ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ಜಿಲ್ಲೆಗೆ ಗರಿಮೆ

ದಕ್ಷಿಣ ಕನ್ನಡದ ಎಂಟು ಸಾಧಕರಿಗೆ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:55 IST
Last Updated 31 ಅಕ್ಟೋಬರ್ 2025, 5:55 IST
ಪ್ರಕಾಶ್‌ ರಾಜ್
ಪ್ರಕಾಶ್‌ ರಾಜ್   

ಮಂಗಳೂರು: ತಾಯ್ನೆಲದಲ್ಲೇ ನೆಲೆಸಿ ಸಾಧನೆ ಮಾಡಿದವರು, ದುಡಿಮೆಗಾಗಿ ಹೊರ ಜಿಲ್ಲೆ, ಹೊರ ದೇಶಗಳಿಗೆ ತೆರಳಿ ಆ ನೆಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಛಾಪನ್ನು ಮೂಡಿಸಿದ ಎಂಟು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಸಂಕೀರ್ಣ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಉಮೇಶ್ ಪಂಬದ ಅವರು ಮಂಗಳೂರಿನ ಕೊಂಚಾಡಿಯವರು. ಕರಾವಳಿ ಕರ್ನಾಟಕದ ದೈವಾರಾಧನೆ ಕ್ಷೇತ್ರದಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದ ದೈವಾರಾಧನೆಯಲ್ಲಿ ತೊಡಗಿಕೊಂಡು ಸುಮಾರು 45 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಟ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮೈಮ್ ರಮೇಶ್ ಅವರಿಗೆ ರಂಗಭೂಮಿ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ADVERTISEMENT

38 ವರ್ಷಗಳ ಪತ್ರಿಕೋದ್ಯಮದ ಅನುಭವ ಹೊಂದಿರುವ ಬಿ.ಎಂ. ಹನೀಫ್, ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಆರಂಭಿಸಿ, ಪದೋನ್ನತಿ ಹೊಂದಿ ಮುಖ್ಯ ಉಪಸಂಪಾದಕ ಹುದ್ದೆ ನಿರ್ವಹಿಸಿದವರು. ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ. ಬಿ.ಎಂ. ಹನೀಫ್ ಪತ್ರಿಕೋದ್ಯಮ ವಿಭಾಗದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಿರುತೆರೆ, ಚಲನಚಿತ್ರ ನಟ ಪ್ರಕಾಶ್‌ ರಾಜ್ ದಕ್ಷಿಣ ಕನ್ನಡ ಜಿಲ್ಲೆಯವರು. ರಂಗಭೂಮಿಯಲ್ಲಿ ವಿಶೇಷ ಸಾಧನೆ ಮಾಡಿರುವ ಅವರು ‘ನಿರ್ದಿಗಂತ’ದ ಮೂಲಕ ಮನೆಮಾತಾದವರು.

ಹೊರನಾಡು– ಹೊರದೇಶ ವಿಭಾಗದಲ್ಲಿ ದಕ್ಷಿಣ ಕನ್ನಡ ಮೂಲದ ಸೌದಿಯ ಉದ್ಯಮಿ ಝಕರಿಯಾ ಜೋಕಟ್ಟೆ ಹಾಗೂ ಹಾಲಿ ಮುಂಬೈ ನಿವಾಸಿ ಪಿ.ವಿ. ಶೆಟ್ಟಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೌದಿ ಅರೇಬಿಯಾ ಜುಬೈಲ್‌ನ ಅಲ್ ಮುಝೈನ್ ಕಂಪನಿಯ ಸಂಸ್ಥಾಪಕ, ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಅವರು ಬೀದಿ ಬೀದಿಯಲ್ಲಿ ಬೆಲ್ಲ ವ್ಯಾಪಾರ, ವೆಲ್ಡಿಂಗ್ ಕೆಲಸ, ಗೋಣಿ ಹೊರುವ ಕಾರ್ಮಿಕನಾಗಿ ದುಡಿದು, ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನ ತಲುಪಿದವರು. 2008ರಲ್ಲಿ ಮೂವರು ಕೆಲಸಗಾರರೊಂದಿಗೆ ಸ್ಥಾಪಿಸಿದ ಕಂಪನಿಯಲ್ಲಿ ಪ್ರಸ್ತುತ 8 ಸಾವಿರ ಉದ್ಯೋಗಿಗಳು ಇದ್ದಾರೆ. ಬಹರೈನ್, ಯುಎಇ, ಒಮಾನ್, ಕತಾರ್, ಕುವೈಟ್, ಲಂಡನ್ ಹಾಗೂ ಭಾರತದಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ.

ಬಡವರು, ಅಶಕ್ತರಿಗಾಗಿ ಮಿಡಿಯುವ ಝಕರಿಯಾ ಜೋಕಟ್ಟೆ ಅವರು ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, ‘ನಾನು ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ನನ್ನ ಕೆಲ ಸ್ನೇಹಿತರು ನನಗೆ ತಿಳಿಯದೆ ಇದರ ಹಿಂದೆ ಕೆಲಸ ಮಾಡಿ ಅಚ್ಚರಿಯ ಕೊಡುಗೆ ನೀಡಿದ್ದಾರೆ. ನಾನು ಬಡತನದಿಂದ ಬೆಳೆದು ಮೇಲೆ ಬಂದವ. ಅಶಕ್ತರ ನೋವು ಗೊತ್ತಿದೆ. ಅದಕ್ಕಾಗಿ ಸದಾ ಸ್ಪಂದಿಸುತ್ತೇನೆ’ ಎಂದಿದ್ದಾರೆ.

ವೈದ್ಯಕೀಯ ವ್ಯವಹಾರ, ಕ್ರೀಡೆ, ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಹುಮುಖಿ ಕೊಡುಗೆಗಳನ್ನು ನೀಡಿರುವ ಪಿ.ವಿ.ಶೆಟ್ಟಿ ಮುಂಬೈಯಲ್ಲಿ ಉದ್ಯಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.