ADVERTISEMENT

ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

17 ವರ್ಷದ ಬಾಲಕಿ ಮೇಲೆ ಬಟ್ಟೆ ಅಂಗಡಿ ಮಾಲೀಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 4:26 IST
Last Updated 23 ಜೂನ್ 2022, 4:26 IST
   

ಮಂಗಳೂರು: ಬಟ್ಟೆ ಅಂಗಡಿಗೆ ಕೆಲಸಕ್ಕೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಮಂಗಳೂರು ತಾಲ್ಲೂಕು ಕಂದಾವರ ಗ್ರಾಮದ ಅಬ್ದುಲ್ ಲತೀಫ್ (42) ಶಿಕ್ಷೆಗೊಳಗಾದ ವ್ಯಕ್ತಿ. ತೆಂಕ ಉಳಿಪಾಡಿ ಗ್ರಾಮದ ಕೈಕಂಬದಲ್ಲಿ ಬಟ್ಟೆ ಅಂಗಡಿ ಹೊಂದಿದ್ದ ಅಬ್ದುಲ್ ಲತೀಫ್, ಅಂಗಡಿ ಕೆಲಸಕ್ಕೆ ಬಂದಿದ್ದ 17 ವರ್ಷದ ಬಾಲಕಿ ತಲೆನೋವು ಎಂದು ಹೇಳಿದಾಗ, ಔಷಧ ತರುವುದಾಗಿ ಹೇಳಿ, ಜ್ಯೂಸ್ ಜತೆ ಮಾತ್ರೆಯನ್ನು ತಂದು ಕೊಟ್ಟಿದ್ದ. ಇದನ್ನು ಸೇವಿಸಿದ ಬಾಲಕಿ ಪ್ರಜ್ಞೆ ತಪ್ಪಿದ್ದಳು. ಆ ವೇಳೆ ಅತ್ಯಾಚಾರ ನಡೆಸಿದ ಅಬ್ದುಲ್, ಇದನ್ನು ಯಾರಿಗೂ ಹೇಳಬಾರದೆಂದು ಹೇಳಿದ್ದ. ಎಲ್ಲವನ್ನೂ ವಿಡಿಯೊ ಮಾಡಿದ್ದು, ಯಾರ ಬಳಿಯಾದರೂ ಹೇಳಿದರೆ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಆ ನಂತರ ಕೂಡ ಬಾಲಕಿಯನ್ನು ಬೆದರಿಸಿ ಆತ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಈ ಸಂಬಂಧ 2017ರ ಆಗಸ್ಟ್ 11ರಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು. ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಅಬ್ದುಲ್ ಲತೀಫ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಡಿಎನ್‌ಎ ವರದಿ, ವೈದ್ಯಕೀಯ ಪ್ರಮಾಣಪತ್ರ ಮತ್ತು ತನಿಖಾಧಿಕಾರಿಗಳ ಸಾಕ್ಷ್ಯವನ್ನು ಆಧರಿಸಿ, ಆರೋಪಿ ತಪ್ಪಿತಸ್ಥನೆಂದು ಆದೇಶಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ವಾದಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.