ADVERTISEMENT

ಇನ್ನೂ ರಸ್ತೆ ಭಾಗ್ಯ ಕಾಣದ ಗುರುಪುರ ಗ್ರಾಮ ಪಂಚಾಯಿತಿ

ವ್ಯಾಪ್ತಿಯ ಬಡಕರೆ-ಕೊಳದಬದಿ-ದೇವಂದಬೆಟ್ಟು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 10:53 IST
Last Updated 22 ಅಕ್ಟೋಬರ್ 2018, 10:53 IST
ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಕರೆ, ಕೊಳದಬದಿ, ದೇವಂದಬೆಟ್ಟು ಒಳಗೊಂಡ, 50ಕ್ಕೂ ಹೆಚ್ಚು ಮನೆಗಳಿರುವ ಹಳ್ಳಿಗೆ ರಸ್ತೆಯೇ ಇಲ್ಲದೆ  ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಕರೆ, ಕೊಳದಬದಿ, ದೇವಂದಬೆಟ್ಟು ಒಳಗೊಂಡ, 50ಕ್ಕೂ ಹೆಚ್ಚು ಮನೆಗಳಿರುವ ಹಳ್ಳಿಗೆ ರಸ್ತೆಯೇ ಇಲ್ಲದೆ  ಗ್ರಾಮಸ್ಥರು ಪರದಾಡುತ್ತಿದ್ದಾರೆ.   

ಬಜ್ಪೆ: ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಕರೆ, ಕೊಳದಬದಿ, ದೇವಂದಬೆಟ್ಟು ಒಳಗೊಂಡ, 50ಕ್ಕೂ ಹೆಚ್ಚು ಮನೆಗಳಿರುವ ಹಳ್ಳಿಗೆ ರಸ್ತೆಯೇ ಇಲ್ಲ.15-20 ವರ್ಷದಿಂದಲೂ ಇಲ್ಲಿನ ಜನರುರಸ್ತೆ ನಿರ್ಮಿಸುವಂತೆ ಜನಪ್ರತಿನಿಧಿಗಳಿಗೆ ನಿರಂತರ ಮನವಿ ಸಲ್ಲಿಸುತ್ತಿದ್ದು, ಬೇಡಿಕೆ ಮುಂದುವರಿಸಿದ್ದಾರೆ.

ಸುಮಾರು 50 ಮನೆಗಳಿರುವ ಎಲ್ಲ ಹಳ್ಳಿಮೂಲೆಗೂ ರಸ್ತೆ ಸಂಪರ್ಕ ಕಲ್ಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಈ ಯೋಜನೆಯಡಿ ಈಗಾಗಲೇ ಸಾಕಷ್ಟು ರಸ್ತೆ ನಿರ್ಮಾಣವಾಗಿದೆ. ಈವರೆಗೆ ಇಲ್ಲಿ ರಸ್ತೆ ನಿರ್ಮಾಣವಾಗಿಲ್ಲ. 1974ರಲ್ಲಿ ಪ್ರವಾಹ ಪೀಡಿತ ಪ್ರದೇಶವೆಂದು ಗುರುತಿಸಲಾಗಿದ್ದರೂ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

‘ಬಡಕರೆ, ಕೊಳದಬದಿ, ದೇವಂದಬೆಟ್ಟುವಿಗೆ ಸಮೀಪ ಒಂದು ಕಡೆ ರಾಷ್ಟ್ರೀಯ ಹೆದ್ದಾರಿ-169 ಹಾಗೂ ಮತ್ತೊಂದು ಕಡೆ ಬಂಡಸಾಲೆ-ಕೈಕಂಬ ಸಂಪರ್ಕದ ಕಾಂಕ್ರೀಟ್‌ ರಸ್ತೆ ಇದ್ದರೂ, ಇಲ್ಲಿನ ಮಂದಿ ಪೇಟೆಗೆ ಹೋಗಲು ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ಶಾಲಾ ಮಕ್ಕಳು ಸೊಂಟ ಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಬೇಕಿದೆ. ಗದ್ದೆ ಹುಣಿಗಳಲ್ಲಿ ನಡೆದುಕೊಂಡು ಹೋಗಬೇಕಿದ್ದು, ಈ ದಾರಿಯಲ್ಲೂ ಆಳೆತ್ತರದ ಪೊದೆಗಂಟಿಗಳು ತುಂಬಿವೆ. ಹಾವು, ವಿಷಜಂತುಗಳ ಕಾಟವೂ ಇಲ್ಲಿದೆ. ಪ್ರತಿ ಮಳೆಗಾಲದಲ್ಲೂ ಇಲ್ಲೊಂದು ರಸ್ತೆ ನಿರ್ಮಾಣದ ಚರ್ಚೆ ನಡೆಯುತ್ತದೆ ಅಷ್ಟೇ. ಅನಾರೋಗ್ಯ ಅಥವಾ ಆಕಸ್ಮಿಕಗಳು ಸಂಭವಿಸಿದಾಗ ಈ ಹಳ್ಳಿ ಮಂದಿ ವಾಹನಗಳಿಗಾಗಿ ಪರದಾಡುವ ಸ್ಥಿತಿ ಹೇಳೆತೀರದು. ಅನಾರೋಗ್ಯ ಪೀಡಿತರು ಮತ್ತು ವಯೋವೃದ್ಧರು, ಗರ್ಭಿಣಿಯರನ್ನು ರಸ್ತೆಯವರೆಗೆ ಕೊಂಡೊಯ್ಯುವುದೇ ಇಲ್ಲಿ ಸಾಹಸದ ಕೆಲಸವಾಗಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ADVERTISEMENT

