ADVERTISEMENT

ದಕ್ಷಿಣ ಕನ್ನಡ | ಕಾನೂನು ಕಟ್ಟು ನಿಟ್ಟು–ಶಾಂತಿಪ್ರಿಯರ ಪಟ್ಟು

ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ– ಸೌಹಾರ್ದ ಮಂತ್ರ ಜಪಿಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:59 IST
Last Updated 10 ಜುಲೈ 2025, 5:59 IST
ಮಂಗಳೂರಿನಲ್ಲಿ ಬುಧವಾರ ನಡೆದ ಸೌಹಾರ್ದ ಸಭೆಯಲ್ಲಿ ಜಿ.ಪರಮೇಶ್ವರ ಮಾತನಾಡಿದರು. ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಕ್ಯಾ.ಬ್ರಿಜೇಶ್ ಚೌಟ, ಸುಧೀರ್ ಕುಮಾರ್ ರೆಡ್ಡಿ, ಅರುಣ್ ಕೆ. ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಬುಧವಾರ ನಡೆದ ಸೌಹಾರ್ದ ಸಭೆಯಲ್ಲಿ ಜಿ.ಪರಮೇಶ್ವರ ಮಾತನಾಡಿದರು. ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಕ್ಯಾ.ಬ್ರಿಜೇಶ್ ಚೌಟ, ಸುಧೀರ್ ಕುಮಾರ್ ರೆಡ್ಡಿ, ಅರುಣ್ ಕೆ. ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಮಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ನೆಲೆಯಲ್ಲಿ ದ್ವೇಷ ಹಬ್ಬಿಸುವುದು, ಬೇರೆ ಧರ್ಮಗಳ ಅವಹೇಳನ, ಸುಳ್ಳು ಸುದ್ದಿ ಹರಡುವುದು, ದ್ವೇಷ ಭಾಷಣ...  ಜಿಲ್ಲೆಯ ಸಾಮರಸ್ಯ ಕದಡುವ ಪ್ರತಿಯೊಂದು ನಡೆಯನ್ನೂ ಮಟ್ಟ ಹಾಕಬೇಕು. ಡ್ರಗ್ಸ್‌, ಜೂಜು, ಮರಳು ದಂಧೆ ಮತ್ತಿತರ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು. ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ  ಕಾಪಾಡುವ ಕುರಿತು ಚರ್ಚಿಸಲು ಗೃಹ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ವ್ಯಕ್ತವಾದ ಒಟ್ಟಭಿಪ್ರಾಯವಿದು. ಜಿಲ್ಲೆಯ ಸೌಹಾರ್ದ ಕದಡಲು ಕಾರಣವಾದ ಅಂಶಗಳು, ಅವುಗಳನ್ನು ಹದ್ದುಬಸ್ತಿಗೆ ತರುವಲ್ಲಿ ಆಗಬೇಕಾದ ಕ್ರಮಗಳ ಕುರಿತು ವಿವಿಧ ರಾಜಕೀಯ ಪಕ್ಷದ ಮುಖಂಡರು, ವಿವಿಧ ಶಿಕ್ಷಣ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳು, ವಿವಿಧ ಸಮುದಾಯಗಳ ಮುಖಂಡರು ಸಲಹೆ ನೀಡಿದರು. ಸಮುದಾಯಗಳ ಮುಖಂಡರು ಒಡಲ ನೋವುಗಳನ್ನೂ ಹಂಚಿಕೊಳ್ಳುವುದರ ಜೊತೆಗೆ ಕಾನೂನು ಸುವ್ಯವಸ್ಥೆ ಬಲಪಡಿಸುವ ಅನಿವಾರ್ಯವನ್ನು ಒತ್ತಿ ಹೇಳಿದರು. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡುವಂತೆಯೂ ಸಲಹೆ ನೀಡಿದರು.

