ಕಾಡಿನಲ್ಲಿ ಪತ್ತೆಯಾಗಿದ್ದ ಹೆಣ್ಣು ಶಿಶು
ಉಜಿರೆ (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲ್ಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ, ಮುಂಡ್ರೊಟ್ಟು ಕಾಡಿನಲ್ಲಿ ಮಾರ್ಚ್ 22 ರಂದು ಪತ್ತೆಯಾದ ಮೂರು ತಿಂಗಳ ಹೆಣ್ಣು ಶಿಶುವಿನ ತಂದೆ-ತಾಯಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದಾರೆ.
ಮಗುವಿನ ತಂದೆ ಬೆಳಾಲು ಗ್ರಾಮದ ಮಾಯ ನಿವಾಸಿ ರಂಜಿತ್ ಗೌಡ ಹಾಗೂ ತಾಯಿ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸುಶ್ಮಿತಾ ಗೌಡ ಎಂದು ಗೊತ್ತಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರಂಜಿತ್ ಗೌಡ (27) ಮತ್ತು ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ಒಂದರಲ್ಲಿ ಉದ್ಯೋಗದಲ್ಲಿದ್ದ ಸುಶ್ಮಿತಾ ಗೌಡ (22) ಪರಸ್ಪರ ಪ್ರೀತಿಸಿದ್ದರು. ಮದುವೆಯಾಗುವ ಭರವಸೆ ನೀಡಿ ರಂಜಿತ್ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಅವರಿಗೆ ಹೆಣ್ಣು ಶಿಶು ಜನಿಸಿತ್ತು. ನಂತರ ಅವರಿಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಯುವತಿ ಮಗುವನ್ನು ರಂಜಿತ್ ಗೌಡನ ಮನೆಗೆ ತಂದು ಬಿಟ್ಟು ಹೋಗಿದ್ದರು. ಆತ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದ ಎಂದು ಮೂಲಗಳು ತಿಳಿಸಿವೆ.
ಹೆಣ್ಣು ಶಿಶು ಪತ್ತೆಯಾದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳ್ತಂಗಡಿಯ ಮೇಲ್ವಿಚಾರಕಿ ಅನ್ನಪೂರ್ಣ ಮಾರ್ಚ್ 22ರಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧರ್ಮಸ್ಥಳ ಪಿಎಸ್ಐ ಸಮರ್ಥ ಆರ್. ಗಾಣಿಗೇರಾ ನೇತೃತ್ವದಲ್ಲಿ ಪೊಲೀಸರು ಏ.2 ರಂದು ರಂಜಿತ್ ಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ರಂಜಿತ್ ಹಾಗೂ ಸುಶ್ಮಿತಾ ಇಬ್ಬರು ಕೂಡಾ ಸ್ವ-ಇಚ್ಛೆಯಿಂದ ಮದುವೆಯಾಗುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಶಿಶು ಪುತ್ತೂರಿನಲ್ಲಿ ರಾಮಕೃಷ್ಣ ಆಶ್ರಮದಲ್ಲಿದೆ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಆಶ್ರಮದಲ್ಲಿರುವ ಮಗುವನ್ನು ತಂದೆ-ತಾಯಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.