದ ಮುಖಂಡರ ಅನಿಸಿಕೆ
ಧ್ವನಿವರ್ಧಕವನ್ನು ಗಟ್ಟಿಯಾಗಿ ಹಾಕಿದರೂ ಗೃಹ ಇಲಾಖೆ ಕ್ರಮ ಕೈಗೊಳ್ಳುವುದಿಲ್ಲ. ಧಾರ್ಮಿಕ ಪ್ರವಚನವಿರಲಿ, ಭಜನೆ ಕಾರ್ಯಕ್ರಮವೇ ಇರಲಿ, ಸಮಾಜಕ್ಕೆ ತೊಂದರೆ ನೀಡದೇ ಬಾಳುವ ವ್ಯವಸ್ಥೆ ನಿರ್ಮಾಣ ಆಗಬೇಕು. ನಮ್ಮ ಪೂಜಾ ಪದ್ಧತಿ ಶ್ರೇಷ್ಠ, ಉಳಿದವರದು ಕನಿಷ್ಠ ಎಂಬ ಭಾವನೆ ಮೂಡಿಸಬಾರದುಎಂ.ಬಿ.ಪುರಾಣಿಕ್, ವಿಎಚ್‌ಪಿ ಮುಖಂಡ
ದೇವಸ್ಥಾನಗಳಲ್ಲಿ ಧರ್ಮದ ಹೆಸರಿನಲ್ಲಿ ಸಿದ್ಧಾಂತ ಪ್ರತಿಪಾದಿಸುವ ಬಗ್ಗೆ ಗಮನವಿಡಬೇಕು. ಕೋಳಿ ಅಂಕ, ಹೊಡೆದಾಟಗಳಲ್ಲಿ ಭಾಗಿಯಾದವರನ್ನು ಹಿಂದೂ ಹೋರಾಟಗಾರ ಎಂಬ ಬದಲು ಕ್ರಿಮಿನಲ್ ಎಂದೇ ಪರಿಗಣಿಸಬೇಕು. ಜನಾಂಗೀಯ ಶ್ರೇಷ್ಠತೆ ಹೆಸರಿನಲ್ಲಿ ಯಕ್ಷಗಾನಗಳಲ್ಲಿ ಬೇರೆ ಧರ್ಮಗಳ ಹೀಯಾಳಿಸದಂತೆ ಮೇಳಗಳ ಯಜಮಾನರಿಗೆ ಸೂಚನೆ ನೀಡಬೇಕು.ಲಕ್ಷ್ಮೀಶ ಗಬ್ಲಡ್ಕ, ಧಾರ್ಮಿಕ ಪರಿಷತ್ ಸದಸ್ಯ
ಮನಸ್ಸುಗಳು ಕದಡಿವೆ. ಸೌಹಾರ್ದ ಸಾರುವುದಕ್ಕೆ ಸ್ವಾಮೀಜಿ, ಕ್ರೈಸ್ತ ಧರ್ಮಗುರು, ಮುಸ್ಲಿಂ ಧರ್ಮಗುರುಗಳನ್ನೆ ಸೇರಿಸಿ ಸೌಹಾರ್ದ ರ‍್ಯಾಲಿ ನಡೆಸಿ ಸಂದೇಶ ನೀಡೋಣ.ಮಹಮ್ಮದ್ ಕುಂಞಿ, ಶಾಂತಿ ಪ್ರಕಾಶನ
ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡ, ವಶೀಲಿಗೆ ಒಳಗಾಗದೆ ಕೆಲಸ ಮಾಡಿದರೆ ಶಾಂತಿ ಸ್ಥಾಪನೆ ಆಗುತ್ತದೆ. ಈಗಿನ ಅಧಿಕಾರಿಗಳು ಒಳ್ಳೆಯ ರೀತಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ನೀಡಿ.ಫಾ.ಮ್ಯಾಕ್ಸಿಂ, ಕ್ರೈಸ್ತ ಧರ್ಮಗುರು
ಸೈಬರ್ ಸೆಂಟರ್ ಬಲಪಡಿಸಿ, ವಾಟ್ಸ್ ಆ್ಯಪ್ ಗ್ರೂಪ್‌ಗಳ ಮೇಲೆ ಕಣ್ಣಿಡಿ. ಅವುಗಳ ಮೂಲಕ ಸಣ್ಣ ಮಕ್ಕಳಲ್ಲೂ ಧಾರ್ಮಿಕ ದ್ವೇಷ ಮೂಡಿಸಲಾಗುತ್ತಿದೆ.ಸನ್ನಿ ಡಿಸೋಜ, ರಾಜ್ಯ ರೈತ ಸಂಘದ ನಾಯಕ
ಉದ್ರೇಕಕಾರಿ ಭಾಷಣ ಮಾಡಿ ಯುವಕರನ್ನು ಬಡಿದೆಬ್ಬಿಸುವುದು ಸುಲಭ. ಅದರ ಅನಾಹುತ ನಿಲ್ಲಿಸುವುದು ಕಷ್ಟ. ಈ ವಿಚಾರ ಗೊತ್ತಿದ್ದೂ ಕೆಲ ಸಂಘಟನೆ ಇಂತಹ ಕೃತ್ಯದಲ್ಲಿ ತೊಡಗುತ್ತವೆ. ಇದನ್ನು ತಡೆಯುವುದು ಆಯಾ ಪಕ್ಷದ ಹಾಗೂ ಸಂಘಟನೆಗಳ ಹೊಣೆಯಾಬೇಕುಇಬ್ರಾಹಿಂ ಕೋಡಿಜಾಲ್, ಮುಸ್ಲಿಂ ಸೆಂಟ್ರಲ್ ಕಮಿಟಿ
ಸೌಹಾರ್ದ ಮೂಡಿಸಲು ಗ್ರಾಮಗಳಲ್ಲಿ ಸೌಹಾರ್ದ ಸಮಿತಿ ರಚಿಸಿ. ಜಿಲ್ಲಾ ಮಟ್ಟದಲ್ಲಿ ಕಾಣಿಸುವ ಕೋಮುವಾದಿ ಚಟುವಟಿಕೆ ಹಳ್ಳಿಗಳಲ್ಲಿ ಇಲ್ಲಕಣಚೂರು ಮೋನು, ಉದ್ಯಮಿ
