ADVERTISEMENT

ದಕ್ಷಿಣ ಕನ್ನಡ | ಸಾಧಕರ ಸಂಗಮ– ಸಾಧನೆಯ ಸಂಭ್ರಮ

ಸಾಧನೆಯ ಹಾದಿಯ ನೋವು– ನಲಿವಿನ ನೆನಪುಗಳ ಹಂಚಿಕೊಂಡ ಸಾಧಕರು

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 15:39 IST
Last Updated 25 ಜೂನ್ 2022, 15:39 IST
ಪ್ರಜಾವಾಣಿ ಮಂಗಳೂರು ಬ್ಯೂರೊ ಕಚೇರಿಯಲ್ಲಿ ಶನಿವಾರ 2022ನೇ ಸಾಲಿನ ಪ್ರಜಾವಾಣಿ ಸಾಧಕರನ್ನು ಸನ್ಮಾನಿಸಲಾಯಿತು. (ನಿಂತವರು ಎಡದಿಂದ) ರವಿ ಕಟಪಾಡಿ, ಮಹೇಂದ್ರ ಕುಮಾರ್‌, ನಿತಿನ್‌ ವಾಜ್‌, ದುರ್ಗಾ ಸಿಂಗ್‌, ಬಿ. ಗುರುಮೂರ್ತಿ, ಸಾಧಿಕ್‌ (ಹನೀಫ್‌ ಬಳಂಜ ಅವರ ಪರವಾಗಿ). ಮಹಮ್ಮದ್‌ ಷರೀಫ್‌, ಅರ್ಜುನ್‌ ಭಂಡಾರ್ಕರ್‌, ತೌಸೀಫ್‌ ಅಹಮದ್‌, ಇಬ್ರಾಹಿಂ ಗಂಗೊಳ್ಳಿ, ಗಣೇಶ್‌ ಆಚಾರ್‌, ರಾಮಾಂಜಿ ಇದ್ದಾರೆ. (ಕುಳಿತವರು ಎಡದಿಂದ) ಮಲ್ಲಿಗೆ ಸುಧೀರ್‌, ಆಲ್ಬರ್ಟ್‌ ಪಿಂಟೊ, ರಜನಿ ಡಿ.ಶೆಟ್ಟಿ, ಜೀತ್‌ ಮಿಲನ್‌ ರೋಚ್‌, ಧ್ವನಿ ಪೂಜಾರಿ, ಸುರೇಶ್‌ ನಾಯಕ್‌ ಇದ್ದಾರೆ–ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಮಂಗಳೂರು ಬ್ಯೂರೊ ಕಚೇರಿಯಲ್ಲಿ ಶನಿವಾರ 2022ನೇ ಸಾಲಿನ ಪ್ರಜಾವಾಣಿ ಸಾಧಕರನ್ನು ಸನ್ಮಾನಿಸಲಾಯಿತು. (ನಿಂತವರು ಎಡದಿಂದ) ರವಿ ಕಟಪಾಡಿ, ಮಹೇಂದ್ರ ಕುಮಾರ್‌, ನಿತಿನ್‌ ವಾಜ್‌, ದುರ್ಗಾ ಸಿಂಗ್‌, ಬಿ. ಗುರುಮೂರ್ತಿ, ಸಾಧಿಕ್‌ (ಹನೀಫ್‌ ಬಳಂಜ ಅವರ ಪರವಾಗಿ). ಮಹಮ್ಮದ್‌ ಷರೀಫ್‌, ಅರ್ಜುನ್‌ ಭಂಡಾರ್ಕರ್‌, ತೌಸೀಫ್‌ ಅಹಮದ್‌, ಇಬ್ರಾಹಿಂ ಗಂಗೊಳ್ಳಿ, ಗಣೇಶ್‌ ಆಚಾರ್‌, ರಾಮಾಂಜಿ ಇದ್ದಾರೆ. (ಕುಳಿತವರು ಎಡದಿಂದ) ಮಲ್ಲಿಗೆ ಸುಧೀರ್‌, ಆಲ್ಬರ್ಟ್‌ ಪಿಂಟೊ, ರಜನಿ ಡಿ.ಶೆಟ್ಟಿ, ಜೀತ್‌ ಮಿಲನ್‌ ರೋಚ್‌, ಧ್ವನಿ ಪೂಜಾರಿ, ಸುರೇಶ್‌ ನಾಯಕ್‌ ಇದ್ದಾರೆ–ಪ್ರಜಾವಾಣಿ ಚಿತ್ರ   

