ಮೂಡುಬಿದಿರೆ: ತಾಲ್ಲೂಕಿನ ಒಂಟಿಕಟ್ಟೆ, ಸ್ವರಾಜ್ಯ ಮೈದಾನ ಪರಿಸರ ಹಾಗೂ ಮಾಸ್ತಿಕಟ್ಟೆಯಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಸುಮಾರು 15 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ.
ಸ್ವರಾಜ್ಯ ಮೈದಾನದ ಬಳಿ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಇದೇ ಪರಿಸರದಲ್ಲಿರುವ ಪ್ರಶಾಂತ್, ತೇಜಸ್, ಮಹೇಶ್ ಎಂಬುವರ ಮನೆಗೂ ಹಾನಿಯಾಗಿದೆ. ಈ ಪರಿಸರದಲ್ಲಿ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮಹೇಶ್ ಎಂಬುವರ ಮನೆಯ ಹಿಂಬದಿಯಲ್ಲಿದ್ದ ತೆಂಗಿನ ಮರವೊಂದು ಬುಡ ಸಮೇತ ತುಂಡಾಗಿ ಸಮೀಪದ ಗದ್ದೆಗೆ ಬಿದ್ದಿದೆ. ಮಾಸ್ತಿಕಟ್ಟೆಯ ಅಚ್ಚಣ್ಣ ಎಂಬುವರ ಮನೆಗೂ ಭಾರಿ ಹಾನಿಯಾಗಿದ್ದು ಸಮೀಪದ ಎರಡೂ ಮನೆಗಳ ಹೆಂಚುಗಳು ಹಾರಿಹೋಗಿವೆ.
ಪೇಪರ್‌ಮಿಲ್ ಸಮೀಪ ಟ್ರಾನ್ಸ್‌ಫಾರ್ಮರ್ ಡಿ.ಪಿ. ಉರುಳಿ ಬಿದ್ದಿದೆ. ಒಂಟಿಕಟ್ಟೆಯಲ್ಲಿ ಶುಭಕರ, ಪದ್ಮನಾಭ ಎಂಬುವರ ಮನೆಗೂ ಹಾನಿಯಾಗಿದೆ. ಈ ಪರಿಸರದಲ್ಲೂ ಹಲವು ವಿದ್ಯುತ್ ಕಂಬಗಳು ಉರುಳಿವೆ. ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಪುರಸಭೆ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ, ದಿವ್ಯಾ, ಕೊರಗಪ್ಪ, ಕಂದಾಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಉರುಳಿಬಿದ್ದ ಕಂಬಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿ ನಿರತರಾಗಿದ್ದಾರೆ. ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.