ಘಟನೆ ಆದಾಗಲೇ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಶಾಂತಿ ಸಭೆ ನಡೆಸಬೇಕಿತ್ತು. ಹಿಂದೆ ಇದ್ದ ಅಧಿಕಾರಿಗಳನ್ನು ಹಾಗೂ ಈಗಿನವರನ್ನು ಜಿಲ್ಲೆಗೆ ನೇಮಿಸಿದ್ದು ಇದೇ ಸರ್ಕಾರ. ಅವರು ಬರುತ್ತಾರೆ ಹೋಗುತ್ತಾರೆ. ಜಿಲ್ಲೆಯಲ್ಲಿ ಇರುವವರು ಇಲ್ಲಿನ ಜನಸತೀಶ ಕುಂಪಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಶಾಂತಿ ಕಾಪಡುವತ್ತ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಸಮಾಜ ಘಾತುಕ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಇನ್ನೂ ಮುಂದುವರಿಯಬೇಕುಹರೀಶ್ ಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಶಾಲೆ ಕಾಲೇಜುಗಳಲ್ಲಿ ಎಲ್ಲ ಧರ್ಮಗಳ ಆಚರಣೆ ಪರಂಪರೆಗಳಿಗೆ ವೇದಿಕೆ ಕಲ್ಪಿಸಬೇಕು. ವಿದ್ಯಾರ್ಥಿಗಳಲ್ಲೂ ವಿಶಾಲ ಭಾವ ಮೂಡಿಸಬೇಕುವಿವೇಕ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆ,
ಕೋಮುವಾದಕ್ಕೂ ಅಕ್ರಮ ದಂಧೆಗೂ ಸಂಬಂಧ ಇದೆ. ಜಿಲ್ಲೆಯಲ್ಲಿರುವ ಅಕಾಡೆಮಿಗಳನ್ನು ಬಳಸಿ ಧಾರ್ಮಿಕ ಅಪನಂಬಿಕೆ ದೂರಮಾಡುವ ಕಾರ್ಯಕ್ರಮ ನಡೆಸಬೇಕು. ದ್ವೇಷ ಭಾಷಣ ಮಾಡುವರಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಬೇಕುಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ
ರೋಗಕ್ಕ ಮದ್ದು ಹುಡುಕುವುದಕ್ಕಿಂತ ರೋಗ ಬಾರದಂತೆ ತಡೆಯಬೇಕು. ಕೋಮು ಹಿಂಸಾಚಾರಗಳಲ್ಲಿ ಪಾತ್ರಧಾರಿಗಳ ಬದಲು ಸೂತ್ರಧಾರಿಗಳ ವಿರುದ್ಧ ಕ್ರಮ ಆಗಬೇಕು.ಅಬ್ದುಲ್ ಜಲೀಲ್ ಕೃಷ್ಣಾಪುರ, ಎಸ್‌ಡಿಪಿಐ ಮುಖಂಡ
‘ಲೋಪವಾಗಿದ್ದರೆ ಸರಿಪಡಿಸೋಣ’
‘ಹಿಂದೂ ಸ್ವಾಮೀಜಿಗಳನ್ನು ಸಭೆಗೆ ಕರೆದಿಲ್ಲ. ಕಟೀಲು ದೇವಸ್ಥಾನದ ಅರ್ಚಕರನ್ನು ಕರೆದಿಲ್ಲ. ಬಜರಂಗದಳ, ಹಿಂದೂ ಜಾಗರಣ ವೇದಿಕೆಯವರನ್ನು ಕರೆದಿಲ್ಲ. ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಆಹ್ವಾನ ನೀಡಿಲ್ಲ’ ಎಂದು ಬಿಜೆಪಿ ಮುಖಂಡರು ಆಕ್ಷೇಪಿಸಿದರು.
‘ಎಲ್ಲ ಧರ್ಮದ ಮುಖಂಡರನ್ನೂ ಕರೆದಿದ್ದೇವೆ. ವಿಶ್ವ ಹಿಂದೂ ಪರಿಷತ್‌ನವರನ್ನೂ ಕರೆದಿದ್ದೇವೆ. ಏನಾದರೂ ಲೋಪಾಗಿದ್ದರೆ ಸರಿಪಡಿಸಿಕೊಳ್ಳೋಣ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.