ಮಂಗಳೂರು: ಸಾಧನೆ ಮಾಡಲು ಪ್ರೇರಣೆ ಬಂದಿದ್ದು ಹೇಗೆ, ಈ ಹಾದಿಯಲ್ಲಿ ನೋವು ನಲಿವಿನ ಕ್ಷಣಗಳನ್ನು ಎದುರಿಸಬೇಕಾಗಿ ಬಂದದ್ದು ಹೇಗೆ, ಸಮಾಜವೇ ಗುರುತಿಸಿ ಬೆನ್ನುತಟ್ಟುವಾಗ ಮನದಲ್ಲಿ ಮೂಡಿದ ಕನಸುಗಳೇನು....

2022ನೇ ಸಾಲಿನ ‘ಪ್ರಜಾವಾಣಿ ಸಾಧಕರು’ ಗೌರವಕ್ಕೆ ಪಾತ್ರವಾದವರು ತಮ್ಮ ಅನುಭವಗಳನ್ನು ಒಂದೊಂದಾಗಿ ಹಂಚಿಕೊಂಡರು. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೆರೆಮರೆಯ ಕಾಯಿಯಂತಿದ್ದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ‘ಪ್ರಜಾವಾಣಿ’ ಮಂಗಳೂರು ಬ್ಯೂರೊದ ಕಚೇರಿಯಲ್ಲಿ ಶನಿವಾರ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರ ಸಂಗಮ ಆಪ್ತ ವಾತಾವರಣವನ್ನು ರೂಪಿಸಿತು.

ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ವಾಜ್‌, ‘ಕೋವಿಡ್‌ ಬಳಿಕ ನದಿಗಳಲ್ಲಿ, ಬೀದಿ ಬದಿಯಲ್ಲಿ, ಹಕ್ಕಿಹಳ ಕೊಕ್ಕಿನಲ್ಲಿ... ಎಲ್ಲ ಕಡೆಯೂ ಮಾಸ್ಕ್‌ ಕಾಣಸಿಗುತ್ತಿದೆ. ಬೀಜಗಳನ್ನು ಅಳವಡಿಸಿದ ಮಾಸ್ಕ್‌ಗಳನ್ನು ನಾವು ರೂಪಿಸಿದೆವು. ಯಕ್ಷಗಾನ, ಭೂತಕೋಲದ ವೇಷಗಳಲ್ಲಿ ಬಳಸುವ ಬಣ್ಣ ಬಳಸಿ ಪೇಪರ್‌ ಬೊಂಬೆ ತಯಾರಿಸುತ್ತಿದ್ದೇವೆ’ ಎಂದರು.

