
ಮಂಗಳೂರು: 'ಶಾಸಕರು ಸಿನಿಮೀಯ ಶೈಲಿಯಲ್ಲಿ ಪರಸ್ಪರ ಕಚ್ಚಾಡುವುದು, ರಾಜಕೀಯ ದ್ವೇಷ ಸಾಧಿಸುವುದು ಸರಿಯಲ್ಲ. ಇಂತಹ ಘಟನೆಯಿಂದ ಜನಪ್ರತಿನಿಧಿಗಳ ಗೌರವ ಕಡಿಮೆ ಆಗುತ್ತದೆ. ಕೆಲವೇ ಕೆಲವು ಜನಪ್ರತಿನಿಧಿಗಳ ಈ ರೀತಿಯ ನಡವಳಿಕೆಯಿಂದ ಇತರರನ್ನೂ ಜನ ಅದೇ ದೃಷ್ಟಿಯಿಂದ ನೋಡುತ್ತಾರೆ' ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಬಳ್ಳಾರಿಯಲ್ಲಿ ಈಚೆಗೆ ಎರಡು ಪಕ್ಷಗಳ ನಡುವೆ ಘರ್ಷಣೆ ಹಾಗೂ ನಂತರ ನಡೆದ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅವರು, 'ಈ ಘಟನೆ ಸರಿಯಲ್ಲ. ಹಿಂದಿನ ಸಂಸ್ಕೃತಿ ಗೌರವ ಉಳಿಸುವ ರೀತಿಯಲ್ಲಿ ಶಾಸಕರ ವರ್ತನೆ ಇರಬೇಕು' ಎಂದರು. 'ಸಮಸ್ಯೆ ಬಗೆಹರಿಸಲು ಜನ ಶಾಸಕರನ್ನು ಆಯ್ಕೆ ಮಾಡಿರುತ್ತಾರೆ. ಶಾಸಕರೇ ಏಕವಚನದಲ್ಲಿ ಪರಸ್ಪರ ಬೈದಾಡಿಕೊಳ್ಳುವುದು, ಬೆದರಿಕೆ ಒಡ್ಡಿ, ಅವರೇ ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ' ಎಂದರು.
ಈ ಘಟನೆಗೆ ಸಂಬಂಧಿಸಿ ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಅಮಾನತು ಮಾಡಿದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಕೋಗಿಲು ಬಡಾವಣೆಯ ವಿವಾದದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ' ಈ ವಿಚಾರದಲ್ಲಿ ಸರ್ಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ' ಎಂದರು.
ಮುಖ್ಯಮಂತ್ರಿ ಹುದ್ದೆಗೆ ತಾವೂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, 'ಅದಕ್ಕೆ ತರಾತುರಿ ಇಲ್ಲ. ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ. ಕ್ಷೇತ್ರದ ಮತದಾರರು ಇನ್ನೂ ನಾಲ್ಕು ಸಲ ಗೆಲ್ಲಿಸಿ ಕಳುಹಿಸಿದರೆ, ಅಮೇಲೆ ನೋಡುವ' ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಕೋಳಿ ಅಂಕ ನಿಷೇಧ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, 'ಕೋಳಿ ಅಂಕದಲ್ಲಿ ಜೂಜು ನಡೆಯುತ್ತದೆ ಎಂಬುದು ಪೊಲೀಸ್ ಇಲಾಖೆಯ ಆರೋಪ. ಜೂಜು ನಡೆದರೆ, ಅದರಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಸಾಂಪ್ರದಾಯಿಕ ಕೋಳಿ ಅಂಕವನ್ನೇ ತಡೆಯುವುದು ಸರಿಯಲ್ಲ ಎಂಬುದು ಆಯೋಜಕರ ವಾದ. ಈ ಸಮಸ್ಯೆಯನ್ನು ಸೂಕ್ತ ನಿಯಮಗಳನ್ನು ರೂಪಿಸುವ ಮೂಲಕವೇ ಬಗೆಹರಿಸಬೇಕಿದೆ. ಈ ಬಗ್ಗೆ ಕಾನೂನು ಸಚಿವರು ಮತ್ತು ಸರ್ಕಾರದ ಕಾನೂನು ಸಲಹೆಗಾರರ ಜೊತೆ ಮಾತನಾಡಿ, ಸಲಹೆಗಳನ್ನು ಕೊಟ್ಡಿದ್ದೇನೆ. ಈ ಸಮಸ್ಯೆ ಬಗೆಹರಿಯಬಹುದು ಎಂಬ ವಿಶ್ವಾಸ ಇದೆ' ಎಂದರು.
ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ ವ್ಯಕ್ತವಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಯಾರು ದ್ವೇಷ ಭಾಷಣ ಮಾಡುತ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಈ ಮಸೂದೆ ರೂಪಿಸಲಾಗಿದೆ. ಮಸೂದೆಯಲ್ಲಿ ಲೋಪಗಳಿದ್ದರೆ ಗಮನಕ್ಕೆ ತರಬಹುದು. ದೇಶ ಬಲಿಷ್ಠ ಆಗಬೇಕು ಎಂಬುದು ಪ್ರತಿಯೊಬ್ಬರ ಕನಸು. ನಾವು ಆಡುವ ಮಾತು, ಮಾಡುವ ಕೆಲಸ ಸಮಾಜಕ್ಕೆ ಪೂರಕ ಆಗಿದ್ದರೆ, ದೇಶ ತನ್ನಿಂದ ತಾನೆ ಮುಂದುವರಿಯುತ್ತದೆ. ನಾವು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸಮಸ್ಯೆ ಸೃಷ್ಟಿಯಾಗುತ್ತದೆ. ಎಲ್ಲರಿಗೂ ನೆಮ್ಮದಿ ಶಾಂತಿ ಮುಖ್ಯ. ಇದನ್ನು ಸಾಧಿಸಲು ಎಲ್ಲರೂ ಸಹಕರಿಸಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.