ಕೋಮು ಹಿಂಸೆಯಲ್ಲಿ ತೊಡಗುವವರ ಜೊತೆಗೆ ಅವರ ಮನಸ್ಸಿನಲ್ಲಿ ದ್ವೇಷ ತುಂಬುವುದಕ್ಕೆ ಕಾರಣವಾಗುವ ಸೂತ್ರಧಾರಿಗಳ ವಿರುದ್ಧವೂ ಕಾರಣವಾಗಬೇಕು. ಕೋಮು ಹತ್ಯೆಗಳಿಗೆ ಹಣಕಾಸು ನೆರವು ನೀಡುವವರನ್ನು ಗುರುತಿಸಿ ಸದೆಬಡಿಯಬೇಕು ಎಂದೂ ಕೆಲವರು ಒತ್ತಾಯಿಸಿದರು. ಸರ್ಕಾರದ ಹಾಗೂ ಪೊಲೀಸರ ನಡೆಗಳು ತಾರತಮ್ಯದಿಂದ ಕೂಡಿದ್ದರೆ ಹೇಗೆ ಅದು ಅಪನಂಬಿಕೆ ಮೂಡಿಸುತ್ತದೆ. ಗೋಹತ್ಯೆಯಂತಹ ವಿಚಾರ ಹೇಗೆ ಘರ್ಷಣೆಗೆ ಕಾರಣವಾಗುತ್ತದೆ ಎಂದು ಬಿಜೆಪಿಯ ಕೆಲ ಶಾಸಕರು ಬೊಟ್ಟು ಮಾಡಿದರು. 

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌, ‘ಸಂಘಟನೆಗಳ ಅತಿರೇಕದ ನಿಲುವು ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗಬಾರದು. ವಾಕ್‌ ಸ್ವಾತಂತ್ರ್ಯವು ಕಾನೂನು ಉಲ್ಲಂಘನೆಗೆ ಕಾರಣವಾಗದಂತೆ  ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ರಾಜಕೀಯ ಕಾರ್ಯಸೂಚಿಗಳು  ಹಿಂಸೆಗೆ, ದ್ವೇಷಕ್ಕೆ ದಾರಿ ಮಾಡಿಕೊಡಬಾರದು. ಪೊಲೀಸರು ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳುವ ಹಂತಕ್ಕೆ ಅದು ತಲುಪಬಾರದು’ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ‘ಕರಾವಳಿಯ ಪರಂಪರೆ ಜಗತ್ತಿನ ಯಾವ ಕಡೆಯೂ ಕಾಣಸಿಗದು. ಭಿನ್ನಾಭಿಪ್ರಾಯಗಳನ್ನು ದೂರ ಇಟ್ಟು ಸಾಮರಸ್ಯ  ರೂಪಿಸಲಾಗದು. ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚಿಸಿ  ಪರಿಹಾರೋಪಾಯ ಕಂಡುಕೊಳ್ಳಬೇಕು. ಯಾರೂ ಸಮಸ್ಯೆಯ ಭಾಗ ಆಗದೇ, ಪರಿಹಾರದ ಭಾಗವಾಗಬೇಕು’ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಆದ ವೈಫಲ್ಯವನ್ನು ಜಿಲ್ಲೆಯ ಜನರ ಮೇಲೆ ಹೇರಬಾರದು. ದಕ್ಷಿಣ ಕನ್ನಡ ಕೊಮು ಸೂಕ್ಷ್ಮ ಜಿಲ್ಲೆ, ಹಿಂದುತ್ವದ ಪ್ರಯೋಗಶಾಲೆ ಎಂದೆಲ್ಲ ಚಿತ್ರಿಸುವ ಪ್ರಯತ್ನಗಳು ನಿಲ್ಲಬೇಕು. ನಮ್ಮ ಪಕ್ಷದ ಸೈದ್ಧಾಂತಿಕ ವಿಚಾರವನ್ನು ಜನರ ಮುಂದಿಡುತ್ತೇವೆ. ಒಪ್ಪುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಈ ವಿಚಾರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದರೆ ಕ್ರಮ ಕೈಗೊಳ್ಳಲು ನಮ್ಮ ಆಕ್ಷೇಪವಿಲ್ಲ. ಇಲ್ಲಿ ನಡೆಯುವ ಅಕ್ರಮಗಳನ್ನು ಸರ್ಕಾರ ಮೊದಲು ಮಟ್ಟಹಾಕಬೇಕು.  ನ್ಯಾಯೋಚಿತವಾಗಿದ್ದೇವೆ ಎಂದು ತೋರಿಸಿಕೊಂಡರಷ್ಟೇ ಸಾಲದು. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು. 