ADVERTISEMENT

ಪರಿಸರ ಕಾರ್ಯಕರ್ತ ಜೀತ್‌ ಮಿಲನ್‌ ರೋಚ್‌, ‘ಒಮ್ಮೆ ಗಿಡಗಳನ್ನು ನೆಟ್ಟು ಗೊಬ್ಬರ ಹಾಕಿದ ಬಳಿಕ ಹೋಟೆಲ್‌ಗೆ ಹೋದಾಗ ಮಾಲೀಕರು, ‘ಸ್ವಲ್ಪ ಬೇಗ ಹೋಗುತ್ತೀರಾ ವಾಸನೆ ಬರುತ್ತಿದ್ದೀರಿ’ ಎಂದರು. ನಾವೂ ದುಡ್ಡು ಕೊಟ್ಟೇ ಊಟ ಮಾಡಿದ್ದೆವು. ಆದರೂ ಅವರು ಹೀಗೆ ಹೇಳಿದಾಗ ನೋವಾಯಿತು. ಗಿಡ ನೆಡುತ್ತಿದ್ದಾಗ ವ್ಯಕ್ತಿಯೊಬ್ಬರು, ‘ಇದರ ಎಲೆ ಬಿದ್ದರೆ ಗುಡಿಸುವುದಕ್ಕೆ ನಿಮ್ಮಪ್ಪ ಬರುತ್ತಾರಾ’ ಎಂದು ಪ್ರಶ್ನಿಸಿದರು. ಗಿಡ ನೆಡಬೇಡಿ ಎನ್ನುವವರೇ ಜಾಸ್ತಿ ಆಗುತ್ತಿದ್ದಾರೆ. ಜನ ಮರಗಳನ್ನು ಏಕಿಷ್ಟು ದ್ವೇಷಿಸುತ್ತಾರೋ ತಿಳಿಯದು’ ಎಂದು ನೋವು ತೋಡಿಕೊಂಡರು.

ಬೀಡಾಡಿ ಪ್ರಾಣಿಗಳ ಕಾಳಜಿ ವಹಿಸುವ ರಜನಿ ಶೆಟ್ಟಿ, ‘ಬೀದಿ ನಾಯಿಗಳಿಗೆ ನಾನು ಅನ್ನ ಹಾಕುವಾಗಲೂ ಕೆಲವರು, ‘ಗಲೀಜು ಮಾಡುತ್ತೀರಿ’ ಎಂದು ಬೈಯುತ್ತಾರೆ. ಹಸಿವಿನ ಮುಂದೆ ಯಾವುದೂ ಇಲ್ಲ. ನಮ್ಮ ಬದುಕಿನಲ್ಲಿ ಮಾತುಬಾರದ ಜೀವಿಗಳಿಗೂ ಒಂದಿಷ್ಟು ಸಮಯ ಮೀಸಲಿಡೋಣ’ ಎಂದರು.

ಮಿಯಾವಕಿ ಕಾಡು ಬೆಳೆಸುವ ದುರ್ಗಾ ಸಿಂಗ್‌, ‘ಆರಂಭದಲ್ಲಿ ಕೆಲವರು ನನ್ನ ಕೆಲಸ ನೋಡಿ ‘ನೀವು ಹಲಸಂಡೆ ಗಿಡ ನೆಡುತ್ತಿದ್ದೀರಾ’ ಎಂದು ಛೇಡಿಸಿದ್ದರು. ಕೊನೆಗೆ ಹುಚ್ಚಾ ಎಂದೂ ಕರೆದರೂ. ಮಾಧ್ಯಮದಲ್ಲಿ ನನ್ನ ಕಾರ್ಯದ ಬಗ್ಗೆ ಲೇಖನ ಬಂದಾಗ ಜನ ನನ್ನನ್ನು ನೋಡುವ ದೃಷ್ಟಿಯೇ ಬದಲಾಗಿದೆ’ ಎಂದರು.

ಸಮಾಜ ಸೇವಕ, ಅರ್ಜುನ್ ಭಂಡಾರ್ಕರ್‌, ‘ಅಶಕ್ತರಿಗೆ ನೆರವಾಗಲು ಮೂರು ವರ್ಷಗಳ ಹಿಂದೆ ಸೇವ್‌ ಲೈಫ್‌ ಚಾರಿಟಬಲ್‌ ಟ್ರಸ್ಟ್ ಆರಂಭಿಸಿದೆವು. ಇದರ ಮೂಲಕ ಇದುವರೆಗೆ ₹ 3.7 ಕೋಟಿ ವಂತಿಗೆ ಸಂಗ್ರಹಿಸಿ, ಬಡವರ ಚಿಕಿತ್ಸೆಗೆ, ಮನೆ ನಿರ್ಮಿಸುವುದಕ್ಕೆ, ಅವರು ಜೀವನೋಪಾಯ ಕಂಡುಕೊಳ್ಳುವುದಕ್ಕೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿದ್ದೇವೆ’ ಎಂದರು.

