ADVERTISEMENT

ಪಿಲಿಕುಳಕ್ಕೆ ಹೊಸ ಅತಿಥಿ ‘ಕಾವೇರಿ’: ಇನ್ನಷ್ಟು ಪ್ರಾಣಿಗಳು ಬರುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:30 IST
Last Updated 4 ಮೇ 2022, 15:30 IST
ಪಿಲಿಕುಳಕ್ಕೆ ಬಂದಿರುವ ಹೆಣ್ಣು ಬಿಳಿ ಹುಲಿ ‘ಕಾವೇರಿ’
ಪಿಲಿಕುಳಕ್ಕೆ ಬಂದಿರುವ ಹೆಣ್ಣು ಬಿಳಿ ಹುಲಿ ‘ಕಾವೇರಿ’   

ಮಂಗಳೂರು: ಇಲ್ಲಿನ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಹೊಸ ಅತಿಥಿ ‘ಕಾವೇರಿ’ಯ ಆಗಮನವಾಗಿದೆ. ಚೆನ್ನೈನಿಂದ ಬಂದಿರುವ ‘ಕಾವೇರಿ’ ಪಿಲಿಕುಳದ ಆಕರ್ಷಣೆ ಆಗಲಿದ್ದಾಳೆ.

ಪ್ರಾಣಿ ವಿನಿಮಯ ವ್ಯವಸ್ಥೆಯಡಿ ಚೆನ್ನೈನ ಅರಿಗ್ನಾರ್‌ ಅಣ್ಣ ಪಾರ್ಕ್‌ನಿಂದ ಪಿಲಿಕುಳಕ್ಕೆ ಬಿಳಿ ಬಣ್ಣದ ಹೆಣ್ಣು ಹುಲಿ ‘ಕಾವೇರಿ’ ಹಾಗೂ ಹೆಣ್ಣು ಆಸ್ಟ್ರಿಚ್‌ಗಳು ಬಂದಿವೆ.

‘ಕಾವೇರಿ’ ಪಿಲಿಕುಳದ ಮೊದಲ ಬಿಳಿ ಹುಲಿಯಾಗಿದ್ದು, ಇನ್ನೊಂದು ಗಂಡು ಬಿಳಿ ಹುಲಿ ಪಿಲಿಕುಳಕ್ಕೆ ಬರಲಿದೆ. ಹೆಣ್ಣು ಹುಲಿ ಮತ್ತು ಆಸ್ಟ್ರಿಚ್‌ಗಳನ್ನು ಒಂದು ವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವುಗಳ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡ ನಂತರ ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್‌.ಜೆ. ಭಂಡಾರಿ ತಿಳಿಸಿದ್ದಾರೆ.

ADVERTISEMENT

ಪಿಲಿಕುಳದಿಂದ ಒಂದು ಗಂಡು ಬಂಗಾಳ ಹುಲಿ ‘ಸಂಜಯ್‌’, ನಾಲ್ಕು ಧೋಲ್‌ಗಳು ಹಾಗೂ ಕೆಲ ಹಾವುಗಳನ್ನು ಚೆನ್ನೈಗೆ ಕಳುಹಿಸಲಾಗಿದೆ. ಸದ್ಯಕ್ಕೆ ಪಿಲಿಕುಳದಲ್ಲಿ 11 ಬಂಗಾಳ ಹುಲಿಗಳಿದ್ದು, ಇದರಲ್ಲಿ ಏಳು ಗಂಡು ಹುಲಿಗಳಿವೆ. ಎರಡು ಗಂಡು ಆಸ್ಟ್ರಿಚ್‌ಗಳಿವೆ ಎಂದು ಹೇಳಿದ್ದಾರೆ.

ಇನ್ನೂ ಕೆಲವೆಡೆಗಳಿಂದ ಪ್ರಾಣಿಗಳನ್ನು ತರಿಸಿಕೊಳ್ಳುವ ಚಿಂತನೆ ಇದೆ. ಪಿಲಿಕುಳದಲ್ಲಿ ಹೆಚ್ಚಾಗಿರುವ ಜಾತಿಯ ಪ್ರಾಣಿಗಳನ್ನು ಬೇರೆ ಪ್ರಾಣಿ ಸಂಗ್ರಹಾಲಯಗಳಿಗೆ ಕಳುಹಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಂಬಂಧಿಸಿದ ಪ್ರಾಣಿ ಸಂಗ್ರಹಾಲಯಗಳ ಜೊತೆಗೆ ಚರ್ಚಿಸಿದ್ದು, ಒಪ್ಪಿಗೆ ಸೂಚಿಸಿವೆ. ಕೇಂದ್ರಿಯ ಪ್ರಾಣಿ ಸಂಗ್ರಹಾಲಯದ ಪ್ರಾಧಿಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಭಂಡಾರಿ ತಿಳಿಸಿದ್ದಾರೆ.

ಕೋವಿಡ್–19ನಿಂದಾಗಿ ಎರಡು ವರ್ಷಗಳಿಂದ ಪ್ರಾಣಿ ವಿನಿಮಯ ಕಾರ್ಯಕ್ರಮ ಸ್ಥಗಿತವಾಗಿತ್ತು. ಇದೀಗ ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಪ್ರಾಣಿ ವಿನಿಮಯ ವಿಳಂಬವಾಗಿದೆ. ಪಿಲಿಕುಳದಲ್ಲಿ ಇರುವ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿತ್ಯ ಶುದ್ಧ ನೀರು ಹಾಗೂ ಸ್ಪ್ರಿಂಕ್ಲರ್‌ಗಳ ಮೂಲಕ ಪ್ರಾಣಿಗಳಿಗೆ ತಂಪಾದ ವಾತಾವರಣ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.