ಗೃಹ ಸಚಿವ ಜಿ.ಪರಮೇಶ್ವರ, ‘ಈಚೆಗೆ ನಡೆದ ಎರಡು ಮೂರು ಹತ್ಯೆಗಳಿಂದಾಗಿ ಇಡೀ ದೇಶದ ಗಮನ ಈ ಜಿಲ್ಲೆಯತ್ತ ಹರಿಯಿತು.‌ ನಮ್ಮ ಮಕ್ಕಳು ಭಯದಲ್ಲೇ ಬದುಕಬೇಕಾ. ಇಂತಹ ಸ್ಥಿತಿ  ಮುಂದುವರಿಯಬೇಕಾ. ಇದನ್ನು ಸರಿಪಡಿಸಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಆಡಳಿತ ಚೆನ್ನಾಗಿದ್ದರೆ ಅನೇಕ ಸಮಸ್ಯೆ ಬಗೆಹರಿಯುತ್ತದೆ. ಕಾನೂನು ಕಟ್ಟುನಿಟ್ಟಿನ ಜಾರಿ ಮಾತ್ರದಿಂದ ಎಲ್ಲ ಸಮಸ್ಯೆ ಬಗೆಹರಿಯತ್ತೆ ಎನ್ನಲಾಗದು. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು. 
ದ್ವೇಷ ಭಾಷಣ, ಗೋಹತ್ಯೆ ನಿಯಂತ್ರಣಕ್ಕೆ ಈಗಿರುವ ಕಾನೂನು ಬಳಸುತ್ತೇವೆ. ಸುಳ್ಳು ಸುದ್ದಿ ಹರಡುವಿಕೆ ತಡೆಯಲು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲೇ ಹೊಸ ಮಸೂದೆ ಮಂಡಿಸುತ್ತೇವೆ. ಇದರ ಕರಡು ಸಿದ್ಧವಾಗುತ್ತಿದೆ’ ಎಂದರು.  

'ದಕ್ಷಿಣ ಕನ್ನಡ ಜಿಲ್ಲೆಗೆ ಹಣೆಪಟ್ಟಿ ಕಟ್ಟಬೇಕೆಂಬ ದುರುದ್ದೇಶದಿಂದ ಸೌಹಾರ್ದ ಸಭೆ ಕರೆದಿಲ್ಲ. ಇಂಥಹ ಜಿಲ್ಲೆ ರಾಜ್ಯದಲ್ಲಿ ಮತ್ತೊಂದಿಲ್ಲ. ಇಲ್ಲಿನವರು  ಬುದ್ಧಿವಂತರು, ಅಷ್ಟೇ ಅಲ್ಲ ಕ್ರಿಯಾಶೀಲರು. ಜಗತ್ತಿನ ಯಾವುದೇ ಕಡೆ ಬಿಟ್ಟರೂ ಬದುಕಬಲ್ಲ ಚಾಕಚಕ್ಯತೆ  ಹೊಂದಿರುವವರು. ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪಿಸಿರುವ ಜಿಲ್ಲೆ ಇದು. ರಾಜ್ಯದ ಜಿಡಿಪಿಗೆ ಜಿಲ್ಲೆಯ ಕೊಡುಗೆ ಶೇ 6ರಷ್ಟಿದೆ.  ದೇಶದ ಅರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ  ವಹಿಸಿದ ಅನೇಕ ಬ್ಯಾಂಕ್‌ಗಳನ್ನು ಕೊಟ್ಟ ಜಿಲ್ಲೆ ಇದು. ಇಲ್ಲಿ ಕೋಮು ಸೌಹಾರ್ದ ಇಲ್ಲ ಎಂದು ಹೇಳಿದ್ದು ನಾವಲ್ಲ. ಇಲ್ಲಿನವರೇ  ಹೇಳಿದ್ದು. ಇಲ್ಲೂ ಕೈಗಾರಿಕೆಗಳು ಬರಬೇಕು.  ವಾತಾವರಣ ಚೆನ್ನಾಗಿದ್ದರೆ ಮಾತ್ರ ಹೂಡಿಕೆಗೆ ಮುಂದೆ ಬರುತ್ತಾರೆ’ ಎಂದರು.

ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌, ಹರೀಶ್ ಪೂಂಜ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಅಶೋಕ್‌ ಕುಮಾರ್ ರೈ,  ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್‌ ಕೆ. ನರ್ವಾಡೆ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಭಾಗವಹಿಸಿದ್ದರು.

ಕೋಮು ಹಿಂಸಾಚಾರ– ಸೂತ್ರಧಾರರ ವಿರುದ್ಧ ಕ್ರಮಕ್ಕೆ ಒತ್ತಾಯ |ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌಹಾರ್ದ ಸಮಿತಿ ರಚನೆಗೆ ಸಲಹೆ | ಬಜರಂಗ ದಳ, ಹಿಂದೂ ಜಾಗರಣ ವೇದಿಕೆಯನ್ನು ಆಹ್ವಾನಿಸದ್ದಕ್ಕೆ ಆಕ್ಷೇಪ

‘ಡ್ರಗ್ಸ್‌ ಹಾವಳಿ– ಶಾಲಾ ಮುಖ್ಯಸ್ಥರೇ ಹೊಣೆ’

‘ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಮಾದಕ ಪದಾರ್ಥ ಹಾವಳಿ ತಡೆ ಸಮಿತಿ ರಚಿಸುವಂತೆ ಸೂಚನೆ ನೀಡಿದ್ದೇನೆ. ವಿದ್ಯಾರ್ಥಿಗಳು ಮಾದಕ ಪದಾರ್ಥ ಸೇವನೆ ಚಟಕ್ಕೆ ಬಿದ್ದರೆ ಡಗಿದರೆ ಶಾಲಾ ಮುಖ್ಯಸ್ಥರನ್ನು ಹೊಣೆ ಮಾಡುತ್ತೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು. ‘ಡ್ರಗ್ಸ್ ದಂಧೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಘೋಷಣೆ ಮಾಡಿದ್ದಾರೆ. ರಾಜ್ಯವನ್ನು ‘ಉಡ್ತಾ ಪಂಜಾಬ್‌’ ನಂತಾಗಲು ಬಿಡುವುದಿಲ್ಲ. ಮಂಗಳೂರಿನಲ್ಲಿ ಮಾತ್ರವಲ್ಲ ಇಡಿ ರಾಜ್ಯದಾದ್ಯಂತ ಡ್ರಗ್ಸ್‌ ಹಾವಳಿಯನ್ನು ನಿಯಂತ್ರಿಸುತ್ತೇವೆ ಇದಕ್ಕೆ ಎಲ್ಲರ ಸಹಕಾರ ಬೇಕು. ಈಗಾಗಲೇ ಈ ವಿಚಾರದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇನ್ನೂ ಕೆಲವು  ಕಪ್ಪು ಕುರಿಗಳು ಇವೆ. ಅವುಗಳನ್ನೂ ಸದೆಬಡಿಯುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.