ಬಿ. ನಾಗರಾಜ ಶೆಟ್ಟಿ ಶಾಸಕರಾಗಿದ್ದಾಗ ಗುರುಪುರ ಕುಕ್ಕದಕಟ್ಟೆ ಹೆದ್ದಾರಿಯಿಂದ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ, ಬಡಕರೆ ಕೊರ್ದಬ್ಬು ದೈವಸ್ಥಾನ, ನಡುಗುಡ್ಡೆಯ ಮೂಲಕ ಹತ್ತಿರದ ಬೈಪಾಸ್ ರಸ್ತೆ ಸಂಪರ್ಕಿಸುವ ನೂತನ ರಸ್ತೆ ನಿರ್ಮಾಣ ಪ್ರಸ್ತಾವಿಸಲಾಗಿತ್ತು. ಇದಕ್ಕೆ ₹14 ಲಕ್ಷ ಮಂಜೂರಾಗಿತ್ತು. ಆಗ ಭೂಮಾಲೀಕರ ತಕರಾರಿಂದ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದು, ಮಂಜೂರು ಮೊತ್ತ ವಾಪಸ್ಸಾಗಿತ್ತು. ಬಳಿಕ ನಡೆದ ಪ್ರಯತ್ನಗಳೂ ವಿಫಲಗೊಂಡಿವೆ. ಈಗ ಶಾಸಕ ಡಾ. ಭರತ್ ಶೆಟ್ಟಿ ಅವರೆದುರು ಪ್ರಸ್ತಾವ ಬಂದಿದ್ದರೂ, ಸ್ಥಳೀಯರ ಒಮ್ಮತದ ಕೊರತೆ ಪ್ರಸ್ತಾವಕ್ಕೆ ಅಡ್ಡಿಯಾಗಿದೆ. ಆದರೂ ಈ ಬಾರಿ ಇಲ್ಲೊಂದು ರಸ್ತೆಯಾಗಬೇಕೆಂಬ ಮನವರಿಕೆಯಾಗಿರುವುದು ಎಲ್ಲರಿಗೂ ಸಂತಸ ತಂದಿದೆ’ ಸ್ಥಳೀಯರು ತಿಳಿಸಿದ್ದಾರೆ.

ಕುಕ್ಕದಕಟ್ಟೆಯಿಂದ ಮುಂದಕ್ಕೆ ಕೊಳದಬದಿಯಲ್ಲಿರುವ ಪುರಾತನ ಶ್ರೀ ಸದಾಶಿವ ದೇವಸ್ಥಾನವಾಗಿ ರಸ್ತೆಯೊಂದು ನಿರ್ಮಾಣವಾದರೆ ಖಂಡಿತವಾಗಿಯೂ ಸ್ಥಳೀಯರ ಸಮಸ್ಯೆಗೆ ಪರಿಹಾರ ನೀಡಿದಂತಾಗಲಿದೆ. ರಸ್ತೆ ನಿರ್ಮಾಣದ ಜಾಗಕ್ಕೆ ಹೊಂದಿಕೊಂಡು 1 ಎಕರೆ ವಿಸ್ತಾರದಲ್ಲಿರುವ ಕೊಳ ನವೀಕರಿಸಬೇಕಿದೆ. ಜೊತೆಗೆ ಸುತ್ತಲ ಪ್ರದೇಶದ ಅಂತರ್ಜಲ ರಕ್ಷಿಸಲು ಸಾಧ್ಯವಿದೆ. ಗುರುಪುರ ಶಾಲೆಯ ಹಿಂದುಗಡೆ ವಾಸ್ತವ್ಯದ ಸುಮಾರು 50-60 ಕುಟುಂಬಿಕರಿಗೂ ರಸ್ತೆಯೊಂದರ ಅಗತ್ಯವಿದೆ. ಗುರುಪುರದ ಈ ಎರಡೂ ಕಡೆ ಶೀಘ್ರ ಹೊಸ ರಸ್ತೆ ನಿರ್ಮಾಣವಾದಲ್ಲಿ ಸ್ಥಳೀಯರ ವರ್ಷಗಳ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.