ADVERTISEMENT

ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಕಸರತ್ತು!

ಗೋಳಿತೊಟ್ಟು-ಉಪ್ಪಾರಪಳಿಕೆ ರಸ್ತೆಯ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 4:01 IST
Last Updated 11 ಜೂನ್ 2021, 4:01 IST
ಉಪ್ಪಿನಂಗಡಿ ಸಮೀಪ ಗೋಳಿತೊಟ್ಟು- ಉಪ್ಪಾರಪಳಿಕೆ ರಸ್ತೆ ಕೆಸರು ಗದ್ದೆಯಂತಾಗಿ ವಾಹನ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ.
ಉಪ್ಪಿನಂಗಡಿ ಸಮೀಪ ಗೋಳಿತೊಟ್ಟು- ಉಪ್ಪಾರಪಳಿಕೆ ರಸ್ತೆ ಕೆಸರು ಗದ್ದೆಯಂತಾಗಿ ವಾಹನ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ.   

ನೆಲ್ಯಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ಗೋಳಿತೊಟ್ಟು- ಉಪ್ಪಾರಪಳಿಕೆ ರಸ್ತೆ ಹದಗೆಟ್ಟಿದ್ದು, ಕೆಸರು ಗದ್ದೆಯಂತಾಗಿದೆ. ರಸ್ತೆಯಲ್ಲಿ ಪ್ರಯಾಸದಿಂದ ಸಂಚರಿಸುವ ವಾಹನ ಚಾಲಕರು ಜನಪ್ರತಿನಿಧಿಗಳಿಗೆ, ಅಧಿಕಾರಿ ಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗೋಳಿತೊಟ್ಟು- ಉಪ್ಪಾರಪಳಿಕೆ ಮೂಲಕ ಪಟ್ರಮೆ- ಧರ್ಮಸ್ಥಳ ಸಂಪರ್ಕ ಹಾಗೂ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಗೋಳಿತೊಟ್ಟುನಿಂದ ಉಪ್ಪಾರತ್ತಾರ್ ಸೇತುವೆ ತನಕ ಒಂದೂವರೆ ಕಿ.ಮೀ. ರಸ್ತೆಯಲ್ಲಿ ಡಾಂಬಾರು ಸಂಪೂರ್ಣವಾಗಿ ಎದ್ದು ಹೋಗಿದ್ದು, ಅಲ್ಲಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ರಸ್ತೆಯಲ್ಲಿ ಕೆಸರು ತುಂಬಿಕೊಂಡು ಗದ್ದೆಯಂತಾಗಿದೆ. ಅದ ರಲ್ಲೂ ಮಳೆ ಸುರಿದರೆ ರಸ್ತೆಯಲ್ಲಿ ಸಂಚರಿ ಸುವುದು ತೀರಾ ಅಪಾಯಕಾರಿ ಯಾಗಿದೆ. ಹೀಗಾಗಿ, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ವಾಹನ ಚಾಲಕರು ದೂರಿಕೊಂಡಿದ್ದಾರೆ.

‘ಈ ರಸ್ತೆ ಬೆಳ್ತಂಗಡಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹಂಚಿಕೊಂಡಿದ್ದು, ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ರಸ್ತೆಯು ಸುಸ್ಥಿತಿಯಲ್ಲಿದ್ದರೆ, ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೇವಲ ಒಂದೂವರೆ ಕಿ.ಮೀ. ಉದ್ದದ ರಸ್ತೆಯ ಭಾಗವು 2 ವರ್ಷಗಳ ಹಿಂದೆಯೇ ಡಾಂಬಾರು ಕಿತ್ತು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರಿಗೆ ಮಾಡಿರುವ ಮನವಿಗೆ ಸ್ಪಂದನೆ ದೊರೆತಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

‘ರಸ್ತೆಯ ಸಮಸ್ಯೆಯನ್ನು ಮನಗಂಡ ಸ್ಥಳೀಯ ಯುವಕರು ಶ್ರಮದಾನದ ಮೂಲಕ ರಸ್ತೆಗೆ ಮಣ್ಣು ಹಾಕಿ ಸಂಚಾರ ಯೋಗ್ಯವನ್ನಾಗಿಸಿದ್ದರು. ಆದರೆ, ಮಳೆಯಿಂದಾಗಿ ರಸ್ತೆಯು ಗದ್ದೆಯಂತಾಗಿದ್ದು, ಕೆಸರುಮಯ ವಾಗಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಜಾರುತ್ತಿವೆ. ಬಹಳಷ್ಟು ವಾಹನಗಳು ಜಾರಿಕೊಂಡು ಹೋಗಿ ಚರಂಡಿಗೆ ಬಿದ್ದು ಹಾನಿಗೊಂಡ ಪ್ರಮೇಯ ಸಂಭವಿಸಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಸಕ್ತ ಸಚಿವರೂ ಆಗಿರುವ ಸುಳ್ಯ ಶಾಸಕ ಎಸ್. ಅಂಗಾರ ಅವರ ವ್ಯಾಪ್ತಿಗೆ ಈ ರಸ್ತೆ ಬರುತ್ತಿದ್ದು, ಅವರ ಸಕಾಲಿಕ ಸ್ಪಂದನೆ ದೊರೆಯದಿರುವ ಬಗ್ಗೆಯೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.