ಮಂಗಳೂರು: 2024–25ನೇ ಸಾಲಿನಲ್ಲಿ ಸ್ತ್ರೀರೋಗ ಶಸ್ತ್ರಚಿಕಿತ್ಸಾ ಉಪಕರಣಗಳು, ಸೂಕ್ಷ್ಮ ರಂಧ್ರ ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ಒದಗಿಸುವ ಹಾಗೂ ತೀವ್ರ ನಿಗಾ ಘಟಕಗಳ ಉನ್ನತೀಕರಿಸುವ ಒಟ್ಟು ₹ 2 ಕೋಟಿ ಮೊತ್ತದ ಜಾಗತಿಕ ಅನುದಾನ ಯೋಜನೆಗಳನ್ನು ಅಂತರ ರಾಷ್ಟ್ರೀಯ ರೋಟರಿ ಸಂಸ್ಥೆಯು ಅನುಮೋದಿಸಿದೆ ಎಂದು ರೋಟರಿ ಜಿಲ್ಲೆ 3181ರ ಗವರ್ನರ್ ಕ್ಯಾ.ವಿಕ್ರಮ್ ದತ್ತ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ರೋಟರಿ ಮಂಗಳೂರು ಉತ್ತರ ವತಿಯಿಂದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ₹ 45 ಲಕ್ಷ ಮೊತ್ತದಲ್ಲಿ ತೀವ್ರ ನಿಗಾ ಘಟಕ ಆರಂಭಿಸಲಾಗುವುದು. ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಒದಗಿಸುವ ಯೋಜನೆಯನ್ನೂ ರೂಪಿಸಲಾಗಿದೆ. ಅನಾಥ ಶವಗಳನ್ನು ಸಂರಕ್ಷಿಸಿಡಲು ವೆನ್ಲಾಕ್ ಆಸ್ಪತ್ರೆಗೆ ನಾಲ್ಕು ಶೈತ್ಯಾಗಾರಗಳನ್ನು ರೋಟರಿ ವತಿಯಿಂದ ಐದು ತಿಂಗಳೊಳಗೆ ಒದಗಿಸಲಾಗುವುದು. ಐದು ವರ್ಷಗಳವರೆಗೆ ಈ ಶೈತ್ಯಾಗಾರಗಳನ್ನು ರೋಟರಿ ಸಂಸ್ಥೆ ನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದರು.
‘ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ 9 ವರ್ಷಗಳಲ್ಲಿ ₹ 20 ಕೋಟಿಗೂ ಹೆಚ್ಚು ಮೌಲ್ಯದ ಜಾಗತಿಕ ಅನುದಾನವನ್ನು ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ. ಎದೆ ಹಾಲಿನ ಬ್ಯಾಂಕ್, ಚರ್ಮ ಬ್ಯಾಂಕ್, ಕಣ್ಣಿನ ಆಸ್ಪತ್ರೆ, ತೀವ್ರ ಮತ್ತು ತುರ್ತು ನಿಗಾ ಘಟಕ ಮತ್ತು ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳ ಉನ್ನತೀಕರಣ, ಫಿಸಿಯೋಥೆರಪಿ ಕೇಂದ್ರ, ರಕ್ತ ನಿಧಿ, ಮಹಿಳಾ ಸ್ವಾಸ್ಥ್ಯಕ್ಕಾಗಿ ಸಂಚಾರ ಕ್ಲಿನಿಕ್, ಡಯಾಲಿಸಿಸ್ ಕೇಂದ್ರ ಮತ್ತು ಸಂಚಾರ ರಕ್ತ ನಿಧಿ ಸ್ಥಾಪನೆ ಮೊದಲಾದ ಯೋಜನೆಗಳು ಇದರಲ್ಲಿ ಸೇರಿವೆ’ ಎಂದರು.
ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಎಲ್ಲ ರೋಟರಿ ಕ್ಲಬ್‌ಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಮನಾರ್ಹ ಸೇವೆ ನೀಡಿವೆ. ಹಿರಿಯ ನಾಗರಿಕರ ಅಭಿವೃದ್ಧಿ, ಅಂಗನವಾಡಿಗಳಿಗೆ ಪೊತ್ಸಾಹ, ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆ, ಸಂಚಾರ ಜಾಗೃತಿ, ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ವ್ಯಸನ ಮುಕ್ತಿ ಮುಂತಾದ ಪ್ರಮುಖ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಂಗಳೂರು ಸಿಟಿಯ ಸಂಸ್ಥಾಪನಾ ಅಧ್ಯಕ್ಷ ಡಾ.ರಂಜನ್, ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಸುದೇಶ್, ಪ್ರಮುಖರಾದ ಕಿಶನ್‌ಕುಮಾರ್, ಸಮಿತ್ ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.