ಬಹುಮುಖ ಪ್ರತಿಭೆಯ ಬಾಲಕಿ ಧ್ವನಿ ಮರವಂತೆ, ‘ಯೋಗ ಹಾಗೂ ನೃತ್ಯ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನಗಳನ್ನು ನೀಡಿದ್ದೇನೆ. ಮಲೇಷ್ಯಾದಲ್ಲಿ ಏರ್ಪಡಿಸಲಾದ ಯೋಗ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದೆ. ಬೆನ್ನುತಟ್ಟಿ ಪ್ರೋತ್ಸಾಹಿದವರಿಗೆಲ್ಲ ಧನ್ಯವಾದ’ ಎಂದು ಭಾವುಕರಾಗಿ ನುಡಿದರು.

ಕೃಷಿಕ ಸುರೇಶ ನಾಯಕ್‌, ‘ಕೋವಿಡ್‌ನಿಂದ ಮೊದಲ ಬಾರಿ ಲಾಕ್‌ಟೌನ್‌ ಜಾರಿಯಾದ ಸಂದರ್ಭದಲ್ಲಿ ನಾನು 140 ಟನ್‌ ಕಲ್ಲಂಗಡಿ ಬೆಳೆದಿದ್ದೆ. ವ್ಯಾಪಾರಿಗಳು ಅದನ್ನು ಕಡಿಮೆ ದರಕ್ಕೆ ಕೇಳಿದರು. ಆಗ ನಾನೇ ಗ್ರಾಹಕರಿಗೆ ನೇರವಾಗಿ ಕೃಷಿ ಉತ್ಪನ್ನ ತಲುಪಿಸುವ ಪ್ರಯತ್ನಕ್ಕೆ ಕೈಹಾಕಿದೆ. ಬೇರೆ ಬೇರೆ ಪ್ರದೇಶಗಳ ರೈತರಿಗೂ ನೆರವಾಗಿದ್ದೇನೆ’ ಎಂದರು.

ಸಮಾಜ ಸೇವಕ ರಾಮಾಂಜಿ, ‘ನಮ್ಮಭೂಮಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದ ಯೋಜನೆ ಸಮಾಜಕ್ಕೆ ಪೂರಕವಾಗಿದ್ದಾವೆಯೇ ವಿಶ್ಲೇಷಿಸುವುದು, ಅಧಿಕಾರ ವಿಕೇಂದ್ರೀಕರಣ, ಮಕ್ಕಳ ಹಕ್ಕುಗಳ ಜಾಗೃತಿ, ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಯುವಜನರನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದರು.

ಹಾಡುಗಾರ ಮಲ್ಲಿಗೆ ಸುಧೀರ್‌, ‘ನನ್ನ ವೃತ್ತಿ ಹೂವಿನ ವ್ಯಾಪಾರ. ಒಂದು ವರ್ಷದ ಮಗುವಿದ್ದಾಗ ನನ್ನ ತಂದೆ ತೀರಿಕೊಂಡರು. ತಾಯಿ ಹೂವಿನ ವ್ಯಾಪಾರ ಮಾಡಿಕೊಂಡು ನನ್ನನ್ನು ಬೆಳೆಸಿದ್ದಾರೆ. ಹಾಡುವ ಪ್ರತಿಭೆ ಕಂಡು ನನಗೆ ವೇದಿಕೆ ಒದಗಿಸುವಂತೆ ಅಂಗಲಾಚುತ್ತಿದ್ದಳು. ನಾನು 8 ಸಾವಿರಕ್ಕೂ ಅಧಿಕ ಮಕ್ಕಳಿಗೆ ದಾಸರ ಪದ, ವಚನಗಳನ್ನು ಕಲಿಸಿದ್ದೇನೆ’ ಎಂದರು.

