ADVERTISEMENT

ಫಾಗಿಂಗ್ ಪರಿಹಾರವಲ್ಲ: ಲಾರ್ವಾ ನಿರ್ಮೂಲನೆ ಅಗತ್ಯ

ಮನೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ: ಡಾ.ನವೀನ್ಚಂದ್ರ ಕುಲಾಲ್‌

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:09 IST
Last Updated 22 ಮೇ 2020, 15:09 IST
ಡಾ.ನವೀನ್ಚಂದ್ರ ಕುಲಾಲ್
ಡಾ.ನವೀನ್ಚಂದ್ರ ಕುಲಾಲ್   

ಮಂಗಳೂರು: ಮಲೇರಿಯಾ, ಡೆಂಗಿಯಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಫಾಗಿಂಗ್‌ ಒಂದೇ ಪರಿಹಾರವಲ್ಲ. ಅದರ ಬದಲು ಸೊಳ್ಳೆಗಳ ಉತ್ಪತ್ತಿ ತಾಣಗಳು ಹಾಗೂ ಅಲ್ಲಿರುವ ಸೊಳ್ಳೆ ಲಾರ್ವಾಗಳ ನಿರ್ಮೂಲನೆ ಅಗತ್ಯ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್‌ ಹೇಳಿದರು.

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಜನರ ಕರೆಗಳಿಗೆ ಉತ್ತರಿಸಿದ ಅವರು, ಫಾಗಿಂಗ್ ಮಾಡುವುದರಿಂದ ಸೊಳ್ಳೆಯನ್ನು ಮಾತ್ರ ಕೊಲ್ಲಲು ಸಾಧ್ಯ. ಆದರೆ, ನಿಂತ ನೀರಿನಲ್ಲಿ ಸೊಳ್ಳೆಗಳ ಲಾರ್ವಾಗಳಿದ್ದು, ಫಾಗಿಂಗ್‌ನಿಂದ ಅವುಗಳ ನಾಶ ಆಗುವುದಿಲ್ಲ. ಹೀಗಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಬೇಕು. ಅದಕ್ಕಾಗಿ ಮನೆಯ ಸುತ್ತಲೂ ಹಾಗೂ ಮನೆ ಒಳಗೆ ಸಣ್ಣ ಪ್ರಮಾಣದಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಡಿಕೆ, ರಬ್ಬರ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕನಿಷ್ಠ ಏಳು ದಿನಕ್ಕೆ ಒಮ್ಮೆಯಾದರೂ ತೋಟಗಳನ್ನು ಸ್ವಚ್ಛ ಮಾಡಬೇಕು. ಅಲ್ಲದೇ ಮನೆಯಿಂದ ಹೊರಗೆ ಹೋಗುವವರು ಬೇವಿನ ಎಣ್ಣೆ ಸೇರಿದಂತೆ ಸೊಳ್ಳೆ ನಿರೋಧಕ ಔಷಧಿಗಳ ಲೇಪನ ಮಾಡಿಕೊಳ್ಳಬೇಕು ಎಂದರು.

ADVERTISEMENT

ಈ ಬಾರಿ ಅಗತ್ಯ ಮುಂಜಾಗ್ರತೆ: ಮಲೇರಿಯಾ, ಡೆಂಗಿ ನಿಯಂತ್ರಣಕ್ಕೆ ಇಲಾಖೆಯಿಂದ ಈ ಬಾರಿ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಅದರಿಂದಾಗಿಯೇ ಈ ಬಾರಿ ಮಲೇರಿಯಾ ರೋಗಿಗಳ ಸಂಖ್ಯೆ ಶೇ 30 ರಷ್ಟು ಕಡಿಮೆಯಾಗಿದೆ ಎಂದು ಡಾ.ನವೀನ್ಚಂದ್ರ ಕುಲಾಲ್‌ ತಿಳಿಸಿದರು.

ನಿರ್ಮಾಣ ಹಂತದ ಕಟ್ಟಡಗಳಿಗೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದು, ಸೊಳ್ಳೆ ಉತ್ಪಾದನೆ ತಾಣಗಳು ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ವರ್ಷ 1,539 ಡೆಂಗಿ ಪ್ರಕರಣ
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 1,539 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 969 ಪ್ರಕರಣಗಳು ಮಂಗಳೂರು ನಗರಕ್ಕೆ ಸಂಬಂಧಿಸಿದ್ದವು ಎಂದು ಡಾ.ನವೀನ್ಚಂದ್ರ ಕುಲಾಲ್‌ ತಿಳಿಸಿದರು.

ಜೂನ್‌ನಿಂದ ನವೆಂಬರ್‌ವರೆಗೆ ಜಿಲ್ಲೆಯಲ್ಲಿ 2 ಸಾವಿರ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಅದರಲ್ಲೂ ಮಂಗಳೂರು ನಗರದ ಪಾಲು ಹೆಚ್ಚಿನದಾಗಿತ್ತು ಎಂದರು.

ಮಲೇರಿಯಾ ಉಚಿತ ತಪಾಸಣೆ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೊಬೈಲ್‌ ಮಲೇರಿಯಾ ತಪಾಸಣೆ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಮನೆ ಬಾಗಿಲಿಗೆ ಬಂದು ರಕ್ತದ ಮಾದರಿಯನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಡಾ.ನವೀನ್ಚಂದ್ರ ಕುಲಾಲ್‌ ತಿಳಿಸಿದರು.

ಮೊ.ಸಂ. 9448556872 ಇಲ್ಲಿಗೆ ದಿನ 24 ಗಂಟೆಯೂ ಕರೆ ಮಾಡಬಹುದಾಗಿದೆ. ಆರೋಗ್ಯ ಕಾರ್ಯಕರ್ತರು ಮನೆಗೆ ಬಂದು ಉಚಿತವಾಗಿ ತಪಾಸಣೆ ಮಾಡಲಿದ್ದು, ಅಗತ್ಯ ಔಷಧಿಗಳನ್ನು ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.