ಕ್ರೀಡಾಪಟು ಬಿ.ಗುರುಮೂರ್ತಿ, ‘ಸೈನಿಕ ದೇಶವನ್ನು ಕಾಪಾಡಿದರೆ, ಕ್ರೀಡೆ ದೇಶದಿಂದ ಆಚೆ ದೇಶವನ್ನು ಕಟ್ಟುತ್ತದೆ. ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸ್ವತಃ ಭಾಗವಹಿಸುವುದರ ಜೊತೆ ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ ತೃಪ್ತಿ ಇದೆ’ ಎಂದರು.

ರಂಗಭೂಮಿ ಕಲಾವಿದ ಮಹೇಂದ್ರ ಕುಮಾರ್‌, ‘ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿಯಾಗಿರುವ ನಾನು ರಂಗಭೂಮಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ, ಏಕಪಾತ್ರಾಭಿನಯಕ್ಕೆ ಉಚಿತ ತರಬೇತಿ ನೀಡುತ್ತಿದ್ದೇನೆ. ನನ್ನಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದಾಗ ಸಂತೋಷವಾಗುತ್ತದೆ’ ಎಂದರು.

ಕಲಾವಿದ ಗಣೇಶ್‌ ಆಚಾರ್‌, ‘ನಾನು ವೃತ್ತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಧ್ಯಾಪಕ. ಆದರೆ ಮನಸ್ಸು ಸೆಳೆಯುತ್ತಿರುವುದು ಕಲೆಯ ಕಡೆಗೆ. ವೇದಿಕೆಯಲ್ಲೇ ಸ್ಪೀಡ್‌ ಪೇಟಿಂಗ್‌, ನೂಲಿನ ಕಲಾಕೃತಿ ರಚನೆ ನನ್ನ ಹವ್ಯಾಸ. ಕಲ್ಲುಪ್ಪು ಬಳಸಿ ಖ್ಯಾತನಾಮರ ರಂಗೋಲಿ ಬಿಡಿಸುವ ಹೊಸ ಮಾಧ್ಯಮವನ್ನು ಅಭಿವೃದ್ಧಿಪಡಿಸಿದ್ದೇನೆ. 15x25 ಅಡಿಯ ರಂಗೋಲಿಯನ್ನೂ ರಚಿಸಿದ್ದೇನೆ. ಇಂತಹ ರಂಗೋಲಿ ತಿಂಗಳುಗಟ್ಟಲೆ ಉಳಿಯುತ್ತದೆ’ ಎಂದರು.

ಕೃಷಿಕ ಆಲ್ಬರ್ಟ್‌ ಪಿಂಟೊ, ‘ಬಡ ರೈತನ ಸಾಧನೆಯನ್ನು ಪ್ರಜಾವಾಣಿ ಗುರುತಿಸಿದೆ. ನನ್ನ ತೋಟವನ್ನು, ನಾನು ಬೆಳೆಸುತ್ತಿರುವ ಪ್ರಾಣಿಗಳನ್ನು ನೋಡಲು ಬೇರೆ ಬೇರೆ ಊರುಗಳಿಂದ ಜನ ಬರುವಾಗ ಸಂತಋಪ್ತ ಭಾವ ಮೂಡುತ್ತದೆ’ ಎಂದರು.

ಹನೀಫ್‌ ಬಳಂಜ ಅವರ ಬದಲು ಸಹೋದರ ಸಿದ್ದಿಕ್‌ ಪ್ರಶಸ್ತಿ ಸ್ವೀಕರಿಸಿದರು. ಆಂಬುಲೆನ್ಸ್‌ ಚಾಲಕ ಮಹಮ್ಮದ್‌ ಶರೀಫ್‌,‘ಪ್ರಜಾವಾಣಿ’ಯ ಮಂಗಳೂರು ಬ್ಯೂರೊ ಮುಖ್ಯಸ್ಥ ಗಣೇಶ ಚಂದನಶಿವ, ‘ಡೆಕ್ಕನ್‌ ಹೆರಾಲ್ಡ್‌’ ಮಂಗಳೂರು ಬ್ಯೂರೊ ಮುಖ್ಯಸ್ಥ ಹರ್ಷ,ಹಿರಿಯ ವರದಿಗಾರ ಉದಯ್‌ ಯು., ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.